fbpx
ಸಿನಿಮಾ

ಮೈಸೂರು ಸುಧೀರ್‌ಗೆ ದರ್ಶನ್ ಅವರೇ ಸ್ಫೂರ್ತಿ

ಥರ ಥರದ ಕಷ್ಟ ಕೋಟಲೆಗಳನ್ನು ಅನುಭವಿಸಿ ಅದರನ್ನೆಲ್ಲ ಚಾಲೆಂಜಿಂಗ್ ಆಗಿ ತೆಗೆದುಕೊಂಡೇ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಮೂಲಕ ದರ್ಶನ್ ಅವರು ಯುವ ಸಮೂಹಕ್ಕೆಲ್ಲ ಸ್ಫೂರ್ತಿಯಾಗಿದ್ದಾರೆ. ಇವರನ್ನೇ ಮಾದರಿಯಾಗಿಟ್ಟುಕೊಂಡು ಸಾಧನೆಯ ಮೆಟ್ಟಿಲೇರಲು ಎದ್ದು ನಿಂತವರು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣ ಸಿಗುತ್ತಾರೆ. ರಂಗಭೂಮಿಯಲ್ಲಿ ಸಕ್ರಿಯವಾಗಿದ್ದುಕೊಂಡೇ ಇದೀಗ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಸುಧೀರ್ ಕುಮಾರ್ ಕೂಡಾ ದರ್ಶನ್ ಅವರನ್ನೇ ಮಾದರಿಯಾಗಿಟ್ಟುಕೊಂಡಿರುವವರು.

 

 

ಚಿತ್ರರಂಗಕ್ಕೆ, ರಂಗಭೂಮಿಗೆ ಸುಧೀರ್ ಚಿರಪರಿಚಿತರು. ಶಾಲಾ ಕಾಲೇಜು ದಿನಗಳಿಂದಲೇ ನಟನೆಯ ಹುಚ್ಚು ಹತ್ತಿಸಿಕೊಂಡು 1999ರಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಸುಧೀರ್ ಮೈಸೂರಿನಲ್ಲಿಯೇ ಹುಟ್ಟಿ ಬೆಳೆದವರು. ಸದಾಶಿವ ಎಂಬವರ ಮಗನಾದ ಸುಧೀರ್ ಓದೆಲ್ಲ ಮುಗಿದಾದ ನಂತರದಲ್ಲಿ ನಂಜನಗೂಡಿನ ಜ಼ೆನಿತ್ ಟೆಕ್ಸ್‌ಟೈಲ್ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆದರೆ ನಟನೆಯ ಹಂಬಲ ಆ ಕೆಲಸವನ್ನೂ ಬಿಟ್ಟು ರಂಗಭೂಮಿಯ ಸನ್ನಿಧಾನಕ್ಕೆ ತಂದು ಬಿಟ್ಟಿತ್ತು.

 

 

 

ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ಗೆಳೆಯನ ಪಾತ್ರದಲ್ಲಿಯೂ ಮಿಂಚುವ ಮೂಲಕ ಗುರುತಿಸಿಕೊಂಡು ಇದೀಗ ನಾನಾ ಪಾತ್ರಗಳನ್ನು ನಿರ್ವಹಿಸುತ್ತಿರುವವರು ಸುಧೀರ್ ಕುಮಾರ್. ಅವರು ಮೂಲತಃ ರಂಗಾಯಣದ ರಂಗಾಯಣದ ಹವ್ಯಾಸಿ ಕಲಾವಿದ. ನಂತರ ಒಂದಷ್ಟು ಗೆಳೆಯರು ಸೇರಿಕೊಂಡು ಕಟ್ಟಿದ ರಂಗಭೂಮಿ ತಂಡದಿಂದ ಅವರು ಮೊದಲು ಬಣ್ಣ ಹಚ್ಚಿದ ನಾಟಕ ‘ಬಾಡಿಗೆಮನೆ’. ಆ ನಂತರದಲ್ಲಿ ಬಸವಲಿಂಗಯ್ಯ, ಮೈಮ್ ರಮೇಶ್ ಸೇರಿದಂತೆ ಹಲವು ರಂಗಭೂಮಿ ನಿರ್ದೇಶಕರ ನಾಟಕಗಳಲ್ಲಿ ಸುಧೀರ್ ಥರ ಥರದ ಪಾತ್ರಗಳನ್ನು ಮಾಡಿದ್ದಾರೆ. ನೂರಾರು ಪ್ರದರ್ಶನ ಕಂಡ ನಾಟಕಗಳಲ್ಲಿಯೂ ಭಾಗಿಯಾಗಿದ್ದಾರೆ.

 

 

ಹೀಗೆ ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಸುಧೀರ್ ಅಖಂಡ ಇಪ್ಪತ್ತು ವರ್ಷದಿಂದ ಅಲ್ಲಿ ನಟನಾಗಿದ್ದಾರೆ. ನಾಟಕಗಳಲ್ಲಿ ನಟಿಸುತ್ತಿದ್ದರೂ ತಮ್ಮ ಊರಿನವರೇ ಆದ ದರ್ಶನ್ ಅಂದರೆ ಸುಧೀರ್‌ಗೆ ಪ್ರಾಣ. ದರ್ಶನ್ ಅವರಂತೆಯೇ ಏನಾದರೊಂದು ಸಾಧಿಸಬೇಕೆಂಬ ಛಲದಿಂದಲೇ ಅವಮಾನಗಳನ್ನೆಲ್ಲ ಮೀರಿಕೊಂಡು ಬೆಳೆದ ಅವರು ಸಿನಿಮಾ ರಂಗಕ್ಕೆ ಅಡಿಯಿರಿಸಿದ್ದು ಸ್ನೇಹಿತರ ಒತ್ತಾಸೆಯಿಂದ. ಹಾಗೆ ಚಿತ್ರರಂಗಕ್ಕೆ ಬಂದ ಸುಧೀರ್ ಶಂಕರ್ ಐಪಿಎಸ್, ಶೌರ್ಯ, ರಾಮರಾಮ ರಘು ರಾಮ, ಪಲ್ಲಟ, ಚಕ್ರವರ್ತಿ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಿರ್ದೇಶಕ ಚಿಂತನ್ ಸುಧೀರ್ ಪಾಲಿನ ಗಾಡ್ ಫಾದರ್. ಖ್ಯಾತ ಛಾಯಾಗ್ರಾಹಕ ಜೈ ಆನಂದ್ ಕೂಡಾ ಸುಧೀರ್ ಅವರಿಗೆ ಮಾರ್ಗದರ್ಶನ ನೀಡುತ್ತಿರುತ್ತಾರಂತೆ.

 

 

ಇದೀಗ ರಗಡ್ ಮತ್ತು ಗರುಡ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ಸುಧೀರ್ ಮೈಸೂರಿಗೆ ಸಿನಿಮಾ ಮಂದಿ ಯಾರೇ ಹೋದರೂ ಲೊಕೇಷನ್ ಹುಡುಕೋ ಕೆಲಸವೂ ಸೇರಿದಂತೆ ಎಲ್ಲದಕ್ಕೂ ನಿಸ್ವಾರ್ಥವಾಗಿ ಸಹಾಯ ಮಾಡುತ್ತಾರೆ. ಮೋಟಾರ್ ವೈಂಡಿಂಗ್ ಕಂಪೆನಿ ಒಂದರ ಸಣ್ಣ ಕೆಲಸವನ್ನು ಬದುಕಿಗೆ ನಂಬಿಕೊಂಡಿರುವ ಸುಧೀರ್ ನಟನಾಗಿ ಮಹತ್ತರವಾದುದನ್ನು ಸಾಧಿಸುವ ಕನಸು ಹೊಂದಿದ್ದಾರೆ. ಮಡದಿ ದೀಪಿಕಾ ಕೂಡಾ ಸುಧೀರ್ ಅವರ ಕನಸಿಗೆ ಸಾಥ್ ನೀಡುತ್ತಿದ್ದಾರೆ.

 

ಏನೇ ಕಷ್ಟ ಬಂದರೂ ಏನಾದರೊಂದು ಸಾಧಿಸೋದಕ್ಕೆ ದರ್ಶನ್ ಅವರೇ ಸ್ಫೂರ್ತಿ ಅನ್ನುವ ಮೈಸೂರು ಸುಧೀರ್ ಅವರಿಗೆ ಮತ್ತಷ್ಟು ಚೆಂದದ ಅವಕಾಶಗಳು ಸಿಗುವಂತಾಗಲಿ…

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top