fbpx
ಸಿನಿಮಾ

ಕಲ್ಪಿತ ಕಾಲೋನಿಯ ಖುಷಿ ತಮಾಷಿ ಮತ್ತು ವಾಸ್ತವ: ಜಾನಿ ಜಾನಿ ಎಸ್ ಪಪ್ಪ

ದುನಿಯಾ ವಿಜಯ್ ಮತ್ತು ಪ್ರೀತಮ್ ಗುಬ್ಬಿ ಕಾಂಬಿನೇಷನ್ ನ ಎರಡನೇ ಚಿತ್ರ ಜಾನಿ ಜಾನಿ ಎಸ್ ಪಪ್ಪ ಬಿಡುಗಡೆಯಾಗಿದೆ. ಎಲ್ಲರಿಗೂ ಗೊತ್ತಿರೋ ಹಾಗೆ ಇದು ಈ ಹಿಂದೆ ಇದೇ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಸಿನಿಮಾ ಶೈಲಿಯಲ್ಲೇ ಮೂಡಿಬಂದಿದೆ.

 

 

ನಗಿಸುವುದೇ ಜಾನಿಯ ಪರಮಗುರಿಯಾಗಿರುವುದರಿಂದ ಇಲ್ಲಿ ಲಾಜಿಕ್ಕು ಹುಡುಕ ಹೋಗಲೇಬಾರದು. ರೇನ್‌ಬೋ ಕಾಲೋನಿ ಎಂಬ ಕಲ್ಪಿತ ಬಡಾವಣೆ. ಇಲ್ಲಿನ ಪೊಲೀಸ್ ಸ್ಟೇಷನ್ನು, ರಸ್ತೆ, ಬಿಲ್ಡಿಂಗುಗಳಿಂದ ಹಿಡಿದು ಪಾತ್ರಧಾರಿಗಳ ಬಟ್ಟೆಯತನಕ ಎಲ್ಲವೂ ಕಲರ್ ಫುಲ್. ಜಾನಿ ಡಾಟ್ ಕಾಮ್ ಹೆಸರಿನ ಅಂಗಡಿ ತೆರೆದು ಕೂತು ಬಡಾವಣೆಯ ನಾಗರಿಕರಿಗೆ ಸಕಲವನ್ನೂ ಒದಗಿಸೋ ಕಾಯಕ ಹೀರೋ ಜಾನಿ ಮತ್ತು ಆತನೊಂದಿಗಿರುವ ಪಪ್ಪನ ಫುಲ್ ಟೈಮ್ ವೃತ್ತಿ. ಬಂದ ಡೀಲುಗಳನ್ನು ಪಡೆದು ನಿಯತ್ತಾಗಿ ಕಾರ್ಯ ನಿರ್ವಹಿಸುವ ಜಾನಿ ಡಾಟ್ ಕಾಮ್ ದು ಎ ಟು ಜೆಡ್ ಸರ್ವಿಸ್ ನೀಡೋ ಕಸುಬು.

 

 

ಪ್ರೀತಿಸುವವರಿಗೆ ಸಾಥ್ ಕೊಡೋದು, ಪಾಸ್ ಪೋರ್ಟು ಕಳೆದುಕೊಂಡ ವಿದೇಶಿ ಪ್ರಜೆಗೆ ಆಸರೆ ನೀಡೋದರ ಜೊತೆಗೆ ಜಗತ್ತಿನ ಎಲ್ಲ ಜೀವಗಳನ್ನೂ ಪೊರೆಯೋ ನಮ್ಮ ನಾಡಿನವರನ್ನು ವಿದೇಶಗಳಲ್ಲಿ ಪ್ರಾಣ ತೆಗೆಯೋ ಕೆಲಸ ಮಾಡಬೇಡಿ ಅನ್ನೋ ವಿನಮ್ರ ವಿನಂತಿಯಂತಾ ಹಲವಾರು ಮೆಸೇಜುಗಳು ಜಾನಿ ಜರ್ನಿಯಲ್ಲಿ ಬಂದುಹೋಗುತ್ತವೆ. ಈ ನಡುವೆ ಹೀರೋಯಿನ್‌ಗೆ ಮನೆ ಹುಡುಕಿಕೊಡುವ ಜಾನಿಗೆ ಅವಳ ಮೇಲೇ ಲವ್ವು. ಇನ್ನೇನು ಜೋಡಿ ಸಿಕ್ಕಿತು ಅನ್ನೋ ಖುಷಿಲ್ಲಿರೋವಾಗಲೇ ಹುಡುಗಿ ಅಮೆರಿಕಕ್ಕೆ ಹೋಗಿ ಸೆಟಲ್ ಆಗಲು ತುದಿಗಾಲಲ್ಲಿ ನಿಲ್ಲುತ್ತಾಳೆ. ಅದು ಸ್ವತಃ ಆಕೆಯ ತಂದೆಗೂ ಇಷ್ಟವಿರೋದಿಲ್ಲ. ಆಕೆ ಅಮೆರಿಕಕ್ಕೆ ಹೋಗೋದನ್ನು ತಪ್ಪಿಸುವ ಜವಾಬ್ದಾರಿಯುತ ಡೀಲು ಕೂಡಾ ಜಾನಿ ಡಾಟ್ ಕಾಮ್ ಪಾಲಾಗುತ್ತದೆ.

 

 

ಆಕೆಗೆ ಗೊತ್ತಿಲ್ಲದೆಯೇ ಆಕೆಯ ಅಮೆರಿಕ ಪಯಣವನ್ನು ಮೊಟಕುಗೊಳಿಸುವ ಮಾಸ್ಟರ್ ಪ್ಲಾನು ಮಾಡುವ ಜಾನಿ ಅಂಡ್ ಕಂಪನಿಯ ಟ್ರಿಕ್ಕುಗಳು ವರ್ಕ್ ಔಟ್ ಆಗುತ್ತವಾ? ಅಥವಾ ಆಕೆಗೆ ಇವರ ಅಸಲಿಯತ್ತು ಗೊತ್ತಾಗಿ ದೊಡ್ಡ ಯಡವಟ್ಟು ಸಂಭವಿಸುತ್ತದಾ ಅನ್ನೋದನ್ನು ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.

ಮೇಲ್ನೋಟಕ್ಕೆ ಇದು ಕಾಮಿಡಿ ದೃಷ್ಯಗಳಿಂದ ಪೋಣಿಸಿದ ಸಿನಿಮಾದಂತೆ ಕಾಣಿಸಿದರೂ ಇವತ್ತಿನ ಕಾಲಘಟ್ಟದ ಹಲವಾರು ಸಮಸ್ಯೆಗಳನ್ನು, ಮನೋ ವ್ಯಾಕುಲಗಳನ್ನು ತೆರೆದಿಡುವ ಗಂಭೀರ ಅಂಶಗಳನ್ನು ಒಳಗೊಂಡಿದೆ. ನೋಡುಗರನ್ನು ನಗುನಗಿಸುತ್ತಲೇ `ಹೌದಲ್ವಾ’ ಎನ್ನುವ ಚಿಂತನೆಗೆ ಹಚ್ಚುತ್ತದೆ.

 

 

ದುನಿಯಾ ವಿಜಿ ಪಕ್ಕಾ ಆಕ್ಷನ್ ಹೀರೋ ಆಗಿಯೂ ನಟಿಸಬಲ್ಲರು ಕಾಮಿಡಿ ಹೀರೋ ಆಗಿ ಕೂಡಾ ನೋಡುಗರನ್ನು ಮೆಚ್ಚಿಸಬಲ್ಲರು ಅನ್ನೋದು `ಜಾನಿಜಾನಿ ಎಸ್ ಪಪ್ಪ’ದ ಮೂಲಕ ಮತ್ತೊಮ್ಮೆ ರುಜುವಾತಾಗಿದೆ. ರಂಗಾಯಣ ರಘು ಪಾತ್ರಕ್ಕೆ ಬೇಕಿರುವ ನಟನೆಯನ್ನಷ್ಟೇ ಮಾಡಿರೋದು ಗಮನಿಸಲೇಬೇಕಾದ ಅಂಶ. ನಾಯಕಿ ರಚಿತಾರಾಮ್ ಫುಲ್ ಎನರ್ಜಿಯ ನಟನೆಯೊಂದಿಗೆ ದುನಿಯಾ ವಿಜಯ್ ಅವರಿಗೆ ಸಾಥ್ ನೀಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ಕು ಚೆನ್ನಾಗಿದೆ. ಅಚ್ಯುತ್ ಕುಮಾರ್ ಅವರ ನಟನೆ ಎಂದಿನಂತೆ ಪರ್ಫೆಕ್ಟ್. ಇಂಥದ್ದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವನ್ನು ನಿಭಾಯಿಸುವಲ್ಲಿ ನಿರ್ದೇಶಕ ಪ್ರೀತಂ ಗುಬ್ಬಿ ಗೆದ್ದಿದ್ದಾರೆ.

ರಂಜನೀಯ ಸಿನಿಮಾಗಳಿಗಾಗಿ ಕಾದು ಕೂತ ಪ್ರೇಕ್ಷಕರು ಮುಲಾಜಿಲ್ಲದೆ ಒಮ್ಮೆ ನೋಡಿಬರಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top