ದೇವರು

ಜೀವನದ ಪಾಠ ಹೇಳಿಕೊಡುವ ನಾಮದ ಮಹಿಮೆಯ ಕಥೆಯನ್ನೊಮ್ಮೆ ಓದಿ

ಒಂದೂರಿನಲ್ಲಿ ಒಬ್ಬ ಬಡವ. ಅವನ ದಾರಿದ್ರ್ಯ ದಿನದಿಂದ ದಿನಕ್ಕೆ ಹೆಚ್ಚಾಯಿತು. ಒಂದು ದಿನ ಆ ಊರಿಗೆ ಯಾರೋ ಹರಿಕಥೆ ಮಾಡಲು ಬಂದರು. ಬಡವ ಹರಿಕಥೆ ಕೇಳಿ ದಾಸರ ಬಳಿಗೆ ಹೋದ.`ಸ್ವಾಮಿ, ನನ್ನ ಬಡತನ ಹರಿಯುವಂತೆ ಒಂದು ಉಪಾಯ ಹೇಳಿ’ ಎಂದ. ಆಗ ದಾಸರು `ನೀನು ದಿನಕ್ಕೆ ಎಷ್ಟು ಬಾರಿ ದೇವರನ್ನು ನೆನೆಯುತ್ತೀಯ?’ ಎಂದು ಕೇಳಿದರು.`ಎಷ್ಟು ಸಾರಿಯೂ ಇಲ್ಲ ಸ್ವಾಮಿ’ ಎಂಬ ಬಡವ. `ಹಾಗಾದರೆ ಒಂದು ಕೆಲಸ ಮಾಡು. ದಿನಕ್ಕೊಂದು ಬಾರಿ ಹಣ್ಣು, ಕಾಯಿ, ಗಂಧದ ಕಡ್ಡಿ, ಕರ್ಪೂರ ತೆಗೆದುಕೊಂಡು ನಿಮ್ಮೂರ ದೇವಸ್ಥಾನದಲ್ಲಿ ಪೂಜೆ ಮಾಡಿಸು’ ಎಂದರು. ಆಗ ಬಡವ `ದಿನಕ್ಕೆ ಎಷ್ಟು ದುಡ್ಡಾಗುತ್ತದೆ? ಅಷ್ಟೊಂದು ದುಡ್ಡು ಎಲ್ಲಿಂದ ತರಲಿ? ಸುಲಭವಾದ ಕೆಲಸ ಹೇಳಿ’ ಎಂದ.

`ಹಾಗಾದರೆ ದಿನಾ ದೇವಸ್ಥಾನಕ್ಕೆ ಹೋಗಿ ದೇವರ ಮುಖ ನೋಡಿಕೊಂಡು ಬಾ’ ಎಂದರು ದಾಸರು. ಬಡವನಿಗೆ ಅದೂ ಕಷ್ಟವಾಗಿ ಕಂಡಿತು. `ಏನೋ ಸ್ವಾಮಿ, ಉಳುಮೆಗೆ ಎತ್ತುಗಳನ್ನು ನೇಗಿಲಿಗೆ ಕಟ್ಟಿ ಬೇಸಾಯ ಬಿಟ್ಟು ದಿನ ದೇವಸ್ಥಾನಕ್ಕೆ ಹೋಗಲೇ? ಅದು ಸಾಧ್ಯವಿಲ್ಲ’ ಅಂದ. ಆಗ ದಾಸರು `ಒಂದು ಕೆಲಸ ಮಾಡು. ನಿಮ್ಮೂರಲ್ಲಿ ಯಾರಾದರೂ ನಾಮ ಇಕ್ಕುವವರು ಇದ್ದಾರೆಯೇ?’ ಎಂದರು. `ಇದ್ದಾರೆ’ ಎಂದ ಬಡವ. `ಹಾಗಾದರೆ ದಿನಾ ಅವರ ನಾಮ ನೋಡು’ ಎಂದರು ದಾಸರು. `ನೋಡಿ ಸ್ವಾಮಿ ಅದು ಬೇಕಾದರೆ ಮಾಡ್ತೀನಿ’ ಎಂದು ಬಡವ ಹಿಗ್ಗಿನಿಂದ ನುಡಿದ. `ನಮ್ಮ ಮನೆ ಎದುರಿಗೆ ಒಬ್ಬ ಕುಂಬಾರ ಮುದುಕ ಇದ್ದಾನೆ. ನಾನು ಬೆಳಿಗ್ಗೆ ಏಳುವ ಹೊತ್ತಿಗೆ ಅವನು ನಾಮ ಹಾಕ್ಕೊಂಡು ಬಾಗಿಲಲ್ಲಿ ಕುಳಿತಿರ್ತಾನೆ. ಅದು ಬೇಕಾದರೆ ಮಾಡ್ತೀನಿ’ ಎಂದ.

Image result for namam on forehead

ಬಡವ ಅಂದಿನಿಂದ ತಪ್ಪದೇ ಕುಂಬಾರನ ನಾಮ ನೋಡಿ ಹೋಗುತ್ತಿದ್ದ. ಹೀಗೆಯೇ ನಾಲ್ಕು, ಐದು ತಿಂಗಳು ಕಳೆದಿರಬಹುದು. ಒಂದು ದಿನ ಆ ಮುದುಕ ಮುಂಜಾನೆ ಬೇಗ ಎದ್ದು ಮಡಕೆ ಮಾಡಲು ಮಣ್ಣು ತರುವುದಕ್ಕಾಗಿ ಕೆರೆಗೆ ಹೋದ. ಎಂದಿನಂತೆ ಎದ್ದು ಬಂದ ಬಡವ ಅಜ್ಜನನ್ನು ಕಾಣದೆ ನಿರಾಶನಾದ. `ಅಜ್ಜೋ’ ಎಂದು ಅವರ ಮನೆಗೆ ಹೋಗಿ ಕೂಗಿದ. ಅಜ್ಜ ಕಾಣಲಿಲ್ಲ. ಅವನು ಕೆರೆಗೆ ಮಣ್ಣು ತರಲು ಹೋಗಿರುವ ವಿಷಯವನ್ನು ಬೇರೆಯವರಿಂದ ತಿಳಿದುಕೊಂಡ. ನಿಯಮ ತಪ್ಪದಂತೆ ನಾಮವನ್ನು ನೋಡಲು ಕೆರೆಯ ಕಡೆಗೆ ಹೋದ.

Image result for namam on forehead

ಕೆರೆಯಲ್ಲಿ ಅಜ್ಜ ಮಣ್ಣು ಅಗೆಯುತ್ತಿದ್ದ. ಅವನಿಗೆ ಮೂರು ಬಿಂದಿಗೆ ಹಣ ಸಿಕ್ಕಿತು. ಮುದುಕ ತನ್ನ ಮಗನಿಗೆ `ಮಗ! ಮೇಲಕ್ಕೆ ಎತ್ತೋ. ಇಷ್ಟು ಹೊತ್ತಿನಾಗೆ ಯಾರು ಬರ್ತಾರೆ’ ಎಂದ. ಮಗ ಬಿಂದಿಗೆಯನ್ನು ಎತ್ತಲು ಪ್ರಯತ್ನಿಸಿದ. ಅದೇ ವೇಳೆಗೆ ಏರಿಯನ್ನು ಹತ್ತಿ ಬಡವನೂ ಅಲ್ಲಿಗೆ ಬಂದ. ಅಜ್ಜನಿಗೆ ಹಣ ಸಿಕ್ಕಿರುವುದು ಅವನಿಗೆ ಗೊತ್ತಿರಲಿಲ್ಲ. ನಾಮವನ್ನು ನೋಡುವುದಕ್ಕಾಗಿ ಬಂದವನಿಗೆ ಅಜ್ಜನನ್ನು ಕಂಡು ಸಂತೋಷವಾಯಿತು. ಕೊನೆಗೂ ನಾಮವನ್ನು ನೋಡಿದೆನಲ್ಲಾ ಎನ್ನುವ ಭರದಲ್ಲಿ `ನೋಡಿದೆ’ ಎಂದು ಜೋರಾಗಿ ಕೂಗಿದ. ಅಜ್ಜ-ಅವನ ಮಗ ಇಬ್ಬರೂ ಬೆಚ್ಚಿದರು. ತಮ್ಮ ಗುಟ್ಟು ಬಯಲಾಯಿತು ಎಂದು ಬೆದರಿ `ಸ್ವಲ್ಪ ಬಾರಪ್ಪ ಇಲ್ಲಿ ನಿನಗೊಂದು ಮಾತನ್ನು ಹೇಳ್ತೀನಿ’ ಎಂದು ಅಜ್ಜ ಕೂಗಿದ. `ಇಲ್ಲ ಇಲ್ಲ ಬಿಡಯ್ಯ, ಮೂರನ್ನೂ ನೋಡಿಕೊಂಡೆ’ ಎಂದ ಬಡವ ಅಲ್ಲಿಂದಲೇ ಉತ್ತರಿಸಿದ. ಅಜ್ಜನಿಗೆ ಇನ್ನೂ ಭಯವಾಯಿತು. ಬಡವನ ಬಳಿಗೆ ಓಡಿಹೋಗಿ `ಯಾರಿಗೂ ಹೇಳಬೇಡ. ನಿನಗೂ ಅರ್ಧ ಕೊಡ್ತೀನಿ’ ಎಂದು ಬೇಡಿದ. ಬಡವನಿಗೆ ಅರ್ಥವಾಗಲಿಲ್ಲ. ಕೊನೆಗೆ ಅರ್ಧ ಹಣ ಸಿಕ್ಕಿದ ಮೇಲೆ `ಎಲ್ಲನಾಮದ ಮಹಿಮೆ’ ಎಂದುಕೊಂಡ. ಅಷ್ಟು ಹಣವನ್ನು ಮನೆಗೆ ತಂದು ಹೆಂಡತಿಗೆ ಕೊಟ್ಟ. ಸಿಕ್ಕ ಹಣದಲ್ಲಿ ಅವರು ಅನುಕೂಲವಾಗಿ ಬಾಳಿಕೊಂಡು ಹೋದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top