fbpx
ಸಮಾಚಾರ

ತೀವ್ರ ಚರ್ಚೆಗೆ ಕಾರಣವಾದ ಕಿಚ್ಚಾ ಸುದೀಪ್- ಎಚ್’ಡಿಕೆ ಭೇಟಿ!

ಇನ್ನೇನು ವಿಧಾನಸಭಾ ಚುನಾವಣೆಗೆ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಬಾರಿ ರಾಜಕೀಯದ ರಂಗು ಚಿತ್ರರಂಗದಲ್ಲಿಯೂ ತುಸು ಹೆಚ್ಚೇ ಪ್ರತಿಫಲಿಸುತ್ತಿದೆ. ನಾನಾ ರಾಜಕೀಯ ಪಕ್ಷಗಳ ತಮ್ಮ ಪರವಾಗಿ ನಟ ನಟಿಯರನ್ನು ಪ್ರಚಾರಕ್ಕೆ ಸೆಳೆದುಕೊಳ್ಳುವ ಕಸರತ್ತನ್ನೂ ತೀವ್ರಗೊಳಿಸಿವೆ. ಹೀಗಿರುವಾಗಲೇ ಸ್ಯಾಂಡಲ್ ವುಡ್’ನ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಜೆಡಿಎಸ್ ಪರ ಮತಯಾಚನೆ ಮಾಡಲು ಕಿಚ್ಚನಿಗೆ ಮನವಿ ಮಾಡಲಾಗಿದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

 

 

ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದೆ. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಬಲು ಜೋರಾಗಿದೆ. ಆ ಸ್ಟಾರ್ ರಾಜಕೀಯಕ್ಕಿಳೀತಾರೆ, ಮತ್ಯಾರಿಗೋ ಟಿಕೆಟು ಪಕ್ಕಾ ಆಗಿದೆ ಎಂಬೆಲ್ಲ ರೂಮರ್ ಮಾಮೂಲಿ. ಆದರೆ ಈ ಸಲ ಈ ರೇಸಿನಲ್ಲಿ ಕಿಚ್ಚಾ ಸುದೀಪ್ ಅವರ ಹೆಸರೂ ಚಾಲ್ತಿಯಲ್ಲಿರೋದು ನಿಜವಾದ ವಿಶೇಷ!

 

 

ಸುದೀಪ್ ರಾಜಕೀಯಕ್ಕೆ ಬರುತ್ತಾರೆಂಬ ಅಂತೆ ಕಂತೆಯಾಗಲಿ, ಅವರನ್ನು ಸೆಳೆದುಕೊಳ್ಳಲು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಒಳಗೊಳಗೇ ಕಸರತ್ತು ನಡೆಸೋದಾಗಲಿ ಹೊಸದೇನೂ ಅಲ್ಲ. ಆದರೆ ಒಂದು ಮೂಲದ ಪ್ರಕಾರ ಈ ಸಲ ಸುದೀಪ್ ಅವರು ತಮ್ಮ ಸ್ನೇಹಿತರ ಮತ್ತು ತಮಗೆ ಬೇಕಾದವರ ಪರವಾಗಿ ಪ್ರಚಾರ ನಡೆಸೋದಂತೂ ಗ್ಯಾರಂಟೀಯಂತೆ.

 

 

ಬೆಂಗಳೂರಿನ ಜೆಪಿ ನಗರದ ಕುಮಾರಸ್ವಾಮಿ ನಿವಾಸಕ್ಕೆ ನಟ ಸುದೀಪ್ ಅವರು ತೆರಳಿದ್ದು ಸಾಕಷ್ಟು ವಿಷಯಗಳ ಬಗ್ಗೆ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಪುತ್ರ ನಿಖಿಲ್, ಪತ್ನಿ ಅನಿತಾ ಕುಮಾರಸ್ವಾಮಿ ಅವರೂ ಕೂಡ ಇದ್ದರು. ಅಲ್ಲದೇ ಕುಮಾರಸ್ವಾಮಿ ನಿವಾಸದಲ್ಲೇ ಸುದೀಪ್ ಉಪಾಹಾರ ಕೂಡ ಮುಗಿಸಿದ್ದಾರೆ. ಸುದೀಪ್ ಕುಮಾರಸ್ವಾಮಿ ಭೇಟಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪಕ್ಷದ ಸ್ಟಾರ್ ಪ್ರಚಾರಕರಾಗಿ ಜೆಡಿಎಸ್ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

 

 

ಈ ಹಿಂದೆ ಸುದೀಪ್ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ, ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ, ಜೆಡಿಎಸ್ ಸೇರಿಕೊಳ್ಳುತ್ತಾರೆ ಎಂಬ ತರತರಾ ರೂಮರುಗಳು ರಾಜಕೀಯದ ವಲವದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿದ್ದವು. ಆದರೆ ಈ ಯಾವ ಸುದ್ದಿಗಳಿಗೂ ಕಿಚ್ಚ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿಂದೆ ಕುಮಾರಸ್ವಾಮಿ ಅವರು ತಮ್ಮ ಹುಟ್ಟಿದ ದಿನದಂದು ಸುದೀಪ್ ರನ್ನು ಭೇಟಿಯಾಗಿದ್ದಾಗಲೂ ಇಂಥ ಸುದ್ದಿಗಳು ಹರಿದಾಡಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top