fbpx
ಸಿನಿಮಾ

ಹೀಗೊಂದು ದಿನ ಸಾಗುವ ದಾರಿಯಲ್ಲಿ: ಹೀಗೊಂದು ದಿನ

ಮಗಳಿಗೆ ಮದುವೆ ಮಾಡಿಬಿಟ್ಟೆರೆ ಜವಾಬ್ದಾರಿ ತೀರುತ್ತದೆ ಎಂದು ಯೋಚಿಸುವ ತಾಯಿ. ಸಿನಿಮಾ ನಟಿಯಾಗೋದೇ ಬದುಕಿನ ಪರಮಗುರಿ ಅಂದುಕೊಂಡ ಹುಡುಗಿ. ಹುಡುಗಿ ನೋಡಲು ಗಂಡು ಬರುವ ದಿನವದು. ಬೆಳಬೆಳಿಗ್ಗೆ ಎದ್ದವಳೇ ತಾಯಿಯ ಬಳಿ ಏನೋ ಒಂದು ಸುಳ್ಳು ಹೇಳಿ ಮನೆಯಿಂದ ಆಚೆ ಹೊರಡುತ್ತಾಳೆ. ಅದು ಆಕೆಯ ಬದುಕಿಗೆ ತಿರುವು ಕೊಡಬೇಕಿರುವ ಕೆಲಸ. ಹೇಗಾದರೂ ಮಾಡಿ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಹಾಜರಾಗಬೇಕು.. ಆದರೆ, ದಾರಿಯಲ್ಲಿ ನೂರೆಂಟು ವಿಜ್ಞಗಳು. ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆ, ಸಂಕಟಗಳು.. ಎಲ್ಲವನ್ನೂ ದಾಟಿಕೊಂಡು ಆಕೆ ಅಂದುಕೊಂಡ ಸ್ಥಳಕ್ಕೆ ರೀಚ್ ಆಗ್ತಾಳಾ? ಅವಳಂದುಕೊಂಡು ಕೆಲಸ ಈಡೇರುತ್ತಾ? ಮತ್ತೆ ಸಂಜೆ ಗಂಡಿನವರು ಬರೋ ಹೊತ್ತಿಗೆ ಮನೆ ಸೇರುತ್ತಾಳಾ? ಎಂಬಿತ್ಯಾದಿ ಕುತೂಹಲಗಳು ತಣಿಯಬೇಕಾದರೆ ‘ಹೀಗೊಂದು ದಿನ’ ಸಿನಿಮಾವನ್ನೊಮ್ಮೆ ನೋಡಬೇಕು.

 

 

ಇದು ಅನ್ ಕಟ್ ಸಿನಿಮಾವಾಗಿರೋದರಿಂದ ಮತ್ತು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತುವೂ ಅದಕ್ಕೆ ಪೂರಕವಾಗಿರುವುದರಿಂದ ಥ್ರಿಲ್ ಕೊಡುವ ಕಾದಂಬರಿಯೊಂದನ್ನು ಒಂದೇ ಗುಕ್ಕಿನಲ್ಲಿ ಕೂತು ಓದಿದ ಅನುಭವ ಪ್ರೇಕ್ಷಕರದ್ದಾಗಿರುತ್ತದೆ. ಚಿತ್ರಕಥೆಯಲ್ಲಿ ಇನ್ನೊಂಚೂರು ಟ್ವಿಸ್ಟು, ಟರ್ನುಗಳನ್ನಿಟ್ಟಿದ್ದರೆ ‘ಹೀಗೊಂದು ದಿನ’ ಗಂಭೀರ ಸಿನಿಮಾ ಎನಿಸಿಕೊಳ್ಳುತ್ತಿತ್ತು. ಬಹುಶಃ ಒಂದೇ ಟೇಕಿನಲ್ಲಿ ತೆಗೆದುಬಿಡಬೇಕೆನ್ನುವ ಧಾವಂತವೇ ಚಿತ್ರಕತೆಗೆ ಮಾರಕವಾಗಿದೆಯಾ ಅಂತಲೂ ಅನ್ನಿಸಬಹುದು.

 

 

ಬೆಳಿಗ್ಗೆ ಆರರಿಂದ ಸಂಜೆ ಎಂಟರ ಹೊತ್ತಿಗೆ ನಡೆಯುವ ಕತೆ ಇದಾಗಿದ್ದು, ಈ ಬೆಳಗಿನಿಂದ ಸಂಜೆಯ ವರೆಗಿನ ಜರ್ನಿಯಲ್ಲಿ ಸಾಕಷ್ಟು ಜನ ಬಂದು ಹೋಗುತ್ತಾರೆ. ಬಂದವರೆಲ್ಲಾ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಹೋಗುತ್ತಾರೆ. ಇಡೀ ಚಿತ್ರ ನಿಂತಿರುವುದು ಸಿಂಧೂ ಲೋಕನಾಥ್ ಪಾತ್ರದ ಮೇಲೆ. ನಾಯಕನಟ ಪ್ರವೀಣ್ ‘ತನಗೆ ಸಿಗೋ ಪಾತ್ರ ಯಾವುದಾದರೂ ಸರಿ. ಅದಕ್ಕೆ ಜೀವ ತುಂಬೋದು ನನ್ನ ಕೆಲಸ’ ಅಂತಾ ಭಾವಿಸಿರೋದು ಈ ಸಿನಿಮಾದಲ್ಲೂ ಮತ್ತೊಮ್ಮೆ ತಿಳಿಯುತ್ತದೆ. ಇನ್ನು ನಟ, ನಿರ್ದೇಶಕ ಮಠ ಗುರುಪ್ರಸಾದರು ತಮ್ಮ ಸಹಜ ಅಭಿನಯ ಚಾತುರ್ಯವನ್ನು ಈ ಅನ್ ಕಟ್ ಸಿನಿಮಾದಲ್ಲೂ ಮುಂದುವರೆಸಿದ್ದಾರೆ! ಅಭಿಲಾಷ್ ಗುಪ್ತ ಅವರ ಸಂಗೀತಕ್ಕೆ ಇನ್ನೊಂದದಿಷ್ಟು ಶಕ್ತಿ ಬೇಕಿತ್ತು. ಒಂದೇ ಟೇಕಿನಲ್ಲಿ ಚಿತ್ರೀಕರಿಸಿರುವ ವಿಕ್ರಂ ಯೋಗಾನಂದ್ ಅವರ ಶ್ರಮ ನಿಜಕ್ಕೂ ದೊಡ್ಡದು. ಇಂಥದ್ದೊಂದು ನಿಜವಾದ ಪ್ರಯೋಗದ ಸಿನಿಮಾಗೆ ಹಣ ಹೂಡಿರುವ ಧಿವ್ಯದೃಷ್ಟಿ ಚಂದ್ರಶೇಖರ್ ಅವರ ಸಿನಿಮಾ ಪ್ರೀತಿ ನಿಜಕ್ಕೂ ದೊಡ್ಡದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top