ಸಮಾಚಾರ

ಅನಾಥ ಶವವಾದ ಹಿರಿಯ ನಟ ಅಕ್ಕಿ ಚನ್ನಬಸಪ್ಪನವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಪ್ರಥಮ್.

ಹಲವಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ನಟಿಸಿದ್ದ, ಧಾರಾವಾಹಿಗಳ ಮೂಲಕವೂ ಮನೆ ಮಾತಾಗಿದ್ದ ಹಿರಿಯ ನಟ ಅಕ್ಕಿ ಚನ್ನಬಸಪ್ಪನವರು ನಿಧನರಾಗಿದ್ದಾರೆ. ಹೆತ್ತ ಮಕ್ಕಳೇ ಕಸದಂತೆ ಕಂಡರೂ ಇಳಿವಯಸ್ಸಿನಲ್ಲಿಯೂ ಮಡದಿಯೊಂದಿಗೆ ಸ್ವಾಭಿಮಾನದಿಂದಲೇ ಬದುಕಿದ್ದ ಆ ಹಿರಿಯ ಜೀವ ಐದು ವರ್ಷಗಳ ಹಿಂದೆ ಮಡದಿಯನ್ನು ಕಳೆದುಕೊಂಡು ಅನಾಥವಾಗಿತ್ತು. ಈಗ್ಗೆ ಒಂದಷ್ಟು ದಿನಗಳಿಂದ ತಮ್ಮ ಉತ್ಸಾಹವೆಲ್ಲ ಬಸಿದು ಹೋದಂತೆ ಅನಾರೋಗ್ಯಕ್ಕೀಡಾಗಿದ್ದ ಚನ್ನಬಸಪ್ಪನವರು ಕಡೆಗೂ ನಿಧನರಾಗಿದ್ದಾರೆ.

 

 

ಚನ್ನಬಸಪ್ಪನವರು ಈಗ್ಗೆ ಐದಾರು ವರ್ಷಗಳಿಂದ ಬದುಕುತ್ತಿದ್ದದ್ದು ಅನಾಥಾಶ್ರಮದಲ್ಲಿ. ಹಾಗಂತ ಅವರಿಗೆ ಮಕ್ಕಳು ಮರಿ ಇಲ್ಲವೆಂದೇನೂ ಅಲ್ಲ. ಕಷ್ಟಪಟ್ಟೇ ಚನ್ನಬಸಪ್ಪನವರು ತಮ್ಮ ಮಕ್ಕಳನ್ನು ಬೆಳೆಸಿದ್ದರು. ಕಲಾ ಸೇವೆಯಿಂದ ಹುಟ್ಟಿದ ಸಂಭಾವನೆಯಲ್ಲಿಯೇ ಎಲ್ಲರಿಗೂ ಕೈಲಾದಷ್ಟು ಬದುಕು ಕಟ್ಟಿ ಕೊಟ್ಟಿದ್ದರು. ಆದರೆ ಅದೆಷ್ಟೋ ವರ್ಷಗಳ ಹಿಂದೆಯೇ ಮಕ್ಕಳು ಚನ್ನಬಸಪ್ಪನವರನ್ನು ಬೀದಿಗೆ ಬಿಟ್ಟಿದ್ದರು. ಆ ಹೊತ್ತಿನಲ್ಲಿ ಕಸುವೆಲ್ಲ ಖಾಲಿಯಾಗಿದ್ದರೂ ನಟನೆಯನ್ನೇ ನಂಬಿಕೊಂಡು ತಮ್ಮ ಮಡದಿಯ ಜೊತೆ ವಾಸಿಸಲಾರಂಭಿಸಿದ್ದ ಅವರು ಐದು ವರ್ಷಗಳ ಹಿಂದೆ ಮಡದಿಯನ್ನು ಕಳೆದುಕೊಂಡಿದ್ದರು. ಆ ಹೊತ್ತಿನಲ್ಲಿ ಚನ್ನಬಸಪ್ಪನವರಿಗೆ ಎಂಬತೈದು ವರ್ಷ ವಯಸ್ಸಾಗಿತ್ತು. ಆದರೂ ಒಂಟಿಯಾಗಿ ನಿಂತ ಈ ಹಿರಿಯ ಜೀವವನ್ನು ಮನೆಗೆ ಕರೆಯ ಬೇಕೆಂಬ ಕನಿಕರ ಮಕ್ಕಳಿಗೆ ಹುಟ್ಟಲಿಲ್ಲ.

 

 

ಹಾಗೆ ಎಲ್ಲವನ್ನೂ ಕಳೆದುಕೊಂಡ ಚೆನ್ನಬಸಪ್ಪನವರು ಯಾರದ್ದೋ ಕಾಳಜಿಯಿಂದ ಅನಾಥಾಶ್ರಮವೊಂದಕ್ಕೆ ಸೇರಿಕೊಂಡು ಅಲ್ಲಿಯೇ ವಾಸಿಸಲಾರಂಭಿಸಿದ್ದರು. ಆದರೂ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಟಿಸುತ್ತಿದ್ದದ್ದು ಚನ್ನಬಸಪ್ಪನವರ ಸ್ವಾಭಿಮಾನ ಮತ್ತು ಜೀವನೋತ್ಸಾಹಕ್ಕೆ ಸಾಕ್ಷಿ. ಆದರೆ ವಯೋ ಸಹಜ ಕಾಯಿಲೆಗಳು ಈ ಹಿರಿಯ ಕಲಾವಿದನನ್ನು ಬಲಿಯಾಗಿಸಿವೆ. ಇವರ ಅಂತ್ಯ ಸಂಸ್ಕಾರ ನಡೆಸುವ ಜವಾಬ್ದಾರಿಯನ್ನು ಕಲಾವಿದರ ಸಂಘ ವಹಿಸಿಕೊಂಡಿದೆ. ಈಗಷ್ಟೇ ಸುಸಜ್ಜಿತವಾದ ಕಟ್ಟಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕಲಾವಿದರ ಸಂಘ ಹಿರಿಯ ಕಲಾವಿದರು ಈ ಪರಿಯಾದ ಕಷ್ಟ ಅನುಭವಿಸದಂತೆ ನೋಡಿಕೊಳ್ಳುವಂತಾದರೆ ಅದಕ್ಕಿಂತಾ ಸಾರ್ಥಕತೆ ಬೇರೇನೂ ಇರಲಾರದೇನೋ…

 

 

ಇಂಥ ಅಕ್ಕಿ ಚನ್ನಬಸಪ್ಪನವರು ಅಂತ್ಯ ಕ್ರಿಯೆ ಇಂದು ಕುಂಬಳಗೋಡಿನಲ್ಲಿ ನಡೆಯಿತು. ಕನ್ನಡ ಚಲನಚಿತ್ರ ಪೋಷಕ ಕಲಾವಿದರ ಸಂಘದ ಪರವಾಗಿ, ನಟ ಡಿಂಗ್ರಿ ನಾಗರಾಜ್ ಅವರು​​​ ಅಕ್ಕಿ ಚನ್ನಬಸಪ್ಪನವರ ಅಂತ್ಯಕ್ರಿಯೆಯನ್ನ ನಡೆಸಿದ್ದಾರೆ. ಅಂತ್ಯಕ್ರಿಯಲ್ಲಿ ಭಾಗವಹಿಸಿದ್ದ ಪ್ರಥಮ್ ಅಂತ್ಯಕ್ರಿಯೆ ಮುಗಿಯುವವರೆಗೂ ಅಲ್ಲಿಯೇ ಇದ್ದು ಅಗಲಿದ ಕಲಾವಿದನಿಗೆ ನಮನ ಸಲ್ಲಿಸಿ, ಆತ್ಮಕ್ಕೆ ಶಾಂತಿಕೋರಿದ್ರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top