fbpx
ವಿಶೇಷ

ದರ್ಶನ್ ತಾಯಿಯ ಹೋರಾಟದ ಬದುಕು-2: ಮಗನಿಗೊಂದು ಕೆಲಸ ಕೊಡುವಂತೆ ಅಂಗಲಾಚಿದ್ದರು ಮೀನಮ್ಮ!

ಒಂದರ ಹಿಂದೊಂದರಂತೆ ಕಷ್ಟ, ಆಘಾತಗಳು ಬಂದೆರಗಿದಾಗ ಎಷ್ಟೋ ದಿನ ಮೀನಾ ಮೂವರು ಮಕ್ಕಳನ್ನ ಗಟ್ಟಿಯಾಗಿ ಹಿಡಿದು ನಾಲ್ಕು ಗೋಡೆಗಳ ಮಧ್ಯೆ ಉಸಿರು ಬಿಗಿ ಹಿಡಿದು ಅತ್ತಿದ್ದಿದೆ. ನಂದಾದೀಪದಂತಿದ್ದ ಆ ಮನೆಯಲ್ಲಿ ತೂಗುದೀಪ ಶ್ರೀನಿವಾಸ ಅವರ ಆತ್ಮಬೆಳಕು ಆರಿಹೋದಾಗ ಆ ತಾಯಿ ಹೃದಯ ಒಮ್ಮೆ ಕಂಪಿಸಿತ್ತು. ತನಗೆ ಮೂರು ಮಕ್ಕಳಲ್ಲ, ನಾಲ್ಕು ಎಂದು ಆರೈಕೆ ಮಾಡಿದ್ದ ಅದೇ ಕೈಗಳಿಗೆ ನಾಳೆಯಿಂದ ನಾಲ್ಕನೇ ತುತ್ತು ತಿನ್ನುವ ಜೀವವೇ ಇಲ್ಲ ಎಂದಾಗ ಹೇಗಾಗಬೇಡ? ಹೌದು, ತೂಗುದೀಪ ಅವರು ದುಡಿಯುತ್ತಿದ್ದ ಟೈಮಲ್ಲಿ ಪರಿಸ್ಥಿತಿ ಹಾಗಿತ್ತು. ಲಕ್ಷದ ಲೆಕ್ಕದಲ್ಲೇ ಸಿನೆಮಾ ತಯಾರಾಗೋದು. ಕಲಾವಿದನಿಗೆ ಸಂಭಾವನೆಯ ಮಟ್ಟ ಸಾವಿರ ದಾಟಿದರೆ ಅದನ್ನ ಪಾಲಿಗೆ ಬಂದ ಪ್ರಸಾದ ಎಂದು ಕಣ್ಣಿಗೊತ್ತಿಕೊಳ್ಳಬೇಕಿತ್ತು. ಅಂಥದ್ದರಲ್ಲಿ ತೂಗುದೀಪ ಶ್ರೀನಿವಾಸ್ ಮನೆಗೆ ಎಂದೇ ಒಂದು ಭಾಗ ತೆಗೆದಿಡುತ್ತಿದ್ದರು. ತಿಂಗಳುಪೂರ್ತಿ ದುಡಿದು ತಂದು ಮೀನಾ ಮಡಿಲಿಗೆ ಹಾಕುತ್ತಿದ್ದರು. ಅದರಲ್ಲೇ ಪೈಸಾಪೈಸಾ ಜೋಡಿಸಿ ಎಂಟು ಸಾವಿರ ಮಾಡಿ ಮೈಸೂರಿನ ಸಿದ್ದಾರ್ಥ ಲೇ ಔಟ್‌ನಲ್ಲಿ ಒಂದು ಸೈಟ್ ತೆಗೆದುಕೊಂಡರು.

 

 

ಸೈಟ್ ಇದ್ದರೆ ಅಲ್ಲೇನು ಗುಡಿಸಲು ಕಟ್ಟಿಕೊಂಡು ಇರಲು ಸಾಧ್ಯವಾ? ಅದೂ ತೂಗುದೀಪ ಶ್ರೀನಿವಾಸ್ ಅವರ ಕುಟುಂಬ ಎಂಬ ಸೀಲ್ ಬೇರೆ ಬಿದ್ದು ವರ್ಷಗಳೇ ಕಳೆದುಹೋಗಿತ್ತು. ಆ ಕೊಂಡ ಜಾಗದಲ್ಲಿ ಮನೆ ಕಟ್ಟಿ ನಿಲ್ಲಿಸಿಯೇ ನಿಲ್ಲಿಸುತ್ತೇನೆ ಎಂದು ಹಠ ಕಟ್ಟಿದ ಮೀನಮ್ಮ and ತೂಗುದೀಪ ಶ್ರೀನಿವಾಸ್, ನಿರಂತರ ಬಾಗಲಕೋಟೆ ಸುತ್ತಮುತ್ತ ನಾಟಕ ಆಡಿ ಅದರಲ್ಲಿ ಬಂದ ಮೂರೂವರೆ ಲಕ್ಷದಲ್ಲಿ ಮನೆ ಕಟ್ಟಿ ನಿಲ್ಲಿಸಿದರು. ಪತಿಯನ್ನು ರಂಗವೇರಲು ಸಜ್ಜುಗೊಳಿಸಿ ಉಪವಾಸ ಕುಂತ ದಿನಗಳೆಷ್ಟೋ. ಆ ದುಡ್ಡಿನಲ್ಲಿ ಒಂದೇ ಒಂದು ರುಪಾಯಿ ಕೂಡ ಆಚೀಚೆ ಆಗದಂತೇ ಜತನ ಮಾಡಿದ್ದು, ಜೋಪಾನ ಮಾಡಿದ್ದು ಇದೇ ಮೀನಾ ತೂಗುದೀಪ ಶ್ರೀನಿವಾಸ!

 

 

ಆ ದಿನಗಳನ್ನ ನೆನೆಸಿಕೊಂಡರೆ ಮೀನಮ್ಮ ಕೂತಲ್ಲೇ ಕೂತುಬಿಡುತ್ತಾರೆ. ಮನೆತುಂಬಾ ಚೆಲ್ಲಿರುವ ನೆನಪುಗಳ ಅಕ್ಕಿಯನ್ನ ಹೆಕ್ಕಿ ಹೆಕ್ಕಿ ತೆಗೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಇವತ್ತಿಗೂ ಮೈಸೂರು ಮನೆಯಲ್ಲೇ ಇದ್ದಾರೆ. ತೂಗುದೀಪ ಶ್ರೀನಿವಾಸ ಎಂಬ ಎಂಟಕ್ಷರದ ಜೊತೆಗಿನ ನಂಟು ಇನ್ನೂ ಮುಂದುವರೆದಿದೆ. ಅದೇ ಸೋಫಾ, ಅದೇ ಡೈನಿಂಗ್ ಟೇಬಲ್, ಅದೇ ವಾಟರ್ ಹೀಟರ್, ಅದೇ ಅಡುಗೆಮನೆ, ಅದೇ ಮಂಚ, ಅದೇ ಮಫ್ಲರ್, ಅದೇ ವಸ್ತುಗಳು ಪದೇ ಪದೇ ಕಾಣುತ್ತವೆ, ಕಾಡುತ್ತವೆ. ಅದೇ ಜಾಗದಲ್ಲಿ ತೂಗುದೀಪ ಶ್ರೀನಿವಾಸ್ ಎಂಬ ಜೀವ ಓಡಾಡುತ್ತಿದೆಯೇನೋ ಎಂಬ ಕಲ್ಪನೆಗೂ ಮೀರಿದ ಭಾವನಾಲೋಕದಲ್ಲಿ ಮೀನಾ ತೂಗುದೀಪ ಎಂಬ ಹೆಣ್ಣಿನ ರೂಪದ ಗಂಡುಗಲಿ ಇವತ್ತಿಗೂ ಬದುಕಿದೆ. ಬದುಕಿ ತೋರಿಸಿದೆ.

 

 

ಹೌದು, ಯಾವಾಗ ಮನೆಯಲ್ಲಿ ಹೊತ್ತಿನ ಊಟಕ್ಕೆ ಕಷ್ಟವಾಗುತ್ತಿದೆ. ಮಕ್ಕಳಿಬ್ಬರ ಭವಿಷ್ಯ ಬಿಗುವಾಗುತ್ತಿದೆ ಎಂದು ಗೊತ್ತಾಯಿತೋ ಅವತ್ತೇ ಮೀನಾ ತೂಗುದೀಪ ಎದ್ದುನಿಲ್ಲುತ್ತಾರೆ. ಅದರಲ್ಲೂ ದರ್ಶನ್‌ಗಿರುವ ಹೈಟು, ಪರ್ಸನಾಲಿಟಿಗೆ ಅವನಿಗೆ ಅವಕಾಶ ಸಿಗದೇ ಇದ್ದಾಗ ಒಂದು ಡಿಸೈಡ್ ಮಾಡುತ್ತಾರೆ, ನನ್ನ ಮಗನನ್ನ ನಾನು ನಿಲ್ಲಿಸ್ತೀನಿ. ದೊಡ್ಡ ಕಟೌಟ್ ಥರ ನಿಲ್ಲಿಸ್ತೀನಿ. ಅವನ ಹಿಂದೆ ನಾನು ನಿಲ್ತೀನಿ ಎಂದು ಎದೆ ತಟ್ಟಿ ಎದ್ದೇಳುತ್ತಾರೆ!

-ಇದೇ ಮೀನಮ್ಮ ತನ್ನ ಎರಡನೇ ಮಗ ದಿನಕರ್‌ಗೆ ಒಂದೇ ಒಂದು ಸಣ್ಣ ಕೆಲಸ ಇದ್ದರೆ ಕೊಡಿ ಎಂದು ಒಬ್ಬ ದೊಡ್ಡ ವ್ಯಕ್ತಿಯ ಮನೆ ಬಾಗಿಲಲ್ಲಿ ಗಂಟೆಗಟ್ಟಲೇ ಕಾದು ವಾಪಸ್ ಆಗಿದ್ದಿದೆ. ಚಾನೆಲ್ ಒಂದರ ಮುಖ್ಯಸ್ಥರಾಗಿದ್ದ ಆ ವ್ಯಕ್ತಿ, ಕನಿಷ್ಟ ಪಕ್ಷ ತೂಗುದೀಪ ಶ್ರೀನಿವಾಸರ ಜೊತೆಗಿನ ಬೆಸುಗೆ-ಬಾಂಧವ್ಯ ನೆನೆದು ಮನೆಯೊಳಗೆ ಕರೆಯಬಹುದಿತ್ತು. ಆದರೆ ಆಗ ಅವರಿಗೆ ಭಗವಂತ ಹಾಗೆ ಮಾಡಲು ಮನಸ್ಸು ಕೊಡಲಿಲ್ಲ.

 

 

ಬಹುಶಃ ಅವತ್ತು ದಿನಕರ್‌ಗೆ ಆ ಚಾನೆಲ್‌ನಲ್ಲಿ ಕೆಲಸ ಆಗಿಬಿಟ್ಟಿದ್ದರೆ ಇವತ್ತು ಅಣ್ಣ ತಮ್ಮ ಇಬ್ಬರೂ ಈ ಹಂತಕ್ಕೆ ಬೆಳೆಯುತ್ತಿರಲಿಲ್ಲವೋ ಏನೋ? -ಆದರೆ ಈಗ ಕಾಲ ಬದಲಾಗಿದೆ. ಅದೇ ಮೀನಮ್ಮನ ಮಕ್ಕಳಿಬ್ಬರೂ ಸೆಟಲ್ ಆಗಿದ್ದಾರೆ. ತೂಗುದೀಪ ಪ್ರೊಡಕ್ಷನ್ಸ್ ಹೆಸರಲ್ಲಿ ನೂರಾರು ವ್ಯಕ್ತಿಗಳ ಬೆವರ ಹನಿ ಮುತ್ತಾಗುತ್ತಿದೆ. ಯಾವ ಮೈಸೂರು ಮನೆಯ ಅಕ್ಕಪಕ್ಕದ ಮನೆಯ ಕಾರುಗಳನ್ನ ಆಸೆಗಣ್ಣಿನಿಂದ ನೋಡಿ ಖುಷಿ ಪಡಬೇಕಿತ್ತೋ ಅದೇ ಮನೆಗಳವರೆಗೂ ಸಾಲು ಸಾಲಾಗಿ ನಿಲ್ಲಿಸುವಷ್ಟು ಕಾರುಗಳನ್ನ ಕೊಂಡುಕೊಳ್ಳುವ ತಾಕತ್ತು ಬಂದಿದೆ. ಯಾವ ಎಂಬತ್ತು ರುಪಾಯಿ ಸಂಭಾವನೆಗೋಸ್ಕರ ದರ್ಶನ್ ಕೈ ಚಾಚಿ ನಿಲ್ಲಬೇಕಿತ್ತೋ ಅದೇ ವ್ಯಕ್ತಿಗೆ ಎಂಟು ಕೋಟಿ ಸಂಭಾವನೆ ಕೊಡುವ ಮಟ್ಟಕ್ಕೆ ಭಗವಂತ ಭಾಗ್ಯ ಬರೆದಿದ್ದಾನೆ!

ಇಷ್ಟಿದ್ದೂ ಆ ತಾಯಿಗರ್ಭ ಮೈಸೂರು ಮನೆ ಬಿಟ್ಟು ಆಚೀಚೆ ಕದಲುವುದಿಲ್ಲ. ಹೆಚ್ಚೆಂದರೆ ಒಂದು, ಎರಡು ದಿನದ ಮಟ್ಟಿಗೆ ಬೆಂಗಳೂರಿಗೆ ಬರುತ್ತಾರೆ. ಬಂದು ಮಕ್ಕಳ ಮನೆಯಲ್ಲಿ ಇದ್ದು ಹೋಗುತ್ತಾರೆಯೇ ಹೊರತು, ಮುತ್ತುರಾಜ-ಪಾರ್ವತಮ್ಮ ಕೃಪ ಹೆಸರಿನ ಮೈಸೂರ ಮನೆಯೇ ಅವರಿಗೆ ನಂದನವನ. ಅದೇ ಅವರ ಪಾಲಿನ ಬೃಂದಾವನ!

 

 

ಇದನ್ನೂ ಓದಿ.

ದರ್ಶನ್ ತಾಯಿಯ ಹೋರಾಟದ ಬದುಕು ಭಾಗ-1: ನಿಜವಾದ ಚಾಲೆಂಜಿಂಗ್ ಸ್ಟಾರ್ ಮೀನಾ ತೂಗುದೀಪ್: ಗಟ್ಟಿಗಿತ್ತಿಯನ್ನೂ ಕಣ್ಣೀರಾಗಿಸಿತ್ತು ಬದುಕು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top