fbpx
ಚಿತ್ರ ವಿಮರ್ಶೆ

ಯೋಗಿ ದುನಿಯಾ ಚಿತ್ರವಿಮರ್ಶೆ: ಸಂದೇಶದೊಂದಿಗೇ ತೆರೆದುಕೊಳ್ಳುವ ಕರಾಳ ಜಗತ್ತಿನ ಕಥೆ!

ದುನಿಯಾ ಚಿತ್ರದ ಲೂಸ್‌ಮಾದ ಎಂಬ ಪಾತ್ರದಿಂದಲೇ ಪರಿಚಯವಾಗಿ ನಾಯಕನಾಗಿ ನೆಲೆ ನಿಂತಿರುವಾತ ಯೋಗಿ. ಅಂಥಾ ಯೋಗಿ ಒಂದು ದಶಕದ ನಂತರ ಅದೇ ದುನಿಯಾ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿಯೇ ಒಂದು ಕುತೂಹಲ ಹುಟ್ಟುಹಾಕಿತ್ತು. ಇದೀಗ ಆ ಚಿತ್ರ ತೆರೆ ಕಂಡಿದೆ. ಮಡಿವಂತಿಕೆಯಾಚೆಯ ಕರಾಳ ಜಗತ್ತು, ಎದೆ ಝಲ್ಲೆನಿಸುವ ವಾಸ್ತವಗಳ ಹಸೀ ಹಸೀ ಪಾತ್ರಗಳ ಮೂಲಕ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿಯಾಗಿಸದೆ ಆವರಿಸಿಕೊಂಡಿದೆ.

 

 

ನಿರ್ದೇಶಕ ಹರಿ ಈ ಚಿತ್ರಕ್ಕೆ ಮುಟ್ಟಿರುವ ಕಥಾಹಂದರಕ್ಕಿಂತಲೂ ಅದನ್ನು ರೂಪಿಸಿರುವ ರೀತಿ ನಿಒಜಕ್ಕೂ ಗಮನ ಸೆಳೆಯುವಂತಿದೆ. ಈ ಚಿತ್ರದ ಕಥೆ ಬೆಂಗಳೂರಿನ ಹೃದಯದಂತಿರೋ ಮೆಜೆಸ್ಟಿಕ್ ಏರಿಯಾದಲ್ಲಿ ನಡೆಯುತ್ತದೆ. ಹೆಚ್ಚಿನ ಜನರಿಗೆ ಇಡೀ ಬೆಂಗಳೂರಿನ ಹೆಬ್ಬಾಗಿಲಿನಂತೆ ಕಾಣಿಸೋ ಮೆಜೆಸ್ಟಿಕ್ಕಿಗೊಂದು ಕರಾಳ ಗರ್ಭವಿದೆ. ಅದರೊಳಗಿನ ದಂಧೆ, ಮಾಫಿಯಾ ಮೈ ನಡುಗಿಸುವಂತಿವೆ. ಇದು ವಾಸ್ತವ.

ಇಂಥಾ ಮೆಜೆಸ್ಟಿಕ್ಕಿನಲ್ಲಿ ಟ್ರಾವೆಲ್ಸ್ ಏಜೆನ್ಸಿ ಒಂದರಲ್ಲಿ ಕೆಲಸ ಮಾಡುವ ನಾಯಕ ಯೋಗಿ. ಆತನಿಗೊಬ್ಬಳು ಪ್ರೇಯಸಿ. ಅವಳು ಶೀಲಾ. ಬಡತನದ ಕಾವಲಿಯಲ್ಲಿ ಇಡೀ ಬದುಕೇ ಬೇಯುತ್ತಿದ್ದರೂ ಯೋಗಿಯದ್ದು ಶೀಲಾಳತ್ತ ಉತ್ಕಟ ಪ್ರೇಮ. ಆದರೆ ಅದೊಂದು ಘಳಿಗೆಯಲ್ಲಿ ಶೀಲಾ ಮೆಜೆಸ್ಟಿಕ್ ಏರಿಯಾದಲ್ಲಿ ವೇಶ್ಯಾ ವೃತ್ತಿ ಮಾಡುತ್ತಿರುವಾಕೆ ಎಂಬ ಕಟು ಸತ್ಯದ ಅರಿವಾಗುತ್ತೆ. ಆದರೀತ ಪ್ರತೀ ವೇಶ್ಯೆಯ ಹಿಂದೆಯೂ ಒಂದು ಕಥೆಯಿರುತ್ತೆ. ಅದರಾಳದಲ್ಲಿ ಜೀವನದ ಅನಿವಾರ್ಯತೆ ಇರುತ್ತದೆ ಅಂತ ನಂಬಿದವನು. ಆದ ಕಾರಣವೇ ಪ್ರೀತಿಯೇ ಮುಖ್ಯ ಅಂದುಕೊಂಡು ಆಕೆಯನ್ನೇ ಮದುವೆಯಾಗಲು ಮುಂದಾಗುವ ಮನಸ್ಥಿತಿಯವನು.

 

 

ಇಂಥಾ ಯೋಗಿಗೆ ಕ್ರಿಕೆಟ್ ಬೆಟ್ಟಿಂಗ್ ಒಂದು ಖಯಾಲಿ. ಟ್ರಾವೆಲ್ಸ್ ನಲ್ಲಿ ದುಡಿಮೆ ಮಾಡಿದರೂ ಆತ ಪ್ರಧಾನವಾಗಿ ನೆಚ್ಚಿಕೊಂಡಿರೋದು ಬೆಟ್ಟಿಂಗ್ ದಂಧೆಯನ್ನೇ. ನಿರ್ದೇಶಕರು ಶೀಲಾ ಎಂಬ ಪಾತ್ರದ ಮೂಲಕ ವೇಶ್ಯಾ ದಂಧೆಯ ಕರಾಳ ಕೂಪಕ್ಕೆ ಬೆಳಕು ಚೆಲ್ಲಿದಂತೆಯೇ, ಬೆಟ್ಟಿಂಗ್ ಸುತ್ತ ಚಿತ್ರ ವಿಚಿತ್ರ ಬದುಕುಗಳನ್ನೂ ಮನ ಮಿಡಿಯುವಂತೆ ಕಟ್ಟಿ ಕೊಟ್ಟಿದ್ದಾರೆ. ಹೀಗೆ ಚಟಗಳನ್ನು ಬೆಳೆಸಿಕೊಂಡರೆ ಏನಾಗುತ್ತದೆ ಎಂಬಂಥಾ ಎಚ್ಚರಿಕೆಯ ಸಂದೇಶವನ್ನೂ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಯೋಗಿ ತಾನು ಇಳಿದಿದ್ದ ಬೆಟ್ಟಿಂಗ್ ಎಂಬ ಚಕ್ರ ಸುಳಿಯಿಂದ ಹೊರ ಬರುತ್ತಾನಾ? ಶೀಲಾಳನ್ನು ದಂಧೆಯ ಕೂಪದಿಂದ ಹೊರ ತರುತ್ತಾನಾ ಎಂಬುದು ಅಸಲೀ ಕುತೂಹಲ.

 

 

ಯೋಗಿ ನಟನೆ ಗಮನ ಸೆಳೆಯುವಂತಿದೆ. ವೇಶ್ಯೆಯಂಥಾ ಪಾತ್ರವನ್ನು ಒಪ್ಪಿಕೊಂಡು ಅದನ್ನು ಆವಾಹಿಸಿಕೊಂಡು ನಟಿಸಿರುವ ಹಿತಾ ಚಂದ್ರ ಶೇಖರ್ ಅವರನ್ನು ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಎಲ್ಲ ಪಾತ್ರಗಳೂ ಕಾಡುವಂತಿವೆ. ಕ್ಯಾಮೆರಾ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಈ ಚಿತ್ರ ಗಮನ ಸೆಳೆಯುತ್ತದೆ. ಅಲ್ಲಲ್ಲಿ ಕೊಂಚ ಬೋರು ಹೊಡೆಸುತ್ತದೆ ಎಂಬ ಕಂಪ್ಲೇಂಟನ್ನು ಹೊರತಾಗಿಸಿ ಈ ಚಿತ್ರ ಭಿನ್ನವಾಗಿ ದಾಖಲಾಗುತ್ತದೆ. ಯಾಕೆಂದರೆ, ಮೆಜೆಸ್ಟಿಕ್ ಸುತ್ತಲಿನ ವಾತಾವರಣ ಸಿನಿಮಾ ಸರಕಾಗೋದು ಮಾಮೂಲು. ಆದರೆ ಒಂದು ಚಟ, ದಂಧೆಯ ಆಳಕ್ಕಿಳಿದು ಸಂದೇಶಗಳ ಜೊತೆಗೆ ಚಿತ್ರೀಕರಿಸಿದ್ದು ಯೋಗಿ ದುನಿಯಾದ ಹೆಚ್ಚುಗಾರಿಕೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top