fbpx
ಮನೋರಂಜನೆ

ವೆನಿಲ್ಲಾ ಹುಡುಗ ಅವಿನಾಶ್ ಅಂತರಾಳ: ಬದುಕು ಕಾಸನ್ನು ಬಾಚಿಕೊಟ್ಟರೂ ಈತ ಅಪ್ಪಿಕೊಂಡಿದ್ದು ಬಣ್ಣವನ್ನಷ್ಟೇ!

ವೆನಿಲ್ಲಾ ಚಿತ್ರ ಇನ್ನೇನು ತೆರೆ ಕಾಣುವ ಸನ್ನಾಹದಲ್ಲಿದೆ. ಈ ಚಿತ್ರದ ಮೂಲಕ ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಅವಿನಾಶ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಸ್ಟಾರ್ ಒಬ್ಬನ ಆಗಮನವಾಗುತ್ತಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕು. ಆದರೆ ರಂಗಭೂಮಿಯಲ್ಲಿ ವರ್ಷಾಂತರಗಳ ಕಾಲ ಪಳಗಿದ, ಬದುಕನ್ನು ಜೀವನಾನುಭವದ ಕಣ್ಣುಗಳಿಂದ ದಿಟ್ಟಿಸುವ ಓರ್ವ ವಿನಯಶೀಲ ಪ್ರತಿಭಾವಂತನ ಆಗಮನವಂತೂ ಖಂಡಿತಾ ಆಗಲಿದೆ!

 

 

ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರು ಬದುಕನ್ನು ನೋಡುವ ರೀತಿಯೇ ಬೇರೆಯದ್ದಿರುತ್ತದೆ. ಆದರೆ ಅವಿನಾಶ್ ಈ ಮಾತಿಗೆ ತದ್ವಿರುದ್ಧ. ತಂದೆ ಮೈಸೂರು ಸೀಮೆಯ ಹೆಸರಾಂತ ಉದ್ಯಮಿಯಾದ ಎಸ್. ಜಯರಾಮು (ಜಯರಾಜ್). ಈ ಬಾಗದ ಲಿಕ್ಕರ್ ವ್ಯವಹಾರದಲ್ಲಿಇವರದ್ದು ದೊಡ್ಡ ಹೆಸರು. ಇಂತಾ ಶ್ರಿಮಂತಿಕೆಯ ಕುಟುಂಬದಲ್ಲಿ ಹುಟ್ಟಿದ್ದ ಅವಿನಾಶ್ ಅವರ ಪ್ರಧಾನವಾದ ಆಸೆಯಿದ್ದದ್ದೇ ನಟನೆಯತ್ತ. ಅತ್ತ ಹೆತ್ತವರ ಅಸೆಯಂತೆ ಓದಿಕೊಂಡು ಇತ್ತ ತನ್ನ ಕನಸಿನ ಹಾದಿಯತ್ತಲು ಗಮನ ಹರಿಸಿದ ಅವರನ್ನು ಅವರೊಳಗಿನ ಉತ್ಕಟ ಕಲಾ ಪ್ರೆಮವೇ ಕೈ ಹಿಡಿದು ಕರೆತಂದು ವೆನಿಲ್ಲಾ ಚಿತ್ರದ ನಾಯಕ ನಟನನ್ನಾಗಿಸಿದ್ದು ನಿಜಕ್ಕೂ ಸಿನಿಮಾದಂಥಾದ್ದೇ ರೋಚಕ ಸ್ಟೋರಿ!

ಬಿಇ ಮುಗಿಯುತ್ತಿದ್ದಂತೆಯೇ ೨೦೧೧ರಲ್ಲಿ ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋನ ಎರಡನೇ ಕಂತಿನ ಆಡಿಷನ್ ನಡೆಯುತ್ತಿತ್ತು. ಈ ಮೂಲಕ ಗುರುತಿಸಿಕೊಂಡು ಬಣ್ಣದ ಲೋಕಕ್ಕೆ ಅಡಿಯಿರಿಸುವ ಅದಮ್ಯ ಆಸೆಯೊಂದಿಗೆ ಅದರಲ್ಲಿ ಪಾಲ್ಗೊಂಡಿದ್ದ ಅವಿನಾಶ್ ಸ್ಪರ್ಧಿಯಾಗಿ ಆಯ್ಕೆಯಾದರು. ಆ ಶೋನ ಮೂಲಕವೇ ಕರ್ನಾಟಕಕ್ಕೆ ಮೊದಲ ಸಲ ಪರಿಚಯವಾದ ಅವರಿಗೆ ಆ ಶೋ ಮೂಲಕವೇ ಹಸಿವೆಂದರೇನೆಂಬುದರ ಪರಿಚಯವೂ ಆಗಿತ್ತಂತೆ. ಈ ಶೋನಿಂದ ಹೊರ ಬಂದ ನಂತರ ಅಮ್ಮನ ಆಸೆಯಂತೆ ಎಂಬಿಎ ಫೈನಾನ್ಸ್ ಓದಿ ಮುಗಿಸಿಕೊಂಡ ಅವಿನಾಶ್ ಮುಂದೆ ಉದ್ಯೋಗಾವಕಾಶಗಳು ಸಾಲುಗಟ್ಟಿ ನಿಂತಿದ್ದವು. ಅಮ್ಮ ತನ್ನ ಮಗ ಒಳ್ಳೆ ಕೆಲಸ ನೋಡಿಕೊಂಡು ಚೆನ್ನಾಗಿರಲಿ ಅಂತ ಆಶಿಸಿದರೆ, ತಂದೆ ಜಯರಾಮು ಅವರಿಗೆ ಮಗ ತಮ್ಮ ವ್ಯವಹಾರ ನೋಡಿಕೊಂಡು ಮುಂದುವರೆಸಲಿ ಎಂಬ ಬಯಕೆ. ಆದರೆ ಅವಿನಾಶ್ ಅವರ ಗುರಿ ಮಾತ್ರ ಬೇರೆಯದ್ದೇ ಇತ್ತು.

 

 

ಕೆಲಸ ಮತ್ತು ಕನಸಿನ ನಡುವೆ ಕಂಗೆಟ್ಟು ಕೂತಿದ್ದರಲ್ಲಾ ಅವಿನಾಶ್? ಅದೇ ಕಾಲಕ್ಕೆ ಸರಿಯಾಗಿ ಅಂದರೆ 2015ರಲ್ಲಿ ಮಂಡ್ಯ ರಮೇಶ್ ಅವರು ನಟನಾ ಎಂಬ ತರಬೇತಿ ಸಂಸ್ಥೆ ಆರಂಭಿಸಿದ್ದರು. ಆ ವಿಚಾರ ತಿಳಿದದ್ದೇ ಅವಿನಾಶ್ ಸೀದಾ ಹೋಗಿ ಆ ಸಂಸ್ಥೆಗೆ ಸೇರಿಕೊಂಡಿದ್ದರು. ಅವರ ಬದುಕು ಗುರಿಯ ನೇರಕ್ಕೆ ಬಂದು ನಿಂತಿದ್ದು ಆ ಕ್ಷಣದಿಂದಲೇ. ನಟನಾ ಸಂಸ್ಥೆ ಸೆರಿಕೊಂಡ ನಂತರ ಅವಿನಾಶ್ ಬದುಕೇ ಬದಲಾಗಿ ಹೋಗಿತ್ತು. ಶ್ರೀಮಂತಿಕೆಯನ್ನು ಮಾತ್ರವೇ ಕಂಡು ಕಷ್ಟದ ಪರಿಚಯವೂ ಇಲ್ಲದೆ ಬೆಳೆದಿದ್ದ ಅವಿನಾಶ್‌ಗೆ ನಟನಾ ಸಂಸ್ಥೆ ಬೆರೆಯದ್ದೇ ಲೋಕವೊಂದನ್ನು ಪರಿಚಯಿಸಿತ್ತು. ಅನ್ನದ ಬೆಲೆ ಏನೆಂಬುದು ರಿಯಾಲಿಟಿ ಶೋ ಒಂದರಿಂದಲೇ ಗೊತ್ತಾಗಿತ್ತಲ್ಲಾ? ನಟನಾ ಸಂಸ್ಥೆ ನಟನೆಯನ್ನು ಕಲಿಸೊದಕ್ಕಿಂತಲೂ ಮುನ್ನವೇ ಅಹಮ್ಮಿಕೆಯನ್ನು ಮೀರಿ ಬದುಕೋ ಪಾಠ ಕಲಿಸಿತ್ತು.

ಅಲ್ಲಿ ಅವಿನಾಶ್ ಕಲಿತಿದ್ದು ಎರಡು ವರ್ಷಗಳ ಕಾಲ. ಅವರಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ನಿಮಿತ್ತವಾಗಿ ಸರ್ಕಾರಿ ಪ್ರಾಯೋಜಿತ ನಾಟಕವನ್ನು ಮಂಡ್ಯ ರಮೇಶ್ ಅವರೇ ನಿರ್ದೇಶನ ಮಾಡಿದ್ದರು. ನಾಡ ಒಡನಾಡಿ ಎಂಬ ಈ ನಾಟಕದಲ್ಲಿ ದೇವರಾಜ ಅರಸು ಪಾತ್ರಕ್ಕೆ ಅವಿನಾಶ್ ಜೀವ ತುಂಬಿದ್ದರು. ರಾಜ್ಯದ ಹದಿನೆಂಟಕ್ಕೂ ಹೆಚ್ಚು ಕಡೆಗಳಲ್ಲಿ ಯಶಸ್ವೀ ಪ್ರದರ್ಶನ ಕಂಡ ಈ ನಾಟಕ ಸೂಪರ್ ಹಿಟ್ಟಾಗಿತ್ತು. ಈ ನಾಟಕದ ಮೂಲಕವೇ ಅವಿನಾಶ್ ಒಳಗೊಬ್ಬ ಪಳಗಿದ ನಟ ಕಾಣಿಸಿಕೊಂಡಿದ್ದ. ಈ ನಾಟಕವೇ ಅವಿನಾಶ್ ಪಾಲಿಗೆ ಚಿತ್ರರಂಗದ ಹೆಬ್ಬಾಗಿಲು ತೆರೆದದ್ದು ಅಚ್ಚರಿಯ ಕಥನ!

 

 

ಈ ನಾಟಕದಲ್ಲಿನ ಮಗನ ಅಭಿನಯ ಮತ್ತು ಅದು ಪ್ರಸಿದ್ದಿ ಪಡೆದ ರೀತಿ ಗಮನಿಸಿದ ಜಯರಾಮು ಅವರು ಒಂದು ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಗೊತ್ತಿಲ್ಲದ ಕ್ಷೇತ್ರದಲ್ಲಿ ಹಣ ಹೂಡಿ ತಂದೆ ಕೈಸುಟ್ಟುಕೊಳ್ಳಬಾರದೆಂಬ ಕಳಕಳಿಯಿಂದ ಅವಿನಾಶ್ ಆರಂಭದಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲವಂತೆ. ಅದಲ್ಲದೇ ನಟನಾಗೋ ಕನಸು ರಂಗಭೂಮಿಯಲ್ಲೇ ಸಾಕಾರಗೊಂಡಿತ್ತು. ಅದ್ದರಿಂದ ಅಲ್ಲೇ ಮುಂದುವರೆಯುವ ಇರಾದೆಯೂ ಅವರಲ್ಲಿತ್ತು. ಆದರೆ ಜಯರಾಮು ಅವರು ದೃಢ ನಿರ್ಧಾರ ಮಾಡಿಕೊಂಡಿದ್ದರು. ಅವಿನಾಶ್ ಕೂಡಾ ಒಪ್ಪಿಕೊಂಡರು. ಕಡೆಗೂ ನಿರ್ದೇಶಕರ ಹುಡುಕಾಟ ನಡೆದು ವೆನಿಲ್ಲಾ ಕಥೆ ಫೈನಲ್ ಆಯಿತು. ಬಾರೀ ಹೈಪುಗಳಿರುವ ಇಂಗ್ಲಿಷ್ ಸಿನಿಮಾಗಳನ್ನು ನೋಡುತ್ತಾ ಬಂದಿದ್ದ ಅವಿನಾಶ್ ಯಾವುದೇ ಬಿಲ್ಡಪ್ ಇಲ್ಲದ ಸಾದಾ ಸೀದಾ ಕಥೆಯೊಂದರ ಮೂಲಕ ಹೀರೋ ಆಗಿ ಲಾಂಚ್ ಆಗಬೇಕೆಂಬ ಆಸೆ ಹೊಂದಿದ್ದರಂತೆ. ವೆನಿಲ್ಲಾದ ಕಥೆ ಕೂಡಾ ಅಂಥಾದ್ದೇ.

ಅಂದಹಾಗೆ ಅವಿನಾಶ್ ಅವರದ್ದು ಚಿತ್ರದಲ್ಲಿಯೂ ಅದೇ ಹೆಸರು. ಅವರು ನಿಜವಾಗಿ ಹೇಗಿದ್ದಾರೋ ಅಂಥಾದ್ದೇ ಪಾತ್ರ ಅಚಾನಕ್ ಎಂಬಂತೆ ಅವರಿಗಾಗಿ ಸೃಷ್ಟಿಯಾಗಿದೆಯಂತೆ. ಈ ಚಿತ್ರಕ್ಕೆ ನಿರ್ದೇಶಕರು ಏನು ಕೇಳಿದರೂ ಇಲ್ಲ ಅನ್ನದೇ ಯಾವ ಕೊರತೆಯನ್ನೂ ಮಾಡದೆ ನಿರ್ಮಾಪಕರಾಗಿ ತಮ್ಮ ತಂದೆ ಪೊರೆದಿದ್ದಾರೆನ್ನುವ ಅವಿನಾಶ್, ನಿರ್ದೇಶಕರು ತನ್ನ ತಂದೆಯಂಥಾ ನಿರ್ಮಾಪಕರನ್ನು ಪಡೆಯಲು ಪುಣ್ಯ ಮಾಡಿದ್ದಾರೆಂದು ವಿಶ್ವಾಸದಿಂದಲೇ ಹೇಳುತ್ತಾರೆ.

 

 

ಅವಿನಾಶ್ ಅವರ ಮಾತು ಮತ್ತು ವರ್ತನೆಗಳಲ್ಲಿ ಮೆಚ್ಯೂರಿಟಿ ಕಾಣಿಸುತ್ತದೆ. ಕಾಸು, ಶ್ರಿಮಂತಿಕೆಯಾಚೆಗೆ ಬದುಕನ್ನು ನೋಡುವ ಅದ್ಯಾತ್ಮ ಸ್ಪರ್ಶದ ಭಾವವೂ ಕಾಣಿಸುತ್ತೆ. ಸ್ಥಿತಿವಂತ ಹುಡುಗರ ವ್ಯಕ್ತಿತ್ವದಲ್ಲಿ ಅಪರೂಪ ಎಂಬಂತಾ ಇಂತಾ ಲಕ್ಷಣಗಳು ಅವಿನಾಶ್ ಅವರಲ್ಲಿರುವುದರ ಹಿಂದೆ ಪುಟ್ಟ ವಯಸ್ಸಿನಲ್ಲಿಯೇ ಎದುರಾದ ಆಘಾತದ ನೋವಿದೆ. ಅಂದಹಾಗೆ ಅವಿನಾಶ್ ಅವರಿಗೆ ತಮ್ಮನೊಬ್ಬನಿದ್ದ. ಆತ ಅನೂಪ್. 2009ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಅನೂಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಈ ದುರಂತ ನಡೆದದ್ದು ಸರಿಯಾಗಿ ಅವಿನಾಶ್ ಅವರ ಹುಟ್ಟಿದ ದಿನದಂದೆ. ಆ ಕ್ಷಣದಿಂದ ಬದುಕನ್ನು ನೋಡುವ ರೀತಿಯೇ ಬದಲಾಯ್ತು ಅನ್ನುವ ಅವಿನಾಶ್ ಅವರೊಳಗೆ ಆ ಅಘಾತದ ಗಾಯ ಇನ್ನೂ ಹಸಿಯಾಗಿರುವಂತಿದೆ. ಆದ್ದರಿಂದಲೇ ಅವರು ಬೇರೆ ತೆರನಾಗಿಯೇ ಗೋಚರಿಸುತ್ತಾರೆ.

ತಂದೆ-ತಾಯಿ, ತಂಗಿ-ಭಾವ ಮತ್ತು ಅವರ ಪುಟ್ಟ ಪಾಪು ಜೊತೆಗಿನ ಪುಟ್ಟ ಸಂಸಾರ ಹೊಂದಿರೋ ಅವಿನಾಶ್‌ಗೆ ನಟನೆಗೆ ಅವಕಾಶವಿರುವ ಥರ ಥರದ ಪಾತ್ರಗಳನ್ನು ಮಾಡಬೇಕೆಂಬ ಹಂಬಲವಿದೆ. ವೆನಿಲ್ಲಾ ಚಿತ್ರ ಅದಕ್ಕೆ ಶ್ರೀಕಾರ ಹಾಕುತ್ತದೆ ಎಂಬ ಭರವಸೆಯೂ ಇದೆ. ಅದು ಕೈಗೂಡಲೆಂದು ಹಾರೈಸೋಣ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top