ಮನೋರಂಜನೆ

ಸೋಲಿನ ಮೇಲೆ ಸಿಂಹಾಸನ ಹಾಕಿ ಕುಂತ ಜಗ್ಗೇಶ್-ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ತಾರಾ ನವರಸನಾಯಕ?

ತುರುವೇಕೆರೆ ಕ್ಷೇತ್ರದಿಂದ ಕಡೇ ಕ್ಷಣದಲ್ಲಿ ಯಶವಂತಪುರ ಕ್ಷೇತ್ರಕ್ಕೆ ಶಿಫ್ಟಾಗಿದ್ದ ಜಗ್ಗೇಶ್ ಈ ಚುನಾವಣೆಯಲ್ಲಿ ಸೋತಿದ್ದಾರೆ. ಮೋದಿ ಅಲೆಯೇ ತನ್ನನ್ನು ಅನಾಯಾಸವಾಗಿ ಎತ್ತಿಕೊಂಡು ಹೋಗಿ ವಿಧಾನಸೌಧಕ್ಕೆ ಬಿಡುತ್ತದೆ ಎಂಬಂತೆ ಭರವಸೆಯ ಮಾತಾಡುತ್ತಿದ್ದ ಜಗ್ಗೇಶ್ ಇದೀಗ ನಿರಾಸೆಯ ಮಡುವಿಗೆ ಬಿದ್ದಿದ್ದಾರೆ. ಈ ಬಗ್ಗೆ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಟೇಟಸ್ ಹಾಕುವ ಮೂಲಕ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

 

 

ಮೊನ್ನೆ ಜಗ್ಗೇಶ್ ಫೇಸ್‌ಬುಕ್‌ನಲ್ಲಿ ‘ಅವರು ಕೋಟಿ ಕೋಟಿ ಖರ್ಚು ಮಾಡಿಯೇ ಮತ ಪಡೆದಿದ್ದಾರೆ. ಆದರೆ ನಾನು ಸೋತಿದ್ದರೂ ನನಗೆ ಬಿದ್ದ ಮತಗಳೆಲ್ಲವೂ ಕಲಾವಿದ ಎಂಬ ಪ್ರೀತಿಯ ಪ್ರತೀಕ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನನ್ನ ಬದುಕೇ ಹೀಗೆ, ಸೋಲಿನ ಮೇಲೆ ಸಿಂಹಾಸನ ಹಾಕಿ ಕೂರೋದು’ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. ಇದಲ್ಲದೇ ಈ ಸೋಲಿನ ಕಹಿಯ ನಡುವೆಯೇ ಜಗ್ಗೇಶ್ ತಾವು ಗಳಿಸಿಕೊಂಡಿರುವ ಮತಗಳ ಬಗೆಗೂ ತೃಪ್ತಿಯ ಮಾತುಗಳನ್ನು ಬರೆದುಕೊಂಡಿದ್ದಾರೆ. ‘ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಹನ್ನೆರಡು ಸಾವಿರ ಮತ ಗಳಿಸಿಕೊಂಡಿತ್ತು. ಆದರೆ ಈ ಬಾರಿ ನಾನು ಕೇವಲ ಹದಿನೈದು ದಿನಗಳ ಕಾಲ ಮಾತ್ರ ಪ್ರಚಾರ ನಡೆಸಿದ್ದರೂ ೫೨.೯೪೬ ಮತಗಳು ಬಂದಿವೆ. ನಾನು ಸೋತರೂ ಪಕ್ಷ ಗೆಲ್ಲುತ್ತದೆ. ಸಂಭವಾಮಿ ಯುಗೇಯುಗೇ ಎಂದೂ ಜಗ್ಗೇಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

 

ಜಗ್ಗೇಶ್ ಅವರ ಈ ಅಭಿಪ್ರಾಯದ ವಿರುದ್ಧದ ಪ್ರತಿಕ್ರಿಯೆಗಳೂ ಕೂಡಾ ಫೇಸ್ ಬುಕ್‌ನಲ್ಲಿ ವ್ಯಾಪಕವಾಗಿಯೇ ಹರಿದಾಡುತ್ತಿವೆ. ಈ ಹಿಂದೆ ಆಪರೇಷನ್ ಕಮಲಕ್ಕೆ ಮರುಳಾಗಿ ತುರುವೇಕೆರೆ ಜನರಿಗೆ ಮೋಸ ಮಾಡಿದ್ದರಿಂದಲೇ ಇಂಥಾ ಸೋಲು ಬಂದಿದೆ ಅಂತಲೂ ಕೆಲ ಮಂದಿ ಜಗ್ಗೇಶ್‌ರನ್ನು ಜರಿದಿದ್ದಾರೆ. ಇದೆಲ್ಲ ಏನೇ ಇದ್ದರೂ ಈ ಫಲಿತಾಂಶ ಜಗ್ಗೇಶ್ ಅವರು ತಮ್ಮನ್ನು ತಾವೇ ಕೊಂಚ ಬದಲಾಯಿಸಿಕೊಳ್ಳುವಲ್ಲಿ, ಪಾಠ ಕಲಿತುಕೊಳ್ಳುವಲ್ಲಿಯೂ ಪ್ರಮುಖ ಪಾತ್ರ ವಹಿಸುವಂತಿದೆ.

ಯಾಕೆಂದರೆ ಈ ಬಾರಿಯ ಚುನಾವಣಾ ಕಣಕ್ಕಿಳಿದ ಜಗ್ಗೇಶ್ ತಾನೊಬ್ಬ ಕಲಾವಿದ, ತಾನು ಗೆದ್ದಿದ್ದರ ಹಿಂದೆ ಜಾತಿ ಧರ್ಮಗಳನ್ನು ಮೀರಿದ ಪ್ರೀತಿ ಇದೆ ಎಂಬ ಸತ್ಯವನ್ನೇ ಮರೆತಂತಿದ್ದರು. ಇಲ್ಲದೇ ಹೋಗಿದ್ದರೆ ನನಗೆ ಮುಸ್ಲಿಮರ ಮತ ಬೇಡ, ಹಿಂದೂಗಳ ಮತವಷ್ಟೇ ಸಾಕೆಂಬ ಉದ್ದಟತನದ ಮಾತು ಜಗ್ಗಣ್ಣನ ಬಾಯಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಕಲೆ ಎಲ್ಲ ಮನಸುಗಳನ್ನೂ ಒಂದು ಮಾಡುವಂಥಾದ್ದು. ಅದರಿಂದಲೇ ಮೇಲೆದ್ದು ಬಂದಿರುವ ಜಗ್ಗೇಶ್ ರಾಜಕೀಯವಾಗಿ ಒಡೆಯುವ ಮಾತಾಡುತ್ತಿರುವುದನ್ನು ಅವರ ಅಭಿಮಾನಿಗಳೂ ಸಹಿಸಿಕೊಳ್ಳುವುದಿಲ್ಲ. ಜಾತಿ ಧರ್ಮಗಳಿಗಿಂತ ಮನುಷ್ಯಧರ್ಮ ಶ್ರೇಷ್ಠವಾದದ್ದೆಂಬ ಸಾಕ್ಷಾತ್ಕಾರವನ್ನು ಈ ಸೋಲಿನ ಸಮ್ಮುಖದಲ್ಲಾದರೂ ಮಂತ್ರಾಲಯದ ರಾಯರು ಜಗ್ಗಣ್ಣನಿಗೆ ಕರುಣಿಸಲೆಂಬುದು ಎಲ್ಲರ ಹಾರೈಕೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top