ಮನೋರಂಜನೆ

ರ‍್ಯಾಂಬೋ-2 ಬಗ್ಗೆ ಪ್ರೇಕ್ಷಕರಲ್ಲಿ ಶುರುವಾಗಿದೆ ಚುಟು ಚುಟು- ಮತ್ತೆ ಮೋಡಿ ಮಾಡ್ತಾರಾ ಶರಣ್?

ಈ ಹಿಂದೆ ಶರಣ್ ನಟಿಸಿದ್ದ ಅಧ್ಯಕ್ಷ, ರ‍್ಯಾಂಬೋ ಮುಂತಾದ ಚಿತ್ರಗಳು ಹಿಟ್ ಆಗಿದ್ದವಲ್ಲಾ? ಆ ಚಿತ್ರಗಳು ಆರಂಭಿಕವಾಗಿ ಸದ್ದು ಮಾಡಿದ್ದದ್ದೇ ವಿಶಿಷ್ಟವಾದ ಹಾಡುಗಳಿಂದ. ಪಡ್ಡೆ ಹುಡುಗರಿಂದ ಮೊದಲ್ಗೊಂಡು ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದ್ದ ಹಾಡುಗಳೇ ಆ ಚಿತ್ರಗಳ ಗೆಲುವಿಗೆ ಕಾರಣವಾಗಿದ್ದವು. ಇದೀಗ ನಿರ್ದೇಶಕ ಅನಿಲ್ ಕುಮಾರ್ ಮತ್ತೆ ಅಂಥಾದ್ದೊಂದು ಮ್ಯಾಜಿಕ್ ನಡೆಸುತ್ತಾರಾ ಎಂಬ ಕುತೂಹಲ ಎಲ್ಲೆಡೆ ಹರಡಿಕೊಂಡಿದೆ. ಅದಕ್ಕೆ ಕಾರಣವಾಗಿರುವುದು ಈ ವಾರ ತೆರೆ ಕಾಣಲಿರುವ ರ‍್ಯಾಂಬೋ-2 ಚಿತ್ರ!

 

 

ರ‍್ಯಾಂಬೋ ಚಿತ್ರಕ್ಕೆ ದುಡಿದ ತಂತ್ರಜ್ಞರು ಮಾಡಿದ್ದ ಮೋಡಿ ಇನ್ನೂ ಹಸಿರಾಗಿದೆ. ಅದೇ ಟೀಮು ರ‍್ಯಾಂಬೋ-೨ ಚಿತ್ರದ ಮೂಲಕ ಮತ್ತೆ ಒಂದಾಗಿರೋದರಿಂದ ಸಹಜವಾಗಿಯೇ ಕುತೂಹಲ ಹುಟ್ಟಿಕೊಂಡಿದೆ. ಈ ಚಿತ್ರದ ಹೆಸರು ರ‍್ಯಾಂಬೋ-೨ ಅಂತಿರೋದರಿಂದ ಇದು ರ‍್ಯಾಂಬೋ ಚಿತ್ರದ ಮುಂದುವರೆದ ಭಾಗವಾ? ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನಾದರೂ ಲಿಂಕುಗಳಿವೆಯಾ ಅಂತೆಲ್ಲ ಪ್ರೇಕ್ಷಕರಲ್ಲಿ ಪ್ರಶ್ನೆಗಳೆದ್ದಿವೆ. ಆದರೆ ಖುದ್ದು ಚಿತ್ರತಂಡದಲ್ಲಿ ಒಬ್ಬರಾದ ತರುಣ್ ಸುಧೀರ್ ಅವರೇ ಅಂಥಾ ಯಾವ ಕನೆಕ್ಷನ್ನುಗಳೂ ಇಲ್ಲದ ಹೊಸಾ ಬಗೆಯ ರೋಚಕ ಕಥಾ ಹಂದರವೊಂದನ್ನು ಈ ಚಿತ್ರ ಹೊಂದಿದೆ ಎಂಬ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

ಶರಣ್ ಈ ವರೆಗೆ ಹೀರೋ ಆಗಿದ್ದ ಚಿತ್ರಗಳಲ್ಲೆಲ್ಲ ಅವರ ಪಾತ್ರ ಹಾಸ್ಯ ಪ್ರಾಧಾನ್ಯತೆಯನ್ನಷ್ಟೇ ಹೊಂದಿತ್ತು. ಆದರೆ ಈ ಚಿತ್ರದಲ್ಲಿ ಕಾಮಿಡಿಯ ಜೊತೆಗೇ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೂ ಕಲಾತ್ಮಕವಾಗಿ ಕಟ್ಟಿ ಕೊಡಲಾಗಿದೆಯಂತೆ. ಆದ ಕಾರಣದಿಂದಲೇ ಶರಣ್ ಅವರ ಪಾತ್ರ ಇದುವರೆಗಿನ ಚಿತ್ರಗಳಿಗಂತ ಭಿನ್ನವಾಗಿದೆಯಂತೆ. ಆದರೆ ಕಥೆ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದರೂ ಪ್ರತೀ ಹಂತದಲ್ಲಿಯೂ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಿರಾಳವಾಗುವ ಅವಕಾಶ ಪ್ರೇಕ್ಷಕರಿಗೆ ಖಾಯಂ ಎಂಬುದು ಚಿತ್ರ ತಂಡದ ಭರವಸೆ.

 

 

ಈ ಚಿತ್ರಕ್ಕೆ ಒಬ್ಬರೇ ನಿರ್ಮಾಪಕರಲ್ಲ ಎಂಬುದು ಮತ್ತೊಂದು ವಿಶೇಷ. ರ‍್ಯಾಂಬೋ-2 ತಾಂತ್ರಿಕ ವರ್ಗದವರೇ ಹಣ ಹೂಡಿ ನಿರ್ಮಾಣ ಮಾಡಿರುವ ಚಿತ್ರ. ಶರಣ್, ಅಟ್ಲಾಂಟಾ ನಾಗೇಂದ್ರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಾಹಕ ಎಸ್. ರಾಜ್, ಸಂಕಲನಕಾರ ಕೆ.ಎಂ ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಪ್ರೊಡಕ್ಷನ್ ಮ್ಯಾನೇಜರ್ ನರಸಿಂಹ ಜಾಲಹಳ್ಳಿ, ನಟ ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರುಗಳೆಲ್ಲ ಹಣ ಹೂಡಿ ಈ ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ.

ರ‍್ಯಾಂಬೋ ಚಿತ್ರದ ತಂಡವೇ ಈ ಚಿತ್ರದಲ್ಲಿಯೂ ಮತ್ತೆ ಒಟ್ಟಾಗಿ ಕೆಲಸ ಮಾಡಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಮಾಡಿರುವ ಐದು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಅಷ್ಟೂ ಹಾಡುಗಳೂ ಜನರ ಮನ ಗೆಲ್ಲುವಲ್ಲಿ ಸಫಲವಾಗಿವೆ. ಚುಟು ಚುಟು ಸಾಂಗ್ ಅಂತೂ ಟ್ರೆಂಡ್ ಅನ್ನೇ ಹುಟ್ಟು ಹಾಕಿದೆ. ಈ ಹಾಡಿನಲ್ಲಿ ನಾಯಕ ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿ ಆರಂಭಿಕವಾಗಿಯೇ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದೆ. ಧಮ್ ಮಾರೋ ಧಮ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಹಾಡಿರುವ ಹಾಡುಗಳೂ ಸೂಪರ್ ಹಿಟ್ಟಾಗಿವೆ. ಇದೇ ಶುಕ್ರವಾರ ಈ ಚಿತ್ರ ರಾಜ್ಯಾಧ್ಯಂತ ಭರ್ಜರಿಯಾಗಿ ತೆರೆ ಕಾಣಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top