ಮನೋರಂಜನೆ

ಪ್ರೇಮ್ ವಿರುದ್ಧ ನಿಜವಾಗಿಯೂ ಸಿಟ್ಟಾಗಿದ್ದಾರಾ ಶಿವಣ್ಣ: ತನ್ನ ಚಿತ್ರಕ್ಕೆ ತಾನೇ ವಿಲನ್ ಆದ ಪ್ರೇಮ್.

ಗಾಂಧಿನಗರದ ತುಂಬಾ ಗಿಮಿಕ್ ರಾಜ ಎಂದೇ ಕರೆಸಿಕೊಳ್ಳುವ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಕಥೆ ಏನಾಗಿದೆ? ಈ ಚಿತ್ರ ಚಿತ್ರೀಕರಣ ಆರಂಭಿಸಿದ ಮೇಲೆ ಶುರುವಾದ ಸಿನಿಮಾಗಳೆಲ್ಲ ತೆರೆ ಕಂಡಿದ್ದರೂ ಯಾಕೆ ವಿಲನ್ ಪತ್ತೆಯಿಲ್ಲ? ಇಂಥಾ ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುತ್ತಿರಬಹುದು. ಇದಕ್ಕೆ ಮಾತಿನ ಮಲ್ಲ ಪ್ರೇಮ್ ಬಳಿ ಉತ್ತರವೂ ರೆಡಿಯಾಗಿರಬಹುದು.  ಆದರೆ ಇದೆಲ್ಲದರಾಚೆಗೆ ಇರಬಹುದಾದ ಅಸಲೀ ಸತ್ಯವೊಂದಕ್ಕೆ ಇತ್ತೀಚೆಗೆ ಟಗರು ಚಿತ್ರದ ಪ್ರೆಸ್‌ಮೀಟಿನಲ್ಲಿ ಶಿವಣ್ಣ ಆಡಿರೋ ಮಾತುಗಳು ಸಾಕ್ಷಿಯಾಗಿ ನಿಲ್ಲುತ್ತವೆ!

 

 

ಟಗರು ಚಿತ್ರದ ಸಂತೋಷ ಕೂಟದಲ್ಲಿ ಮನ ಬಿಚ್ಚಿ ಮಾತಾಡುತ್ತಿದ್ದ ಶಿವಣ್ಣನಿಗೆ ವಿಲನ್ ಚಿತ್ರದ ಬಗೆಗಿನ ಪ್ರಶ್ನೆಯೊಂದು ಪತ್ರಕರ್ತರ ಕಡೆಯಿಂದ ತೂರಿ ಬಂದಿತ್ತು. ಆ ಕ್ಷಣವೇ ಕೊಂಚ ಗಂಭೀರವಾದ ಶಿವಣ್ಣ `ಈ ಪ್ರೇಮ್ ಏನು ಮಾಡ್ತಾರೆ ಅನ್ನೋದೇ ನನಗರ್ಥವಾಗಲ್ಲ. ಕೆಲವ್ರಿಗೆ ವರ್ಷಾನುಗಟ್ಟಲೆ ಮಾಡಿದರೇನೇ ದೊಡ್ಡ ಸಿನಿಮಾ. ಅಂಥಾದ್ದು ಮಾತ್ರ ಗೆಲ್ಲುತ್ತೆ ಅಂತಿರುತ್ತೇನೋ.. ನನಗೆ ಅದರಲ್ಲಿ ನಂಬಿಕೆ ಇಲ್ಲ’ ಅಂದಿದ್ದಾರೆ.

ನಿಜ, ಶಿವಣ್ಣ ಪ್ರೇಮ್ ಬಗ್ಗೆ ನೇರವಾಗಿ ಯಾವ ಕಂಪ್ಲೇಂಟನ್ನೂ ಹೇಳಿಕೊಂಡಿಲ್ಲ. ಆದರೆ ಸ್ವಗತ ಎಂಬಂತೆ ಅವರು ಹೇಳಿರೋ ಮಾತುಗಳಲ್ಲಿ ಪ್ರೇಮ್ ಕಾರ್ಯವೈಖರಿಯ ಬಗೆಗಿನ ಅಸಮಾಧಾನವಂತೂ ಎದ್ದು ಕಾಣಿಸುತ್ತಿದೆ. ಅಷ್ಟಕ್ಕೂ ಈ ಪ್ರೇಮ್ ಮತ್ತು ಶಿವಣ್ಣನ ನಡುವೆ ಇಂಥಾ ಮುನಿಸು, ಕಿಚಾಯಿಸುವಿಕೆ ಮತ್ತು ಸ್ನೇಹದ್ದೊಂದು ಐತಿಹ್ಯವೇ ಇದೆ!

 

 

ಈ ಹಿಂದೆ ಜೋಗಯ್ಯ ಚಿತ್ರದ ಹಂತದಲ್ಲಿಯೂ ಶಿವಣ್ಣ ಹೀಗೆಯೇ ಪ್ರೇಮ್ ಬಗ್ಗೆ ಮಾತಾಡಿದ್ದರು. ಜೋಗಯ್ಯ ಚಿತ್ರದ ಬಗ್ಗೆ ಮಾಧ್ಯಮದ ಮಂದಿ ಪ್ರಶ್ನೆ ಮಾಡಿದಾಗ `ಏನೇ ಹೇಳೋಕೆ ಮುನ್ನ ಪ್ರೇಮ್ ಕಥೆ ರೆಡಿಮಾಡಿಕೊಳ್ಳಬೇಕಿದೆ’ ಎಂಬರ್ಥದಲ್ಲಿ ಮಾರ್ಮಿಕವಾಗಿ ಮಾತಾಡಿದ್ದರು.

ಬಹುಶಃ ಅಂಥಾದ್ದೇ ಒಂದು ಅಸಹನೆ ದಿ ವಿಲನ್ ಚಿತ್ರದ ವಿಚಾರದಲ್ಲಿಯೂ ಪ್ರೇಮ್ ಮೇಲೆ ಶಿವಣ್ಣನಿಗಿದ್ದಂತಿದೆ. ಇಂಥಾದ್ದೇ ಅಸಹನೆ ಕಿಚ್ಚ ಸುದೀಪ್ ಅವರಿಗೂ ಇರೋ ವಿಚಾರ ಕೆಲ ತಿಂಗಳ ಹಿಂದಷ್ಟೇ ಜಾಹೀರಾಗಿತ್ತು. ಇದಕ್ಕೆ ಕಾರಣ ಪ್ರೇಮ್ ವರಸೆ. ಊರ ತುಂಬಾ ಪ್ರಚಾರ ಮಾಡಿ ಅದೇ ಖುಷಿಯಲ್ಲಿ ಒಂದಷ್ಟು ಕಾಲ ತೇಲೇಡಿ ಮಾಡಬೇಕಿರೋ ಕೆಲಸಗಳಿಗೆ ಪರದಾಡೋದೇ ಪ್ರೇಮ್ ಚಿತ್ರಗಳು ತಡವಾಗುವುದರ ಹಿಂದಿರೋ ರಹಸ್ಯ ಅಂತ ಅವರನ್ನು ಬಲ್ಲ ಮಂದಿಯೇ ಹೇಳುತ್ತಾರೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top