fbpx
ಚಿತ್ರ ವಿಮರ್ಶೆ

ರಾಜರಥ ಚಿತ್ರ ವಿಮರ್ಶೆ: ಸ್ಪೀಡ್ ಬ್ರೇಕರುಗಳಿದ್ದರೂ ರಾಜರಥದ ಪಯಣ ಚೇತೋಹಾರಿ!

ರಂಗಿತಂರಂಗ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಬೆರಗು ಮೂಡುವಂತೆ ಮಾಡಿದ್ದವರು ನಿರ್ದೇಶಕ ಅನೂಪ್ ಭಂಡಾರಿ. ಅವರ ಎರಡನೇ ಚಿತ್ರ ರಾಜರಥ. ಮೊದಲ ಚಿತ್ರದ ಖದರ್‌ನ ಪರಿಣಾಮವಾಗಿಯೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ರಾಜರಥ ಈಗ ಥೇಟರು ತಲುಪಿಕೊಂಡಿದೆ. ಪ್ರೇಕ್ಷಕರು ಸಣ್ಣಪುಟ್ಟ ಕೊರತೆಗಳಾಚೆಗೂ ಚೆಂದದೊಂದು ಪ್ರಯಾಣ ಮಾಡಿದಂಥಾ ತೃಪ್ತಿಯ ನಗೆ ಬೀರಿದ್ದಾರೆ.

 

 

ಒಂದು ತಂತ್ರಗಾರಿಕೆ, ಕಥೆಯನ್ನು ಜನ ಇಷ್ಟಪಟ್ಟರೆಂದರೆ ಮತ್ತದನ್ನೇ ಹಿಂದೆ ಮುಂದೆ ಮಾಡಿ ಸಿನಿಮಾ ಸೃಷ್ಟಿಸೋದು ಕಸುಬುದಾರಿಕೆಯ ಲಕ್ಷಣವಲ್ಲ. ಈ ವಿಚಾರದಲ್ಲಿ ಅನೂಪ್ ಭಂಡಾರಿ ಕಥೆ ಹೆಣೆಯುವಲ್ಲಿನ ಜಾಣ್ಮೆಯಿಂದಲೇ ತಮ್ಮ ಎರಡನೇ ಚಿತ್ರ ರಾಜರಥವನ್ನು ರೂಪಿಸಿದ್ದಾರೆ. ಇಲ್ಲಿ ಅವರು ಬೇರೆಯದ್ದೇ ಧಾಟಿಯಲ್ಲಿ ಘನ ಗಂಭೀರವಾದೊಂದು ಕಥೆಯನ್ನು ಹೇಳಿದ್ದಾರೆ. ಅದನ್ನು ತೀರಾ ಬೋರು ಹೊಡೆಸದಂತೆ ರೂಪಿಸಿರೋದು ಅನೂಪ್ ಭಂಡಾರಿಯವರ ಅಸಲೀ ಕಸುಬುದಾರಿಕೆ.

ಹೀರೋ ಮತ್ತು ಹೀರೋಯಿನ್ ಇಂಜಿನೀರಿಂಗ್ ಸ್ಟೂಡೆಂಟ್ಸ್. ಹೀರೋಯಿನ್ ಅದಾಗಲೇ ಒಂದು ಲವ್ ಬ್ರೇಕಪ್ಪಾಗಿ ಪ್ಯಾಥೋ ಮೂಡಿನಲ್ಲಿರುತ್ತಾಳೆ. ಇಂಥಾ ಹತ್ತಾರು ಪಾತ್ರಗಳನ್ನು ಹೊತ್ತ ರಾಜರಥ ಬಸ್ ಚೆನೈನತ್ತ ಪ್ರಯಾಣ ಹೊರಡುತ್ತದೆ. ಅಲ್ಲಿ ಹತ್ತಾರು ಪಾತ್ರಗಳು ಮುಖಾಮುಖಿಯಾಗುತ್ತವೆ. ಹೀರೋ ಹೀರೋಯಿನ್ ನಡುವೆಯೂ ಪ್ರೇಮಕಾವ್ಯವೊಂದು ಅರಳಿಕೊಳ್ಳುತ್ತೆ. ಇಂಥಾ ಕಥೆ ರಾಜಕೀಯ, ಹೋರಾಟ, ಗಡಿ ಗಲಾಟೆಗಳಂಥಾ ಗಂಭೀರ ವಿಚಾರ, ತಿರುವುಗಳನ್ನೂ ಒಳಗೊಂಡಿದೆ. ಇಂಥಾ ಪಾತ್ರಗಳನ್ನು ಹೊತ್ತ ರಾಜರಥ ಗಡಿ ಭಾಗದಲ್ಲಿ ಭಾಷಾವಾರು ಕಿತ್ತಾಟದ ಗಲಾಟೆಯಲ್ಲಿ ಸಿಕ್ಕಿಕೊಳ್ಳುತ್ತೆ. ಅಲ್ಲಿ ಕಥೆ ಸಿಕ್ಕಾಗುತ್ತೆ. ಇದರಿಂದ ಕಥೆಯ ಜೊತೆಗೆ ಪಾತ್ರಗಳೂ ಪಾರಾಗುತ್ತವಾ, ಅಲ್ಲಿ ಮತ್ತೇನು ನಡೆಯುತ್ತೆ ಎಂಬುದೇ ನಿಜವಾದ ಕುತೂಹಲ.

 

 

ಹಾಗೆ ನೋಡಿದರೆ ರಂಗಿತರಂಗ ಚಿತ್ರದಲ್ಲಿಯೂ ಅನೂಪ್ ಭಂಡಾರಿ ಸಂಕೀರ್ಣವಾದ, ಕಂಟೆಂಟು ತುಂಬಿರುವಂಥಾದ್ದೊಂದು ಕಥೆ ಹೇಳಿದ್ದರು. ಕೊಂಚ ಹಿಡಿತ ತಪ್ಪಿದರೂ ಇಡೀ ಚಿತ್ರವೇ ಲಯ ತಪ್ಪುವ ಅಪಾಯದಿಂದ ಪಾರು ಮಾಡಿದ್ದೇ ರಂಗಿ ತರಂಗ ಚಿತ್ರದ ಗೆಲುವಿನ ಗುಟ್ಟು. ಆದರೆ ಇಡೀ ಚಿತ್ರವನ್ನು ಅದ್ಭುತ ಎಂಬಂಥಾ ದೃಷ್ಯಗಳಿಂದ ಕಳೆಗಟ್ಟಿಸಿರುವ ನಿರ್ದೇಶಕರು ಕಥೆಯ ವಿಚಾರದಲ್ಲಿ ಅಲ್ಲಲ್ಲಿ ಹಿಡಿತ ತಪ್ಪಿ ಅಸಹಾಯಕರಾದಂತೆ ಭಾಸವಾಗುತ್ತೆ.

ಇನ್ನುಳಿದಂತೆ ನಾಯಕ ನಿರೂಪ್ ಭಂಡಾರಿ ನಟನೆಯಲ್ಲಿ ಮತ್ತಷ್ಟು ಪಳಗಿಕೊಂಡಿದ್ದಾರೆ. ಆವಂತಿಕಾಳ ನಟನೆಯ ಬಗ್ಗೆ ದೂಸ್ರಾ ಮಾತಿಲ್ಲ. ರವಿಶಂಕರ್, ತಮಿಳು ನಟ ಆರ್ಯ ಪಾತ್ರಗಳೆಲ್ಲವೂ ಹದವಾಗಿ ಬೆರೆತಿವೆ. ಕಾಮಿಡಿಯೂ ಕಚಗುಳಿ ಇಡುವಂತಿದೆ. ಛಾಯಾಗ್ರಹಣವನ್ನು ಅದ್ಬುತ ಎಂದರೆ ಅತಿಶಯೋಕ್ತಿ ಆಗಲಾರದು. ಬೆರಗಾಗಿಸುವಂಥಾ ಲೊಕೇಷನ್ನುಗಳು ಹಬ್ಬದಂತೆ ಸರಿದಾಡುತ್ತವೆ. ಸಂಗೀತವೂ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ರಾಜರಥ ಕಳಪೆಯೇನಲ್ಲ. ನಂಬಿಕೆಯಿಂದ ಥೇಟರಿಗೆ ಬಂದವರಿಗೆಲ್ಲ ರಾಜರಥ ಚೇತೋಹಾರಿಯಾದೊಂದು ಪ್ರಯಾಣದ ಅನುಭವ ನೀಡುವಲ್ಲಿ ಯಶ ಕಂಡಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top