ಸಮಾಚಾರ

ಹಿರಿಯ ನಟ ಚನ್ನಬಸಪ್ಪ ವಿಧಿವಶ- ಅಷ್ಟು ಚಿತ್ರಗಳಲ್ಲಿ ನಟಿಸಿದ ಕಲಾವಿದ ಅನಾಥವಾಗಿ ಸತ್ತರೇಕೆ.

ಹಲವಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ನಟಿಸಿದ್ದ, ಧಾರಾವಾಹಿಗಳ ಮೂಲಕವೂ ಮನೆ ಮಾತಾಗಿದ್ದ ಹಿರಿಯ ನಟ ಅಕ್ಕಿ ಚನ್ನಬಸಪ್ಪನವರು ನಿಧನರಾಗಿದ್ದಾರೆ. ಹೆತ್ತ ಮಕ್ಕಳೇ ಕಸದಂತೆ ಕಂಡರೂ ಇಳಿವಯಸ್ಸಿನಲ್ಲಿಯೂ ಮಡದಿಯೊಂದಿಗೆ ಸ್ವಾಭಿಮಾನದಿಂದಲೇ ಬದುಕಿದ್ದ ಆ ಹಿರಿಯ ಜೀವ ಐದು ವರ್ಷಗಳ ಹಿಂದೆ ಮಡದಿಯನ್ನು ಕಳೆದುಕೊಂಡು ಅನಾಥವಾಗಿತ್ತು. ಈಗ್ಗೆ ಒಂದಷ್ಟು ದಿನಗಳಿಂದ ತಮ್ಮ ಉತ್ಸಾಹವೆಲ್ಲ ಬಸಿದು ಹೋದಂತೆ ಅನಾರೋಗ್ಯಕ್ಕೀಡಾಗಿದ್ದ ಚನ್ನಬಸಪ್ಪನವರು ಕಡೆಗೂ ನಿಧನರಾಗಿದ್ದಾರೆ.

 

 

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಟ ನಟಿಯರಾಗಿ ಮಿಂಚಿದ್ದ ಹಿರಿಯ ಕಲಾವಿದರದ್ದು ಕಡೇ ಕಾಲದಲ್ಲಿ ಕಣ್ಣೀರ ಪರ್ವವೇ. ತೀರಾ ಇರಲೊಂದು ಸೂರು, ತುತ್ತು ಅನ್ನಕ್ಕೂ ಪರದಾಡುವಂಥಾ ಧೈನ್ಯ ಒಂದಷ್ಟು ಹಿರಿಯ ಕಲಾವಿದರನ್ನು ಬಾಧಿಸಿದೆ. ಎಷ್ಟೋ ಜನ ಆ ಕಷ್ಟಗಳ ಮಡುವಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಯಸ್ಸು ತೊಂಭತ್ತಾಗಿದ್ದರೂ ಯುವ ಕಲಾವಿದರನ್ನೇ ನಾಚಿಸುವಂಥಾ ಉತ್ಸಾಹದಿಂದಿದ್ದ ಚನ್ನಬಸಪ್ಪನವರ ಬದುಕೂ ಕೂಡಾ ಸಂಕಟದಿಂದಲೇ ನಿರ್ಗಮಿಸಿದ ಹಿರಿಯ ಕಲಾವಿದರ ಸಾಲಿನಲ್ಲಿ ಸೇರಿ ಹೋಗಿದ್ದು ಮಾತ್ರ ನಿಜಕ್ಕೂ ದುರಂತ.

ರಂಗಭೂಮಿಯ ನಂಟಿನಿಂದಲೇ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸುತ್ತಾ ಆ ಮೂಲಕವೇ ಮನೆ ಮಾತಾದವರು ಅಕ್ಕಿ ಚನ್ನಬಸಪ್ಪ. ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಹಾಸ್ಯ ಪಾತ್ರಗಳಲ್ಲಿಯೇ. ಅವರ ಅಭಿನಯದ ಶೈಲಿ ಮತ್ತು ವಿಶೇಷವಾದ ಮ್ಯಾನರಿಸಂ ಅನ್ನು ಪ್ರೇಕ್ಷಕರ‍್ಯಾರೂ ಮರೆಯುವಂತಿಲ್ಲ. ಅಷ್ಟಕ್ಕೂ ಅವರು ನಟಿಸಿರುವ ಚಿತ್ರಗಳ ಸಂಖ್ಯೆಯೂ ಸಣ್ಣದೇನಲ್ಲ. ಆದರೆ ಕಲಾ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಚನ್ನ ಬಸಪ್ಪನವರನ್ನು ಕೈ ಕಾಲು ಸೋತ ಕಾಲದಲ್ಲಿ ದೊಡ್ಡ ನೋವುಗಳೇ ಬಾಧಿಸಿದ್ದವು.

 

 

ಚನ್ನಬಸಪ್ಪನವರು ಈಗ್ಗೆ ಐದಾರು ವರ್ಷಗಳಿಂದ ಬದುಕುತ್ತಿದ್ದದ್ದು ಅನಾಥಾಶ್ರಮದಲ್ಲಿ. ಹಾಗಂತ ಅವರಿಗೆ ಮಕ್ಕಳು ಮರಿ ಇಲ್ಲವೆಂದೇನೂ ಅಲ್ಲ. ಕಷ್ಟಪಟ್ಟೇ ಚನ್ನಬಸಪ್ಪನವರು ತಮ್ಮ ಮಕ್ಕಳನ್ನು ಬೆಳೆಸಿದ್ದರು. ಕಲಾ ಸೇವೆಯಿಂದ ಹುಟ್ಟಿದ ಸಂಭಾವನೆಯಲ್ಲಿಯೇ ಎಲ್ಲರಿಗೂ ಕೈಲಾದಷ್ಟು ಬದುಕು ಕಟ್ಟಿ ಕೊಟ್ಟಿದ್ದರು. ಆದರೆ ಅದೆಷ್ಟೋ ವರ್ಷಗಳ ಹಿಂದೆಯೇ ಮಕ್ಕಳು ಚನ್ನಬಸಪ್ಪನವರನ್ನು ಬೀದಿಗೆ ಬಿಟ್ಟಿದ್ದರು. ಆ ಹೊತ್ತಿನಲ್ಲಿ ಕಸುವೆಲ್ಲ ಖಾಲಿಯಾಗಿದ್ದರೂ ನಟನೆಯನ್ನೇ ನಂಬಿಕೊಂಡು ತಮ್ಮ ಮಡದಿಯ ಜೊತೆ ವಾಸಿಸಲಾರಂಭಿಸಿದ್ದ ಅವರು ಐದು ವರ್ಷಗಳ ಹಿಂದೆ ಮಡದಿಯನ್ನು ಕಳೆದುಕೊಂಡಿದ್ದರು. ಆ ಹೊತ್ತಿನಲ್ಲಿ ಚನ್ನಬಸಪ್ಪನವರಿಗೆ ಎಂಬತೈದು ವರ್ಷ ವಯಸ್ಸಾಗಿತ್ತು. ಆದರೂ ಒಂಟಿಯಾಗಿ ನಿಂತ ಈ ಹಿರಿಯ ಜೀವವನ್ನು ಮನೆಗೆ ಕರೆಯ ಬೇಕೆಂಬ ಕನಿಕರ ಮಕ್ಕಳಿಗೆ ಹುಟ್ಟಲಿಲ್ಲ.

ಹಾಗೆ ಎಲ್ಲವನ್ನೂ ಕಳೆದುಕೊಂಡ ಚೆನ್ನಬಸಪ್ಪನವರು ಯಾರದ್ದೋ ಕಾಳಜಿಯಿಂದ ಅನಾಥಾಶ್ರಮವೊಂದಕ್ಕೆ ಸೇರಿಕೊಂಡು ಅಲ್ಲಿಯೇ ವಾಸಿಸಲಾರಂಭಿಸಿದ್ದರು. ಆದರೂ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಟಿಸುತ್ತಿದ್ದದ್ದು ಚನ್ನಬಸಪ್ಪನವರ ಸ್ವಾಭಿಮಾನ ಮತ್ತು ಜೀವನೋತ್ಸಾಹಕ್ಕೆ ಸಾಕ್ಷಿ. ಆದರೆ ವಯೋ ಸಹಜ ಕಾಯಿಲೆಗಳು ಈ ಹಿರಿಯ ಕಲಾವಿದನನ್ನು ಬಲಿಯಾಗಿಸಿವೆ. ಇವರ ಅಂತ್ಯ ಸಂಸ್ಕಾರ ನಡೆಸುವ ಜವಾಬ್ದಾರಿಯನ್ನು ಕಲಾವಿದರ ಸಂಘ ವಹಿಸಿಕೊಂಡಿದೆ. ಈಗಷ್ಟೇ ಸುಸಜ್ಜಿತವಾದ ಕಟ್ಟಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕಲಾವಿದರ ಸಂಘ ಹಿರಿಯ ಕಲಾವಿದರು ಈ ಪರಿಯಾದ ಕಷ್ಟ ಅನುಭವಿಸದಂತೆ ನೋಡಿಕೊಳ್ಳುವಂತಾದರೆ ಅದಕ್ಕಿಂತಾ ಸಾರ್ಥಕತೆ ಬೇರೇನೂ ಇರಲಾರದೇನೋ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top