fbpx
ಕ್ರಿಕೆಟ್

ವಿಕ್ರಮ್ ಇನ್‌ವೆಸ್ಟ್‌ಮೆಂಟ್ ವಂಚನೆ ಪ್ರಕರಣ₹ 4 ಕೋಟಿ ವಂಚನೆ: ದೂರು ಕೊಟ್ಟ ದ್ರಾವಿಡ್

‘ವಿಕ್ರಮ್ ಇನ್‌ವೆಸ್ಟ್‌ಮೆಂಟ್’ ಕಂಪನಿಯಿಂದ ತಮಗೆ ₹ 4 ಕೋಟಿ ವಂಚನೆಯಾಗಿದೆ ಎಂದು ಕ್ರಿಕೆಟಿಗ ರಾಹುಲ್ ದ್ರಾವಿಡ್  ಸದಾಶಿವನಗರ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದಾರೆ.

 

 

ಮಧ್ಯಾಹ್ನ 2.30ರ ಸುಮಾರಿಗೆ ಠಾಣೆಗೆ ಹಾಜರಾಗಿದ್ದ ದ್ರಾವಿಡ್, ‘ತಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಕಂಪನಿ ಆಡಳಿತ ಮಂಡಳಿ ಹೇಳಿತ್ತು. ಅದನ್ನು ನಂಬಿ 2014ರಿಂದ 2018ರ ಫೆಬ್ರುವರಿವರೆಗೆ ಹೂಡಿಕೆ ಮಾಡಿದ್ದೇನೆ. ಈಗ ಲಾಭಾಂಶವೂ ಇಲ್ಲ, ಕಟ್ಟಿದ್ದ ಮೊತ್ತವನ್ನೂ ಹಿಂದಿರುಗಿಸುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರು ಕೊಟ್ಟಿದ್ದಾರೆ.

 

ಹಣ ದುರ್ಬಳಕೆ (ಐಪಿಸಿ 403), ನಂಬಿಕೆ ದ್ರೋಹ (406) ಹಾಗೂ ವಂಚನೆ (420) ಆರೋಪಗಳಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಪ್ರಕರಣವನ್ನು ಮುಂದಿನ ತನಿಖೆಗಾಗಿ ಬನಶಂಕರಿ ಠಾಣೆಗೆ ವರ್ಗಾಯಿಸಿದ್ದಾರೆ.

 

 

‘ದ್ರಾವಿಡ್ ₹ 20 ಕೋಟಿ ಹೂಡಿಕೆ ಮಾಡಿದ್ದು, ಆರೋಪಿಗಳು ಲಾಭಾಂಶದ ರೂಪದಲ್ಲಿ ₹ 16 ಕೋಟಿಯನ್ನು ಅವರಿಗೆ ಹಿಂದಿರುಗಿಸಿದ್ದಾರೆ. ಈವರೆಗೆ ಸಾವಿರಾರು ಕೋಟಿ ವ್ಯವಹಾರ ನಡೆಸಿರುವ ಆರೋಪಿಗಳು, ಹೂಡಿಕೆ ಮಾಡಿದ್ದವರ ಪೈಕಿ ಶೇ 70ರಷ್ಟು ಮಂದಿಗೆ ಹಣ ಪೂರ್ಣವಾಗಿ ಮರಳಿಸಿದ್ದಾರೆ. ಕೇಂದ್ರ ಸರ್ಕಾರ ಹಳೇ ನೋಟುಗಳನ್ನು ರದ್ದುಗೊಳಿಸಿದ ನಂತರ ಸಂಕಷ್ಟಕ್ಕೆ ಸಿಲುಕಿದ್ದರು’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು  ಮಾದ್ಯಮಗಳಿಗೆ ತಿಳಿಸಿದರು.

 

1,800 ಜನಕ್ಕೆ ವಂಚನೆ: ‘ಆರೋಪಿಗಳು ವಿಕ್ರಮ್ ಇನ್‌ವೆಸ್ಟ್‌ಮೆಂಟ್, ವಿಕ್ರಮ್ ಗ್ಲೋಬಲ್ ಇನ್‌ವೆಸ್ಟ್‌ಮೆಂಟ್, ವಿಕ್ರಮ್ ಗ್ಲೋಬಲ್ ಸೊಲ್ಯುಷನ್ ಎಂಬ ಹೆಸರುಗಳಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಕಂಪನಿಗಳನ್ನು ತೆರೆದು ₹ 350 ಕೋಟಿಯಿಂದ ₹ 400 ಕೋಟಿ ವಂಚನೆ ಮಾಡಿದ್ದಾರೆ. ದಾಖಲೆಗಳ ಪ್ರಕಾರ 1,800 ಜನ ಈ ಕಂಪನಿಗಳಲ್ಲಿ ಹಣ ಹೂಡಿದ್ದಾರೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ತಿಳಿಸಿದರು.

 

‘ಹಣ ಕಳೆದುಕೊಂಡ ಸುಮಾರು 250 ಮಂದಿ ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟು ಹೋಗಿದ್ದಾರೆ. ಇನ್ನೂ ಹೆಚ್ಚು ದೂರುಗಳು ಬರುವ ಸಾಧ್ಯತೆ ಇದೆ. ಆರೋಪಿಗಳ ಬ್ಯಾಂಕ್ ವಿವರಗಳನ್ನು ಪರಿಶೀಲಿಸಲಾಗುತ್ತಿದ್ದು, ಯಾರುಯಾರಿಂದ ಎಷ್ಟು ಹಣ ಪಡೆದಿದ್ದಾರೆ ಹಾಗೂ ಎಷ್ಟು ಹಣ ಮರಳಿಸಿದ್ದಾರೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

 

ಕಂಪನಿ ಮಾಲೀಕ ರಾಘವೇಂದ್ರ ಶ್ರೀನಾಥ್‌ನನ್ನು ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆತನನ್ನು ಮಾರ್ಚ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು. ಪ್ರಕರಣವನ್ನು ಸೋಮವಾರ ಸಿಐಡಿಗೆ ವರ್ಗಾಯಿಸುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top