ಮನೋರಂಜನೆ

ಕಾಮಿಡಿ ಕಿಲಾಡಿ ಗೋವಿಂದೇಗೌಡರ ಟ್ರ್ಯಾಜಿಡಿ ಕಹಾನಿ- ಕ್ಯಾನ್ಸರ್’ಗೆ ಬಲಿಯಾಗಿದ್ರು ಅಮ್ಮ,ಅಕ್ಕ

ಗೆಲುವೆಂಬುದು ‘ಮಾರು ದೂರ ನಡೆದಾಕ್ಷಣ ಎದುರಾಗಿ ಬಿಡುವ ಮಾಯಾದಂಡ’ ಅಂತಾ ನಂಬಿ ಕೂತ ಅನೇಕರಿದ್ದಾರೆ. ಆದರದು ಕೈಕಾಲಿನ ಕಸುವನ್ನೆಲ್ಲ ಬಸಿದು ಪ್ರಯತ್ನಿಸಿದರೂ ಸಿಕ್ಕಂತೆ ಮಾಡಿ ಆಟವಾಡಿಸೋ ಮಾಯಾವಿ ಎಂಬ ವಿಚಾರ ಕಷ್ಟ ಪಟ್ಟವರಿಗೆ, ಅದರ ಫಲವಾಗಿಯೇ ಗೆದ್ದವರಿಗಲ್ಲದೆ ಬೇರ‍್ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಕೆಲವರ ಬದುಕೇ ಆ ಮಾತಿಗೆ ಅನ್ವರ್ಥವೆಂಬಂತಿರುತ್ತೆ. ಕಳೆದ ಸೀಜನ್ನಿನ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಮಿಂಚಿದ್ದ ಗೋವಿಂದೇಗೌಡರ ಬದುಕಿನ ಪುಟಗಳು ಕೂಡಾ ಗೆಲುವಿನ ಬೇಟೆಯ ಪಡಿಪಾಟಲುಗಳ ದಂಡಿ ದಂಡಿ ಉದಾಹರಣೆಗಳನ್ನೊಳಗೊಂಡಿದೆ. ಗೆಲ್ಲಬಯಸುವವರಿಗೆ ಪಾಠದಂತೆಯೂ ಇದೆ!

 

 

ಗೋವಿಂದೇಗೌಡ ಅದೆಂತೆಂಥಾ ಕಷ್ಟಗಳನ್ನು ಕಂಡುಂಡು ಬೆಳೆದವರೆಂಬ ಬಗ್ಗೆ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿಯೇ ಕೆಲವಾರು ವಿಚಾರಗಳು ಜಾಹೀರಾಗಿದ್ದವು. ಅಂಥಾ ತುಣುಕುಗಳನ್ನ ಕಂಡ ಪ್ರೇಕ್ಷಕರ ಕಣ್ಣಾಲಿಗಳು ತುಂಬಿ ಬಂದಿದ್ದೂ ಇದೆ. ಬೆನ್ನಿಗೇ ಆತುಕೊಂಡು ಬಂದ ಬಡತನ, ತಾನು ತುಂಬಾ ಪ್ರೀತಿಸುವ ಅವ್ವ ಕ್ಯಾನ್ಸರಿನಿಂದ ನರಳಾಡುತ್ತಿದ್ದರೂ ದವಾಖಾನೆಗೊಯ್ದು ಸರಿಯಾದ ಚಿಕಿತ್ಸೆ ಕೊಡಿಸಲಾಗದ ಅಸಹನೆ, ತನ್ನ ಅಸಹಾಯಕತೆಯಿಂದಲೇ ಅವ್ವನನ್ನು ಕಳೆದುಕೊಳ್ಳಬೇಕಾಯ್ತಾ ಅಂತೊಂದು ಪಾಪಪ್ರಜ್ಞೆ… ಇಂಥಾದ್ದರ ನಡುವೆಯೇ ನಾಟಕಗಳ ಗುಂಗಿಗೆ ಬಿದ್ದು ಸಾಲ ಮಾಡಿ ಎಪ್ಪತ್ತು ರೂಪಾಯಿ ಹಿಡಿದು ಬೆಂಗಳೂರಿನ ಟ್ರೇನು ಹತ್ತಿದ್ದ ಗೋವಿಂದೇಗೌಡರನ್ನು ಅರೆಹೊಟ್ಟೆಯ ಸಂಕಟದಿಂದ ಪಾರು ಮಾಡಲು ಮಾಯಾವಿ ಬದುಕು ತೆಗೆದುಕೊಂಡಿದ್ದು ಬರೋಬ್ಬರಿ ಹದಿನಾಲಕ್ಕು ವರ್ಷ!

ದಾವಣಗೆರೆಯ ಹರಪನಹಳ್ಳಿಯ ಕಡಬಗೆರೆಯ ಬಡ ರೈತಾಪಿ ಕುಟುಂಬದಲ್ಲಿ ಜನಿಸಿದವರು ಗೋವಿಂದೇ ಗೌಡ. ತಂದೆ ಬಸವನ ಗೌಡರು ರೈತ. ತಾಯಿ ನಾಗಮ್ಮ ಜನಪದ ಹಾಡುಗಾರ್ತಿ. ಆಕೆ ಜನಪದ ಗೀತೆ ಮತ್ತು ಕಥೆಗಳ ಕಣಜ ಎಂದೇ ಹೆಸರಾಗಿದ್ದವರು. ಗೋವಿಂದೇಗೌಡರೊಳಗೆ ಕಲೆಯತ್ತ ಆಸಕ್ತಿ ಹುಟ್ಟಿದ್ದೂ ಕೂಡಾ ತಾಯಿಯ ಕಾರಣದಿಂದಲೇ. ಮನೆಯ ಕಡೆ ಬಡತನವಿತ್ತೆಂದರೆ ಚನ್ನವೀರಸ್ವಾಮಿ ಎಂಬ ಸಹೃದಯಿ ಶಿಕ್ಷಕರೋರ್ವರು ನಾಲಕ್ಕನೇ ಕ್ಲಾಸಿನಿಂದ ಪುಸ್ತಕ, ಫೀಸು, ಬಟ್ಟೆ ಬರೆ ಕೊಟ್ಟು ಕಾಪಾಡದೇ ಹೋಗಿದ್ದರೆ ಗೋವಿಂದೇಗೌಡರ ಅಕ್ಷರ ಯಾತ್ರೆ ಅಲ್ಲಿಗೇ ಕೊನೆಗೊಳ್ಳುತ್ತಿತ್ತೇನೋ. ಆದರೆ ಚನ್ನವೀರಸ್ವಾಮಿಯವರು ನಾಲಕ್ಕನೇ ತರಗತಿಯಿಂದ ಪಿಯುಸಿವರೆಗೂ ಗೋವಿಂದೇಗೌಡರನ್ನು ಓದಿಸಿದ್ದರು.

 

 

ಚನ್ನವೀರೇಗೌಡರು ಶಿಕ್ಷಣವನ್ನು ಮಾತ್ರ ಕೊಡಿಸದೇ ಗೋವಿಂದೇಗೌಡರೊಳಗಿನ ನಾಟಕ, ನಟನೆಯ ಆಸಕ್ತಿಯನ್ನೂ ಗುರುತಿಸಿ ಅದಕ್ಕೂ ಅನುವು ಮಾಡಿ ಕೊಟ್ಟಿದ್ದರು. ಆ ನಂತರ ಸಿಕ್ಕ ಗುರುಗಳೆಲ್ಲರೂ ಹೀಗೆಯೇ ಪ್ರೋತ್ಸಾಹ ನೀಡಿದ್ದರು. ಇಂಥಾ ವಾತಾವರಣದಲ್ಲಿ ಬಡತನವನ್ನೂ ಮೀರಿ ನಟನಾಗಿ ನೆಲೆ ನಿಲ್ಲ್ಲುವ ಕನಸು ಹೊತ್ತು ಮುಂದುವರೆದಿದ್ದ ಗೋವಿಂದೇಗೌಡರಿಗೆ ಡಿಗ್ರಿಯಲ್ಲಿರುವಾಗಲೇ ಆಘಾತವೊಂದು ಎದುರಾಗಿತ್ತು. ಕ್ಯಾನ್ಸರ್ ಕಾಯಿಲೆಗೀಡಾಗಿದ್ದ ಅವರ ತಾಯಿ ಸಾವು ಬದುಕಿನ ನಡುವೆ ಸೆಣೆಸುವಂಥಾ ಸ್ಥಿತಿ ಎದುರಾಗಿತ್ತು. ಇಂಥಾ ಹೊತ್ತಿನಲ್ಲಿಯೇ ಕಾಲೇಜಿನಲ್ಲಿ ಗೋವಿಂದೇಗೌಡ ನಿರ್ದೇಶನ ಮಾಡಿದ್ದರ ನಾಟಕವೊಂದನ್ನು ಬೇರೆ ಊರಿನಲ್ಲಿ ಪ್ರದರ್ಶನ ಮಾಡುವ ಅವಕಾಶ ಕೂಡಿ ಬಂದಿತ್ತು. ಅದಕ್ಕಾಗಿ ಹೊರಟು ನಿಂತವರಿಗೆ ಅಕ್ಕ ‘ಅಮ್ಮ ಈ ಪರಿಯಾಗಿ ಬಾಧೆ ಪಡುತ್ತಿರುವಾಗ ನೀನು ನಾಟಕ ಅಂತೆಲ್ಲ ಓಡಾಡ್ತೀಯಲ್ಲ’ ಅಂತ ಮೆಲುವಾಗಿಯೇ ಗದರಿದ್ದರಂತೆ. ಆ ಕ್ಷಣದಲ್ಲಿ ಅನ್ನಾಹಾರ ಸೇವಿಸಲಾಗದೆ, ಮಾತಾಡಲೂ ಪ್ರಯಾಸ ಪಡುತ್ತಿದ್ದ ಅಮ್ಮ ನಾಗಮ್ಮ ‘ಅವನೇನಾದರೂ ಸಾಧಿಸುತ್ತಾನೆ. ಅವನಿಗೆ ಬೇಕೆನ್ನಿಸಿದ್ದನ್ನು ಮಾಡಲಿ ಬಿಡು ಅಂತ ಆ ಕ್ಷಣದಲ್ಲಿಯೂ ಮಗನ ಕನಸಿನ ಪರವಾಗಿಯೇ ಮಾತಾಡಿದ್ದರಂತೆ. ಗೋವಿಂದೇ ಗೌಡ ಆ ನಾಟಕ ಪ್ರದರ್ಶನ ನೀಡಿದ ದಿನವೇ ಅಮ್ಮ ಉಸಿರು ನಿಲ್ಲಿಸಿದ್ದರು.

 

 

ಆ ನಂತರ ಒಂದೆಡೆ ಅಮ್ಮನನ್ನು ಕಳೆದುಕೊಂಡ ಸಂಕಟ ಮತ್ತೊಂದೆಡೆ ಆರ್ಥಿಕ ತೊಂದರೆಗಳಿಂದ ಗೋವಿಂದೇಗೌಡ ಕಂಗಾಲಾಗಿದ್ದರು. ಅಷ್ಟಕ್ಕೂ ಡಿಗ್ರಿ ಓದುವ ಸಮಯದಲ್ಲಿಯೇ ತಾಲೂಕಾಫೀಸಿನಲ್ಲಿ ಕ್ಲರ್ಕ್ ಒಬ್ಬರ ಕೈ ಕೆಳಗೆ ಕೆಲಸ ಮಾಡುತ್ತಾ, ಅದಾದ ನಂತರ ಮಕ್ಕಳಿಗೆ ಟ್ಯೂಷನ್ ಹೇಳುತ್ತಾ ಅದರಲ್ಲಿ ಬಂದ ಕಾಸಲ್ಲಿಯೇ ಗೋವಿಂದೇಗೌಡ ತಮ್ಮ ಖರ್ಚು ನೋಡಿಕೊಳ್ಳುತ್ತಿದ್ದರು. ಅದರ ನಡುವೆಯೇ ಮಕ್ಕಳಿಗೆ ನಾಟಕ ಹೇಳಿಕೊಡುವ ಕೆಲಸವೂ ನಡೆಯುತ್ತಿತ್ತು. ಇಂಥಾ ಗೋವಿಂದೇಗೌಡ ನಟನಾಗ ಬೇಕೆಂಬ ಕನಸು ಹೊತ್ತು ಬೆಂಗಳೂರಿನ ಟ್ರೇನು ಹತ್ತಿದ್ದೂ ಕೂಡಾ ಗೆಳೆಯರ ಬಳಿ ಸಾಲ ಕೇಳಿ ಕಾಸು ಹೊಂದಿಸಿಕೊಂಡೇ. ಹಾಗೆ ಬೆಂಗಳೂರಿನತ್ತ ಮುಖ ಮಾಡುವಾಗ ಅವರ ಬಳಿಯಿದ್ದದ್ದು ಕೇವಲ ಎಪ್ಪತ್ತು ರೂಪಾಯಿ ಮಾತ್ರ!

ಹಾಗೆ ಬೆಂಗಳೂರಿಗೆ ಬಂದ ಗೋವಿಂದೇಗೌಡ ಒಂದಷ್ಟು ಕಾಲ ವಿ ಮನೋಹರ್ ಅವರ ಬಳಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮೊದಲು ಡಿಗ್ರಿಯಲ್ಲಿರುವಾಗಲೇ ಮೈನಾ ಚಂದ್ರು ಅವರ ಪಾಂಡುರಂಗ ಧಾರಾವಾಹಿಗೆ ಸ್ಕ್ರಿಪ್ಟ್ ಬರೆದಿದ್ದ ಗೋವಿಂದೇಗೌಡ ಆ ಕಾಂಟ್ಯಾಕ್ಟುಗಳ ಮೂಲಕವೂ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದರು. ಆ ನಂತರ ಜಗ್ಗೇಶ್ ಅವರ ಶೋ ಒಂದಕ್ಕೆ ಸ್ಕ್ರಿಫ್ಟ್ ರೈಟರ್ ಆಗಿಯೂ ಕೆಲಸ ಮಾಡಿದ್ದರು. ಆ ನಂತರದಲ್ಲಿ ತೆಲುಗು ಚಿತ್ರದ ಡೈರೆಕ್ಷನ್ ವಿಭಾಗದಲ್ಲಿಯೂ ಕೆಲಸ ಮಾಡಿ ರಾಕೇಶ್ ಅಡಿಗ ಮುಖ್ಯಭೂಮಿಕೆಯಲ್ಲಿದ್ದ ನಟೋರಿಯಸ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆದರೂ ಬದುಕು ಮಾತ್ರ ಇನ್ನೂ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಲೇ ಇಲ್ಲ. ಆಗೆಲ್ಲ ಅನ್ನದ ಮೂಲವಾಗಿದ್ದದ್ದು ರಂಗ ಪರಂಪರೆ ಎಂಬ ನಾಟಕ ತಂಡ. ಈ ನಡುವೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಆಡಿಷನ್‌ನಲ್ಲಿ ಪಾಲ್ಗೊಂಡ ಗೋವಿಂದೇಗೌಡ ಆಯ್ಕೆಯಾದರು. ಆ ನಂತರದ್ದೆಲ್ಲವೂ ಇತಿಹಾಸ.

 

 

ಇತ್ತೀಚೆಗಷ್ಟೇ ಗೋವಿಂದೇಗೌಡ ನಿರ್ದೇಶನದ ‘ಜಂತರ್ ಮಂತರ್’ ಎನ್ನುವ ಮತ್ತೊಂದು ಚಿತ್ರ ತೆರೆಗೆ ಬಂದಿತ್ತು. ಆ ಸಿನಿಮಾ ತೆರೆಗೆ ಬರುವ ಹಿಂದಿನ ದಿನ ಅವರ ಅಕ್ಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ತಮ್ಮನನ್ನು ಹತ್ತಿರ ಕರೆದವರೇ ‘ನಿನ್ನ ಸಿನಿಮಾ ಚನ್ನಾಗಿ ಬಂದೈತಾ? ಜನ ಒಪ್ಕಂತಾರೆ ತಾನೆ’ ಅಂತಾ ಕೇಳಿದ್ದರು. ಮಾರನೇದಿನ ಥಿಯೇಟರಿನಲ್ಲಿ ಚಿತ್ರದ ಪ್ರದರ್ಶನ ಶುರುವೂ ಆಯಿತು; ಅದೇ ಹೊತ್ತಿಗೆ ಆಸ್ಪತ್ರೆಯ ಬೆಡ್ಡಿನಲ್ಲಿದ್ದ ಅಕ್ಕನ ದೇಹ ಉಸಿರು ಚೆಲ್ಲಿ ಮಲಗಿತ್ತು.

ಅಕ್ಕನ ಗಂಡ ಯಾವತ್ತೋ ತೀರಿಹೋಗಿದ್ದಾರೆ. ಅಕ್ಕ ಕೂಡಾ ಹೊರಟುಬಿಟ್ಟಳು. ಆಕೆ ಬಿಟ್ಟು ಹೋದ ಇಬ್ಬರು ಹೆಣ್ಣುಮಕ್ಕಳ ಜವಾಬ್ದಾರಿ ಕೂಡಾ ಗೋವಿಂದೇಗೌಡರ ಮೇಲೇ ಇದೆ. ದೊಡ್ಡ ಹುಡುಗಿಗೆ ಮದುವೆ ಗೊತ್ತು ಮಾಡಿದ್ದಾರೆ. ಈ ಇಬ್ಬರೂ ಹೆಣ್ಣುಮಕ್ಕಳ ಬದುಕಿಗೆ ದಾರಿ ಮಾಡಿಕೊಟ್ಟು ಆನಂತರ ತಾನು ಮದುವೆಯಾಗಿ ಬದುಕು ಕಂಡುಕೊಳ್ಳಬೇಕು ಎನ್ನುವ ಉದಾರ ಮನಸ್ಥಿತಿ ಗೋವಿಂದೇಗೌಡ್ರದ್ದು.

 

 

ಈ ರಿಯಾಲಿಟಿ ಶೋನಲ್ಲಿ ಗೋವಿಂದೇಗೌಡ ಪಡೆದ ಜನಪ್ರಿಯತೆ ಕಣ್ಣ ಮುಂದಿದೆ. ಈಗ ಹಲವಾರು ಚಿತ್ರಗಳಲ್ಲಿ ನಟನೆಯ ಅವಕಾಶಗಳು ಹೇರಳವಾಗಿವೆ. ಒಂದು ಹಂತದಲ್ಲಿ ರೂಪಾಯಿಗೂ ಕಂಗಾಲಾಗುತ್ತಾ ಇದೆಲ್ಲದರಿಂದ ಹೊರ ಹೋಗಿ ಕಾಸು ಬರೋ ಕೆಲಸ ಹುಡುಕಬೇಕು ಎಂಬಂತೆ ಡಿಪ್ರೆಸ್ ಆಗುತ್ತಿದ್ದ ಗೋವಿಂದೇಗೌಡ ಈಗ ಆರ್ಥಿಕವಾಗಿಯೂ ಕೊಂಚ ಸುಧಾರಿಸಿಕೊಂಡಿದ್ದಾರೆ. ಆದರೆ ಅವರು ಈ ಹಂತ ತಲುಪಿಕೊಳ್ಳಲು ಹಿಡಿದದ್ದು ಅಖಂಡ ಹದಿನಾಲಕ್ಕು ವರ್ಷ. ಬದುಕಿನ ನಾನಾ ಜಂಜಡಗಳನ್ನು ಅನುಭವಿಸುತ್ತಲೇ ತಾನೇನಾದರೂ ಸಾಧಿಸುತ್ತೇನೆಂಬ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಸಾಗಿ ಬಂದಿರುವ ಗೋವಿಂದೇಗೌಡರ ಕನಸೆಲ್ಲವೂ ನನಸಾಗಲೆಂದು ಹಾರೈಸೋಣ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top