ಮನೋರಂಜನೆ

ಅರ್ಜುನ್ ಜನ್ಯಾ ಮತ್ತು ಯೋಗರಾಜ್ ಭಟ್ ಬಗ್ಗೆ ಹಂಸಲೇಖ ಹೇಳಿದ್ದೇನು?

ಕನ್ನಡ ಚಿತ್ರ ಗೀತೆಗಳ ದಿಕ್ಕು ದೆಸೆಗಳನ್ನೇ ಬದಲಿಸುವ ಮೂಲಕ ನಾದಬ್ರಹ್ಮ ಎಂದೇ ಕನ್ನಡಿಗರ ಪ್ರೀತಿ ಪಾತ್ರರಾಗಿರುವವರು ಹಂಸಲೇಖ. ಎಂದೆಂದಿಗೂ ಸಲ್ಲುವಂಥಾ ಹಾಡುಗಳ ಮೂಲವೇ ಸಂಗೀತ, ಸಾಹಿತ್ಯಕ್ಕೊಂದು ಹೊಸಾ ಆಯಾಮ ಕೊಟ್ಟ ಹಂಸಲೇಖ ಇದ್ದಲ್ಲಿ ನಗು, ಖುಷಿ, ತಮಾಷೆ, ಕಾಲೆಳೆತ ಮತ್ತು ಯಾವುದೇ ಕಿಸುರಿಲ್ಲದ ಮೆಚ್ಚಿಕೊಳ್ಳುವಿಕೆಗಳೆಲ್ಲ ಮಾಮೂಲು. ಅಂಥಾದ್ದೇ ಕ್ಷಣಗಳನ್ನು ಮತ್ತೆ ಎದುರುಗೊಳ್ಳುವಂತೆ ಮಾಡಿದ್ದು ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ತಂಡ.

 

 

ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿರುವ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಾದಬ್ರಹ್ಮನ ಸಮ್ಮುಖದಲ್ಲಿ ನೆರವೇರಿದೆ. ಈ ಸಂದರ್ಭದಲ್ಲಿ ಹಾಜರಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರುಗಳ ಬಗ್ಗೆ ಹಂಸಲೇಖಾ ಇಂಟರೆಸ್ಟಿಂಗ್ ಆದ ಮಾತುಗಳನ್ನಾಡಿದ್ದಾರೆ.

 

 

ಮೊದಲೆಲ್ಲಾ ಯೋಗರಾಜ ಭಟ್ ಉಡಾಫೆಯ ದಾರಿ ಹಿಡಿದಿದ್ದಾರೆಂಬ ಮಾತುಗಳು ಹಂಸಲೇಖ ಅವರ ಕಿವಿಗೆ ಬೀಳುತ್ತಿದ್ದವಂತೆ. ಆದರೆ ಬರ ಬರುತ್ತಾ ಅವರು ಚಲನಚಿತ್ರಗಳ ಸಂಭಾಷಣೆಯ ದಿಕ್ಕನ್ನೇ ಬದಲಾಯಿಸಿದ್ದಾರೆಂಬ ಮೆಚ್ಚುಗೆ ನಾದಬ್ರಹ್ಮನ ಕಡೆಯಿಂದ ಕೇಳಿ ಬಂತು. ತಮಾಷೆ ಮತ್ತು ಉಡಾಫೆ ಮಿಶ್ರಿತವಾದ ಹಾದಿಯಲ್ಲಿಯೇ ಆಧ್ಯಾತ್ಮವನ್ನು ಮುಟ್ಟಲು ಹೊರಟಿರುವ ಯೋಗರಾಜ ಭಟ್ ಕನ್ನಡದ ಕಂಪನ್ನು ಭಾಷೆಯ ಗಡಿ ದಾಟಿಸಿ ಪ್ರಸಿದ್ಧಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಬಹು ಕಾಲದಿಂದಲೂ ಸೈಕಲ್ಲು ಹೊಡೆಯುತ್ತಿದ್ದಾರೆ. ಅದರಲ್ಲಿ ಅವರು ಯಶ ಕಾಣಲೆಂದು ಹಂಸಲೇಖ ಹಾರೈಸಿದರು.

 

 

ಅದಾದ ಬಳಿಕ ಹಂಸಲೇಖಾ ಅವರ ಮಾತು ಹೊರಳಿಕೊಂಡಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರತ್ತ. ಇಷ್ಟೊಂದು ಚಿತ್ರಗಳಿಗೆ ಸಂಗೀತ ನೀಡಿ ಹಾಡೆಂದರೆ ಹೀಗಿರ ಬೇಕೆಂಬಂತೆ ಹೊಸಾ ಟ್ರೆಂಡ್ ಕ್ರಿಯೇಟ್ ಮಾಡಿದರೂ ಪೋಸ್ಟರಿನಲ್ಲಿ ಫೋಟೋ ಹಾಕಿಕೊಳ್ಳಲೂ ಜನ್ಯಾ ನಾಚಿಕೆ ಪಡುತ್ತಾರೆ ಅಂದಿರೋ ಹಂಸಲೇಖ ಒಂದು ಕಾಲದಲ್ಲಿ ತಾವು ತಮ್ಮ ಹೆಸರು ಹಾಕಿಕೊಳ್ಳಲು ಮುಜುಗರ ಪಡುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ.

 

 

ಒಟ್ಟಾರೆಯಾಗಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಹಾಡುಗಳ ಅನಾವರಣ ಕಾರ್ಯಕ್ರಮ ಹಂಸಲೇಖ ಅವರ ಇರುವಿಕೆಯಿಂದ ಬೇರೆಯದ್ದೇ ರಂಗು ಪಡೆದುಕೊಂಡಿದೆ. ಈ ಮೂಲಕ ಈ ಚಿತ್ರದತ್ತ ಪ್ರೇಕ್ಷಕರು ಮತ್ತಷ್ಟು ಆಕರ್ಷಿತರಾಗುವಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top