ಮನೋರಂಜನೆ

ಸಲ್ಮಾನ್-ಕತ್ರಿನಾ ಮದ್ವೆಯಾಗ್ತಾರಂತೆ, ಮಾಜಿ ಪ್ರೇಮಿಗಳು ಶಾಶ್ವತವಾಗಿ ಒಂದಾಗಲಿದ್ದಾರಾ

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ದಾರಿ ಹಿಡಿದಿದ್ದ ಸಲ್ಮಾನ್ ಖಾನ್ ಬೇಲ್ ಪಡೆದು ಸದ್ಯಕ್ಕೆ ಬಚಾವಾಗಿದ್ದಾನೆ. ಬಾಲಿವುಡ್ ತುಂಬಾ ಬ್ಯಾಡ್‌ಬಾಯ್ ಅಂತಲೇ ಕರೆಸಿಕೊಳ್ಳುವ ಸಲ್ಮಾನ್‌ಖಾನ್ ಸೆಲೆಬ್ರಿಟಿ ಬ್ಯಾಚುಲರ್. ಒಂದು ವಿವಾದದ ಬಗ್ಗೆ ನೇರಾ ನೇರ ಪ್ರಶ್ನೆ ಕೇಳಿದಾಗಲೂ ಬಿಂದಾಸಾಗಿಯೇ ಉತ್ತರಿಸುವ ಸಲ್ಲು ಮದುವೆ ಬಗ್ಗೆ ಮಾತಾಡಿದರೆ ಮಾತ್ರ ಕೊಂಚ ವಿಚಲಿತರಾದಂತೆ ಕಾಣಿಸುತ್ತಾರೆ. ಬೇರೇನೋ ಫಿಲಾಸಫಿ ಹೇಳುತ್ತಾ ಅಂಥ ಪ್ರಶ್ನೆಗಳಿಂದ ಕಳಚಿಕೊಳ್ಳುವ ದಾರಿ ಹುಡುಕಿಕೊಳ್ಳುತ್ತಾರೆ.

 

 

ಇಂಥಾ ಸಲ್ಮಾನ್ ಖಾನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಡಿದರೆ ಅದಕ್ಕಿಂತಾ ಅಚ್ಚರಿ ಬೇರೇನಿದೆ? ಆದರೀಗ ನಿಜಕ್ಕೂ ಅಂತದ್ದೊಂದು ಸುದ್ದಿ ಬಾಲಿವುಡ್ ತುಂಬಾ ಹರಡಿಕೊಂಡಿದೆ. ಹಾಗಂತ ಇದನ್ನು ಯಾರೋ ಕಿಡಿಗೇಡಿಗಳು ಕೆಲಸಿಲ್ಲದೆ ಹಬ್ಬಿಸಿರುವ ರೂಮರ್ ಅಂದುಕೊಳ್ಳುವಂತೆಯೂ ಇಲ್ಲ. ಯಾಕೆಂದರೆ, ಇದರ ಹಿಂದೆ ಸತ್ಯವಿದೆ ಅಂತಲೂ ಅದೇ ಬಾಲಿವುಡ್ ಮಂದಿ ಮಾತಾಡಿಕೊಳ್ಳಲಾರಂಭಿಸಿದ್ದಾರೆ!

ಹಾಗಾದರೆ ಸಲ್ಮಾನ್ ಖಾನ್ ಯಾರನ್ನು ಮದುವೆಯಾಗುತ್ತಿದ್ದಾರೆಂಬ ಪ್ರಶ್ನೆ ಮೂಡಿಕೊಳ್ಳುತ್ತದಲ್ಲಾ? ಅದಕ್ಕೆ ಉತ್ತರ ಹುಡುಕುತ್ತಾ ಹೋದರೆ ಎದುರಾಗುವಾಕೆ ಕತ್ರಿನಾ ಕೈಫ್. ಸಲ್ಮಾನ್ ಖಾನ್ ಮತ್ತು ಕತ್ರಿನಾ ಇಬ್ಬರೂ ಕೂಡಾ ತಂತಮ್ಮ ಮನೆಯವರ ಒಪ್ಪಿಗೆ ಮತ್ತು ಒತ್ತಾಸೆಯ ಮೇರೆಗೇ ಮದುವೆಯಾಗಲು ತೀರ್ಮಾನಿಸಿದ್ದಾರೆ. ಇಷ್ಟರಲ್ಲಿಯೇ ಮದುವೆಯ ದಿನಾಂಕ ಅನೌನ್ಸ್ ಮಾಡಲಿದ್ದಾರೆಂದೂ ಹೇಳಲಾಗುತ್ತಿದೆ.

 

 

ಕತ್ರಿನಾ ಮತ್ತು ಸಲ್ಮಾನ್ ನಡುವಿನ ಗೆಳೆತನ ಇಂದು ನಿನ್ನೆಯದ್ದಲ್ಲ. ಆರಂಭದ ದಿನಗಳಲ್ಲಿ ಕತ್ರಿನಾ ಕಷ್ಟದಲ್ಲಿದ್ದಾಗ ಹೆಗಲಾಗಿದ್ದಾತ ಇದೇ ಸಲ್ಲು. ಆ ಕಾಲದಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದ ಇವರಿಬ್ಬರ ಸುತ್ತಾ ನಾನಾ ರೂಮರುಗಳು ಹರಿದಾಡಿದ್ದವು. ಅದರಂತೆಯೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಬ್ರೇಕಪ್ಪೂ ನಡೆದಿತ್ತು. ಅದಾದ ನಂತರ ಐಶ್ವರ್ಯಾ ರೈ ಸೇರಿದಂತೆ ಸಲ್ಲು ಒಂದಷ್ಟು ಹುಡುಗೀರ ಪ್ರೇಮಪಾಶದಲ್ಲಿ ಬಿದ್ದಿದ್ದ. ವಿರಹದಿಂದ ನರಳಿದ್ದ. ಅತ್ತ ಕತ್ರಿನಾ ಕೂಡಾ ರಣ್‌ಬೀರ್ ಕಪೂರ್ ಜೊತೆ ಸೀರಿಯಸ್ಸಾಗಿಯೇ ಲವ್ವಲ್ಲಿ ಬಿದ್ದಿದ್ದಳು. ಅವರಿಬ್ಬರ ನಡುವೆ ಬ್ರೇಕಪ್ಪೂ ನಡೆದಿತ್ತು.

 

 

ಈ ನಡುವೆ ಬೇಡಿಕೆಯೇ ಇಲ್ಲದೆ ಪಾತಾಳ ಕಂಡಿದ್ದ ಕತ್ರಿನಾಗೆ ಮತ್ತೆ ಅವಕಾಶ ಸಿಗುವಂತೆ ಮಾಡಿದ್ದು ಸಲ್ಮಾನ್. ತನ್ನ ಟೈಗರ್ ಜಿಂದಾ ಹೈ ಚಿತ್ರಕ್ಕೂ ಕತ್ರಿನಾಳನ್ನೇ ನಾಯಕಿಯಾಗಿಸಿದ್ದ. ಈ ಮೂಲಕ ಮತ್ತೆ ಇವರಿಬ್ಬರ ನಡುವೆ ಪ್ರೇಮ ಹುಟ್ಟಿಕೊಂಡಿದ್ದರೂ ಅಚ್ಚರಿಯೇನಿಲ್ಲ. ಇವರಿಬ್ಬರ ನಡುವೆ ಮತ್ತೆ ಮೂಡಿಕೊಂಡಿರೋ ಸಲುಗೆ ನೋಡಿದ ಎರಡೂ ಮನೆಯವರು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಾರಂತೆ. ಸಲ್ಲು ಕೂಡಾ ಬ್ಯಾಚುಲರ್ ಲೈಫಿಗೆ ನಮಸ್ಕಾರ ಹಾಕೋ ಯೋಜನೆ ಹಾಕಿಕೊಂಡಂತಿದೆ. ಅಂತೂ ಸದ್ಯದಲ್ಲೇ ಸಲ್ಲು ಮತ್ತು ಕತ್ರಿನಾ ಕಡೆಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕೀತು!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top