fbpx
ಮನೋರಂಜನೆ

ಅಸತೋಮಾ ಸದ್ಗಮಯ : ಭ್ರಮೆ ಮತ್ತು ಭಾವುಕತೆಗಳ ಸಂಘರ್ಷ

ಅದ್ಯಾವುದೋ ಭ್ರಮೆಯ ಬೆಂಬಿದ್ದಂತೆ ಕಾಣುವ, ಅತೀವ ಬುದ್ಧಿವಂತಿಕೆಯ ನಡುವೆ ಒಂಚೂರು ಸೆಂಟಿಮೆಂಟನ್ನು ಕಾಪಿಟ್ಟುಕೊಳ್ಳಲು ಮರೆತಂತೆ ಕಾಣುವ ಯುವ ಸಮೂಹ ಒಂದು ಅಚ್ಚುಕಟ್ಟಾದ ಸಿನಿಮಾ ಸರಕಾಗಲು ಖಂಡಿತಾ ಅರ್ಹವಾದದ್ದು. ರಾಜೇಶ್ ವೇಣೂರು ಅಂಥಾದ್ದೊಂದು ಸೂಕ್ಷ ಪಲ್ಲಟವನ್ನೇ ಅಂದದ ಕಥೆಯಾಗಿಸಿ ‘ಅಸತೋಮಾ ಸದ್ಗಮಯ’ ಎಂಬ ಸಿನಿಮಾ ಮಾಡಿದ್ದಾರೆ. ಬರುವ ತಿಂಗಳು ತೆರೆ ಕಾಣುವ ಸನ್ನಾಹದಲ್ಲಿರುವ ಈ ಚಿತ್ರವೀಗ ತಂತಾನೇ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ.

 

 

ಸಿನಿಮಾದ ಶೀರ್ಷಿಕೆಯೇ ಗಹನವಾದದ್ದೇನನ್ನೋ ಹೇಳ ಹೊರಟಿರುವ ಸುಳಿವು ನೀಡುವಂತಿದೆ. ಪಕ್ಕಾ ಸಿನಿಮ್ಯಾಟಿಕ್ ಆಗಿ ಗಂಭೀರವಾದ ವಿಚಾರವೊಂದನ್ನು ದೃಶ್ಯೀಕರಿಸಿದ ಭರವಸೆ ನಿರ್ದೇಶಕ ರಾಜೇಶ್ ವೇಣೂರು ಅವರದ್ದು. ಒಟ್ಟಾರೆಯಾಗಿ ಫ್ಯಾಮಿಲಿ, ಮಕ್ಕಳು, ಪಾಲಕರು ನೋಡಲೇ ಬೇಕಾದ ಸಿನಿಮಾ ಅಸತೋಮಾ ಸದ್ಗಮಯ!

ಈಗಿನ ಜನರೇಷನ್ನಿನಲ್ಲಿ ಐಕ್ಯೂ ಮಟ್ಟ ಹೆಚ್ಚಿದೆ. ಆದರೆ ಎಮೋಷನಲ್ ಅಂಶಗಳೇ ಕಡಿಮೆಯಾಗಿವೆ. ಇದರ ಜೊತೆಗೆ ಅತೀ ಬುದ್ಧಿವಂತಿಕೆ ಕಾಮನ್ ಸೆನ್ಸನ್ನೇ ನುಂಗಿದಂಥಾ ವಾತಾವರಣವಿದೆ. ಭಾರತದಂಥಾ ಸಾಮಾಜಿಕ ವಾತಾವರಣಕ್ಕೆ ಇಂಥಾ ಪಲ್ಲಟಗಳು ಒಗ್ಗುವಂಥಾದ್ದಲ್ಲ. ಹಾಗಂತ ಇಲ್ಲಿ ಬರೀ ಇಂಥಾ ಭ್ರಮೆಯ ಮನಸುಗಳು ಮಾತ್ರವೇ ಇದ್ದವೆ ಎಂದರ್ಥವಲ್ಲ. ಪಕ್ಕಾ ಭಾರತೀಯ ಶೈಲಿಯ ಭಾವುಕತೆಯನ್ನೇ ಉಸಿರಾಡುವವರೂ ಇಲ್ಲಿದ್ದಾರೆ. ಇಂಥಾ ಭಾವುಕತೆ ಮತ್ತು ಭ್ರಮೆ ಮುಖಾಮುಖಿಯಾಗುವ ಚೇತೋಹಾರಿ ಕಥೆ ಈ ಚಿತ್ರದ್ದು.

 

 

ಇಲ್ಲಿ ಮೂರು ಮುಖ್ಯವಾದ ಪಾತ್ರಗಳಿವೆ. ಈ ಚಿತ್ರದ ನಾಯಕನಾಗಿ ನಟಿಸಿರುವವರು ಕಿರಣ್ ರಾಜ್. ಈ ಹಿಂದೆ ಮಾರ್ಚ್ 22 ಚಿತ್ರದಲ್ಲಿ ನಟಿಸಿದ್ದ ಕಿರಣ್‌ಗಿದು ಎರಡನೇ ಚಿತ್ರ. ಇನ್ನು ನಾಯಕಿಯಾಗಿ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಲಾಸ್ಯಾ ನಾಗರಾಜ್ ನಟಿಸಿದ್ದಾರೆ. ಈಕೆಗಿದು ಮೊದಲ ಚಿತ್ರ. ಇವರಿಬ್ಬರದ್ದೂ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಕೈ ಚಾಚಿ ಫಾರಿನ್ನಿನತ್ತ ಮುಖ ಮಾಡುವ ಪಾತ್ರವಂತೆ. ಆದರೆ ರಾಧಿಕಾ ಚೇತನ್ ಅವರದ್ದು ಕಳೆದುಕೊಂಡ ಸಂಬಂಧಗಳನ್ನು ಅರಸುತ್ತಾ ದೂರದ ಫಿನ್‌ಲ್ಯಾಂಡಿನಿಂದ ಭಾರತಕ್ಕೆ ಮರಳುವ ಪಾತ್ರ. ಒಂದು ಬಿಂದುವಿನಲ್ಲಿ ಈ ಮೂರೂ ಪಾತ್ರಗಳು ಸಂಧಿಸುವ ಚೇತೋಹಾರಿ ಕಥಾನಕವನ್ನು ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿ ಕಟ್ಟಿ ಕೊಡಲಾಗಿದೆಯಂತೆ.

ಕರ್ನಾಟಕಸ ಪ್ರಸ್ತುತ ಶೈಕ್ಷಣಿಕ ಪದ್ಧತಿ, ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ದುರಂತಗಳ ಬಗ್ಗೆಯೂ ಇಲ್ಲಿ ಬೆಳಕು ಚೆಲ್ಲಲಾಗಿದೆಯಂತೆ. ಡ್ರಾಮಾ ಜೂನಿಯರ್ಸ್ ಖ್ಯಾತಿಯ ಬೇಬಿ ಚಿತ್ರಾಲಿ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾಳೆ. ಅಂದಹಾಗೆ ಸಿನಿಮಾವನ್ನು ಕನಸಾಗಿಸಿಕೊಂಡು ಬದುಕಿನ ಅನಿವಾರ್ಯತೆಯಿಂದ ಕಾರ್ಪೋರೇಟ್ ಜಾಹೀರಾತು ವಿಭಾಗದಲ್ಲಿ ಗುರುತಿಸಿಕೊಂಡಿದ್ದವರು ನಿರ್ದೇಶಕ ರಾಜೇಶ್ ವೇಣೂರು. ಹಲವಾರು ಸಾಕ್ಷ್ಯ ಚಿತ್ರಗಳನ್ನೂ ಮಾಡಿರುವ ಅವರು ಅಸತೋಮಾ ಸದ್ಗಮಯ ಚಿತ್ರದ ಮೂಲಕ ನಿರ್ದೇಶಕನಾಗುವ ಕನಸನ್ನು ನನಸಾಗಿಸಿಕೊಂಡಿದ್ದಾರೆ.

 

 

ಅಂದಹಾಗೆ ಬ್ಯುಸಿನೆಸ್ಮ್ಯಾನ್ ಅಶ್ವಿನ್ ಫಿರೇರಾ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿಮಾದ ಬಗ್ಗೆ ಅಪಾರವಾದ ಕನಸು ಹೊಂದಿರುವ ಅಶ್ವಿನ್ ಅವರು ಚಿತ್ರದ ಕಥೆಯಿಂದ ಖುಷಿಗೊಂಡು ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರು ನೈರುತ್ಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top