fbpx
ಸಮಾಚಾರ

ನಟ ಕಿಚ್ಚ ಸುದೀಪ್ ಅವರನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ- HDK

ಇನ್ನೇನು ವಿಧಾನಸಭಾ ಚುನಾವಣೆಗೆ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಬಾರಿ ರಾಜಕೀಯದ ರಂಗು ಚಿತ್ರರಂಗದಲ್ಲಿಯೂ ತುಸು ಹೆಚ್ಚೇ ಪ್ರತಿಫಲಿಸುತ್ತಿದೆ. ನಾನಾ ರಾಜಕೀಯ ಪಕ್ಷಗಳ ತಮ್ಮ ಪರವಾಗಿ ನಟ ನಟಿಯರನ್ನು ಪ್ರಚಾರಕ್ಕೆ ಸೆಳೆದುಕೊಳ್ಳುವ ಕಸರತ್ತನ್ನೂ ತೀವ್ರಗೊಳಿಸಿವೆ. ಹೀಗಿರುವಾಗಲೇ ಸ್ಯಾಂಡಲ್ ವುಡ್’ನ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಜೆಡಿಎಸ್ ಪರ ಮತಯಾಚನೆ ಮಾಡಲು ಕಿಚ್ಚನಿಗೆ ಮನವಿ ಮಾಡಲಾಗಿದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

 

 

ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದೆ. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಬಲು ಜೋರಾಗಿದೆ. ಆ ಸ್ಟಾರ್ ರಾಜಕೀಯಕ್ಕಿಳೀತಾರೆ, ಮತ್ಯಾರಿಗೋ ಟಿಕೆಟು ಪಕ್ಕಾ ಆಗಿದೆ ಎಂಬೆಲ್ಲ ರೂಮರ್ ಮಾಮೂಲಿ. ಆದರೆ ಈ ಸಲ ಈ ರೇಸಿನಲ್ಲಿ ಕಿಚ್ಚಾ ಸುದೀಪ್ ಅವರ ಹೆಸರೂ ಚಾಲ್ತಿಯಲ್ಲಿರೋದು ನಿಜವಾದ ವಿಶೇಷ!

ಸುದೀಪ್ ರಾಜಕೀಯಕ್ಕೆ ಬರುತ್ತಾರೆಂಬ ಅಂತೆ ಕಂತೆಯಾಗಲಿ, ಅವರನ್ನು ಸೆಳೆದುಕೊಳ್ಳಲು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಒಳಗೊಳಗೇ ಕಸರತ್ತು ನಡೆಸೋದಾಗಲಿ ಹೊಸದೇನೂ ಅಲ್ಲ. ಆದರೆ ಒಂದು ಮೂಲದ ಪ್ರಕಾರ ಈ ಸಲ ಸುದೀಪ್ ಅವರು ತಮ್ಮ ಸ್ನೇಹಿತರ ಮತ್ತು ತಮಗೆ ಬೇಕಾದವರ ಪರವಾಗಿ ಪ್ರಚಾರ ನಡೆಸೋದಂತೂ ಗ್ಯಾರಂಟೀಯಂತೆ.

 

 

ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿನ ದಿನಗಳಲ್ಲಿ ಸುದೀಪ್ ಕೂಡ ಅವಾಗವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾಗುತ್ತಲೇ ಇದ್ದಾರೆ. ಮೊನ್ನೆ ಕೂಡ ಬೆಂಗಳೂರಿನ ಜೆಪಿ ನಗರದ ಕುಮಾರಸ್ವಾಮಿ ನಿವಾಸಕ್ಕೆ ನಟ ಸುದೀಪ್ ಅವರು ತೆರಳಿದ್ದು ಸಾಕಷ್ಟು ವಿಷಯಗಳ ಬಗ್ಗೆ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಪುತ್ರ ನಿಖಿಲ್, ಪತ್ನಿ ಅನಿತಾ ಕುಮಾರಸ್ವಾಮಿ ಅವರೂ ಕೂಡ ಇದ್ದರು. ಅಲ್ಲದೇ ಕುಮಾರಸ್ವಾಮಿ ನಿವಾಸದಲ್ಲೇ ಸುದೀಪ್ ಉಪಾಹಾರ ಕೂಡ ಮುಗಿಸಿ ಬಂದಿದ್ದರು. ಮಾತುಕತೆಯಲ್ಲಿ ಯಾವ ವಿಷಯ ಚರ್ಚಿಸಲಾಯಿತು ಎಂದು ಇಲ್ಲಿಯವರೆಗೂ ಬಹಿರಂಗಪಡಿಸದ ಕುಮಾರಸ್ವಾಮಿ ಇಂದು ಅದರ ಬಗ್ಗೆ ಮಾತನಾಡಿದ್ದಾರೆ.

 

 

“ಸುದೀಪ್ ಅವರು ಚಿತ್ರರಂಗದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಅನೇಕ ಸಾಧನೆಗಳನ್ನು ಮಾಡಬೇಕೆಂಬ ಭಾವನೆಗಳನ್ನು ಇಟ್ಟುಕೊಂಡಿರುವಂತಹ ವ್ಯಕ್ತಿ. ಸದ್ಯಕ್ಕೆ ಅವರು ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಆಸಕ್ತಿಯನ್ನು ಹೊಂದಿಲ್ಲ. ಸುದೀಪ್ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಅವರನ್ನು ರಾಜಕೀಯಕ್ಕೆ ಸೆಳೆದು ಅವರನ್ನ ನಾನು ದುರ್ಬಳಕೆ ಮಾಡುವುದಿಲ್ಲ. ಅವರಿಗೆ ಪ್ರಸ್ತುತ ರಾಜಕೀಯದ ಬಗ್ಗೆ ಕೆಲವು ವಿಷಯ ತಿಳಿಸಿದ್ದೇನೆ. ಸುದೀಪ್ ಅವರು ನಮ್ಮ ಪಕ್ಷಕ್ಕೆ(JDS) ಸೇರುತ್ತಾರೆ ಎಂದು ಕೆಲವರು ಗುಲ್ಲೆಬ್ಬಿಸುತ್ತಿದ್ದಾರೆ. ಆದರೆ ಅದು ಸುಳ್ಳು, ನಾನು ಅವರನ್ನು ಭೇಟಿಯಾಗಿದ್ದಾಗ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಒತ್ತಡ ಹೇರಿಲ್ಲ. ಆದರೆ ಜನತೆಯಲ್ಲಿ ತಿಳುವಳಿಕೆ ಮೂಡಿಸಿ ಎಂದು ಮನವಿ ಮಾಡಿಕೊಂಡಿದ್ದೇನೆ ಅಷ್ಟೇ” ಎಂದು ಸುದ್ದಿಗಾರರೊಂದಿಗೆ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top