ಸಮಾಚಾರ

ಪ್ರಚಾರದ ವೇಳೆ ಕುಸಿದುಬಿದಿದ್ದ ಬಿಜೆಪಿ ಶಾಸಕ ವಿಜಯಕುಮಾರ್ ನಿಧನ! ಸಂತಾಪ ಮಿಡಿದ ಗಣ್ಯರು

ಹೃದಯ ಸಮಸ್ಯೆ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಜಯನಗರ ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ (60) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ವಿಜಯ್ ಕುಮಾರ್ ಅವರು ಎರಡು ಬಾರಿ ಜಯನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು ಈ ಭಾರಿಯೂ ಅವ್ರೇ ಬಿಜೆಪಿ ಅಭ್ಯರ್ಥಿಯಾಗಿದ್ದರು.

 

 

ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯಕುಮಾರ್​, ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ಜಯನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು ಆ ವೇಳೆ ಹಠಾತ್ತನೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ವೇಳೆಯಲ್ಲಿ ವಿಜಯಕುಮಾರ್ ಹೃದಯದ ನಾಳ ಬ್ಲಾಕ್ ಆಗಿದ್ದ ಪರಿಣಾಮ ಹೃದಯನಾಳ ಅಳವಡಿಸಲಾಗಿತ್ತು. ನಾಳ ಅಳವಡಿಸಿದ್ದರಿಂದ ಹೆಚ್ಚು ನಡೆಯದಂತೆ ವಿಜಯಕುಮಾರ್​ಗೆ ವೈದ್ಯರು ಸಲಹೆ ನೀಡಿದ್ದರು. ಆದರೆ ವೈದ್ಯರ ಸಲಹೆ ನಿರ್ಲಕ್ಷ್ಯಿಸಿ, ಪ್ರತಿದಿನ ಹತ್ತುಗಂಟೆಗೂ ಹೆಚ್ಚು ಕಾಲ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು ಹೀಗಾಗಿ ಅತಿಯಾದ ಆಯಾಸದಿಂದ ಸಮಸ್ಯೆ ಉಲ್ಬಣಿಸಿ ಹೃದಯಾಘಾತವಾಗಿದೆ ಎಂದು ಹೇಳೆಲಾಗಿದೆ. ವಿಜಯ್ ಕುಮಾರ್ ಪಾರ್ಥೀವ ಶರೀರವನ್ನು ಜಯನಗರ ನಾಲ್ಕನೇ ಬ್ಲಾಕ್‍ನಲ್ಲಿರುವ ಅವರ ಮನೆಗೆ ತರಲಾಗಿದೆ.

 

ವಿಜಯ್ ಕುಮಾರ್ ಅವರ ಸಾವಿನ ಸುದ್ದಿ ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ರಾಜಕೀಯ ಗಣ್ಯರು ಮತ್ತು ಬಿಜೆಪಿ ನಾಯಕರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top