ದೇವರು

ಬೇಡಿದ್ದನ್ನು ಕೊಡೊ ಶಕ್ತಿಶಾಲಿ ಅಮ್ಮನವರ ಪೀಠಗಳಲ್ಲಿ ಒಂದಾದ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ ದೇವಾಲಯದ ಬಗ್ಗೆ ಗೊತ್ತಿರದ ಸತ್ಯಗಳು

ಶ್ರೀ ಮಹಾಕಾಳಿ , ಮಹಾಲಕ್ಷ್ಮಿ ಮಹಾವಾಣಿ ಸ್ವರೂಪಿಣಿ ವಾರಾಹೀ ಶ್ಯಾಮಲಾ ಬಾಲ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ ದೇವಾಲಯದ ಸ್ಥಳ ಪುರಾಣ .

ಆದಿಶಕ್ತಿ ಎಂಬ ದೇವಿಯ ಉಪಾಸನೆಯು ಋುಗ್ವೇದದಷ್ಟೇ ಪುರಾತನವಾದದ್ದು, ಋುಗ್ವೇದದ ಹತ್ತನೇ ಮಂಡಲದಲ್ಲಿ ಬರುವ ದೇವಿ ಸೂಕ್ತ ರಾತ್ರಿ ಸೂಕ್ತಗಳು ದೇವಿಯ ಪರವಾಗಿವೆ. ಈ ಸೂಕ್ತಗಳ ಪ್ರಕಾರ ದೇವಿಯು ವಿಶ್ವೇಶ್ವರಿ, ಜಗದ್ದಾತ್ರಿ, ಉತ್ಪತ್ತಿ, ಸ್ಥಿತಿ, ಲಯಗಳಿಗೆ ಕಾರಣಳು, ಎಲ್ಲಾ ಮಂತ್ರಗಳ ಸ್ವರೂಪಳು. ಇವಳೇ ಮಹಾ ವಿದ್ಯೆಯು, ಮಹಾ ಮೋಹಳು ಹೌದು. ಇವಳೇ ಸ್ವರಕ್ಕೆ ಕಾರಣಗಳಾಗಿ ಗುಣ ತ್ರಯವನ್ನು ಕಾರ್ಯರೂಪಕ್ಕೆ ತಂದಿರುತ್ತಾಳೆ. ಇವಳೇ ಕಾಳರಾತ್ರಿ, ಮಹಾರಾತ್ರಿ   ಮತ್ತು ಮೋಹರಾತ್ರಿ. ನಾನಾ ಆಯುಧಗಳನ್ನು ಧರಿಸಿ ಭಯಂಕರಳಾಗಿ ಕಂಡರೂ ಸಹ ಜಗನ್ಮಾತೆಯು ಸೌಮ್ಯ ಸ್ವರೂಪಳು. ಅತಿ ಸುಂದರಿಯೂ ಪರಾಪರಗಳನ್ನು ಮೀರಿರುವ ಪರಮೇಶ್ವರಿಯು. ಇವಳೇ ಸಮಸ್ತ ದೇವತೆಗಳ ರೂಪದಲ್ಲಿ ಸಂಚರಿಸುತ್ತಾಳೆ. ಎಲ್ಲಾ ಪ್ರಾಣಿಗಳಲ್ಲೂ ಜೀವ ರೂಪದಿಂದ ನೆಲೆಸಿರುತ್ತಾಳೆ.

 

 

ಮನುಷ್ಯನು ತನ್ನ ಸಕಲ ಕ್ರಿಯೆಗಳನ್ನು ದೇವಿಯ ಮೂಲಕವೇ ನಡೆಸುತ್ತಾನೆ. ರುದ್ರನು ದುಷ್ಟರನ್ನು ಸಂಹರಿಸುವಾಗ ದೇವಿಯೇ ಅವನ ಧನುಸ್ಸನ್ನು ಬಗ್ಗಿಸುತ್ತಾಳೆ ಮತ್ತು ಅದ್ಯಾವ ಪೃತ್ವಿಗಳನ್ನು ಅಂತರ್ಯಾಮಿ ರೂಪದಿಂದ ಪ್ರವೇಶಿಸುತ್ತಾಳೆ. ಸಚ್ಚಿದಾನಂದ ಸ್ವರೂಪನಾದ ಭಗವಂತನೇ ಜಗದ್ರೂಪದಿಂದ ಇರುವನೆಂಬುದು, ಸಮಸ್ತ ದೇವತೆಗಳ ಶಕ್ತಿಯಾಗಿರುವ ನೆಂಬುದು ದೇವಿ ಸೂಕ್ತದ ತಾತ್ಪರ್ಯವಾಗಿದೆ.

ದೇವಿ ಮಹಾತ್ಮೆಯ ಮಾರ್ಕಂಡೇಯ ಪುರಾಣದ 13 ಅಧ್ಯಾಯಗಳ ವಿಷಯವಾಗಿದೆ. ಇದು ಪುರಾತನ ಪುರಾಣದ ಒಂದು ಭಾಗವಾಗಿದ್ದರೂ ಮಂತ್ರ ಶಾಸ್ತ್ರವೆಂದೇ ತಂತ್ರಗಳಲ್ಲಿ ಪ್ರಸಿದ್ಧವಾಗಿದೆ. ಮಂತ್ರಕ್ಕೂ ದೇವಿಗೂ ಯಾವುದೇ ಬೇಧವಿಲ್ಲ. ಮಂತ್ರವೇ ದೇವಿ.

 

ದೇವಿ ಮಹಾತ್ಮೆಯಲ್ಲಿ  ಮೂರು ಚರಿತ್ರೆಗಳಿವೆ. ದೇವಿಯ ವಿವಿಧ ರೂಪಗಳಾದ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯ ವಿಸ್ಕ್ರತ ಮಹಾತ್ಮೆ  ಈ ಚರಿತ್ರೆಗಳಲ್ಲಿವೆ.

ದೇವಿ ಮಹಾತ್ಮೆಯ  ಮೊದಲ ಚರಿತ್ರೆ.

ಕಾಲಾಂತರದಲ್ಲಿ ಜಗತ್ತೆಲ್ಲಾ ಜಲಮಯವಾಗಿರಲು ಭಗವಂತನಾದ ಶ್ರೀಮನ್ನಾರಾಯಣನು ಆದಿಶೇಷವೆಂಬ ಶಯನದ ಮೇಲೆ ಯೋಗ ನಿದ್ರೆಯನ್ನು ಹೊಂದಿದನು. ಆಗ ಮಧು- ಕೈಟಭರೆಂಬ ಅಸುರರು ವಿಷ್ಣುಕರ್ಣಮಲದಿಂದ ಉದ್ಭೂತರಾಗಿ ಕರ್ತ್ಯವಾದ ಬ್ರಹ್ಮನನ್ನು ಕೊಲ್ಲಲು ಪ್ರಯತ್ನಿಸಿದರು. ಆಗ ಬ್ರಹ್ಮನು ವಿಷ್ಣುವನ್ನು ಎಚ್ಚರಗೊಳಿಸಲು ಅವನ ಕಣ್ಣುಗಳಲ್ಲಿದ್ದ ಯೋಗ ನಿದ್ರೆಯನ್ನು ಪ್ರಾರ್ಥಿಸಿದನು. ಆಗ ತಾಮಸೇ ರಾತ್ರಿಯಾದ ಯೋಗ ನಿದ್ರೆಯೂ ವಿಷ್ಣುವನ್ನು ಎಚ್ಚರಗೊಳಿಸಿ ಅವನ ಮೂಲಕ ಮಧು- ಕೈಟಭರನ್ನು ನಾಶ ಪಡಿಸಿದಳು. ಆದುದರಿಂದ ದೇವಿಗೆ ಮಧು- ಕೈಟಭ ನಾಶಿನಿ ಎಂಬ ಹೆಸರು ಬಂದಿದೆ. ಇದು ಪ್ರಥಮ ಚರಿತ್ರೆಯ ವಿಷಯ.

ದ್ವಿತಿಯ ಚರಿತ್ರೆಯಲ್ಲಿ ಮಹಾಲಕ್ಷ್ಮಿಯ ಕಥೆಯಿದೆ.

ಆಸುರೇಶ್ವರನಾದ ಮಹಿಷಾಸುರನು ದೇವ ಸೈನ್ಯವನ್ನು ಸೋಲಿಸಿ ಇಂದ್ರ ಪದವಿಯನ್ನು ಪಡೆದನು. ಆಗ ಪರಾಜಿತರಾದ ದೇವತೆಗಳು ಬ್ರಹ್ಮನನ್ನು ಮುಂದೆ ಮಾಡಿಕೊಂಡು ಹರಿ-ಹರರು ಇದ್ದಲ್ಲಿಗೆ ಬಂದು ತಮ್ಮ ಅಳಲನ್ನು ತೋಡಿಕೊಂಡರು. ದೇವತೆಗಳ ಅವಮಾನ ಪರಾಜಯವನ್ನು ಕೇಳಿದ ಕೂಡಲೇ ಹರಿ-ಹರರು ಅತ್ಯಂತವಾಗಿ ಕೋಪಗೊಂಡರು. ಆಗ ಅವರ ಮುಖಗಳಿಂದಲೂ ಇತರ ದೇವತೆಗಳ ದೇಹಗಳಿಂದಲೂ ಮಹತ್ತಾದ ಒಂದು ತೇಜ ಪುಂಜವು ಹೊರಗೆ ಬಂದು ನಾರಿಯ ಸ್ವರೂಪವನ್ನು ಪಡೆದು ದಿಗಂತವನ್ನು ವ್ಯಾಪಿಸಿಕೊಂಡು ಇತರ ದೇವತೆಗಳ ತೇಜಸ್ಸುಗಳು ಆ ಮಹಾ ನಾರಿಯ ವಿವಿಧ ಅಂಗಾಂಗಗಳಾದವು. ಆ ಮಹಾ ನಾರಿಯೇ   ಮಹಾಲಕ್ಷ್ಮಿಯು, ಜಗನ್ಮಾತೆಯು, ಸರ್ವೇಶ್ವರಿಯೂ, ಆದ ಮಹಾಲಕ್ಷ್ಮಿ ಸ್ವರೂಪದ ದೇವಿಯು ರಾಕ್ಷಸ ನಾಯಕರನ್ನೆಲ್ಲಾ ವದಿಸಿ ತನ್ನ ಪಾದದಿಂದ ಮಹಿಷಾಸುರನನ್ನು ಆಕ್ರಮಿಸಿಕೊಂಡು ಶೂಲದಿಂದ ಪ್ರಹರಿಸಿ ಆತನನ್ನು ಕೊಂದಳು.

ತೃತೀಯ ಚರಿತ್ರೆಯಲ್ಲಿ ಬರುವ ದೇವಿ ಮಹಾತ್ಮೆ ಹೀಗಿದೆ .

ಶುಂಭ ನಿಶುಂಭ ಎಂಬ ಅಸುರ ಸೋದರರು ತಮ್ಮ ಪರಾಕ್ರಮದಿಂದ ಇಂದ್ರನ ಅಧಿಕಾರವನ್ನು ದೇವತೆಗಳ  ಹವಿರ್ಭಾಗಗಳನ್ನು ಅಪಹರಿಸಿದ್ದರು . ಅಯೋನಿಜೆಯಾದ ಕನ್ಯೆಯಿಂದ ಹೊರತು ಮತ್ತೆ ಯಾರಿಂದಲೂ ಮೃತ್ಯು ಸಂಭವಿಸುವುದಿಲ್ಲ ಎಂಬ ಬ್ರಹ್ಮನ ವರವೂ ಇವರಿಗಿತ್ತು. ಇಂಥವನಿಂದ ಆಪತ್ತಿಗೆ ಗುರಿಯಾದ ದೇವತೆಗಳೆಲ್ಲರೂ ಹಿಮಾಲಯಕ್ಕೆ ಹೋಗಿ ವಿಷ್ಣು ಮಾಯೆಯಾದ ದೇವಿಯನ್ನು ಸ್ತುತಿಸಿದರು. ಆಗ ಪಾರ್ವತಿಯು ಜಾಹ್ನವೀ ಜಲದಲ್ಲಿ ಸ್ನಾನ ಮಾಡಲು ಬಂದು ದೇವತೆಗಳಿಗೆ ಪ್ರತ್ಯಕ್ಷಳಾದಳು .

 

 

ಪಾರ್ವತಿಯು ಶರೀರ ಕೋಶದಿಂದ ಅತೀವ ಸುಂದರಿಯೂ ಮಂಗಳ ಮೂರ್ತಿಯು ಆದ ದೇವಿ ಉದ್ಭವಿಸಿದಳು. ದೇವಿಯ ಲಾವಣ್ಯದಿಂದ ಮೋಹಿತನಾದ ಶುಂಭಾಸುರನು ಅವಳನ್ನು ಕರೆತರಲು  ತನ್ನ ದೈತ್ಯರನ್ನು ಕಳುಹಿಸಿದನು. ದೂಮ್ರಲೋಚನನೆಂಬ  ದಂಡಾಧಿಕಾರಿಯೂ ದೇವಿಯ ಹೂಂಕಾರದಿಂದಲೇ  ಬಸ್ಮಿಭೂತನಾದನು.

ಅನಂತರ ರೋಷಾವಿಷೆಯಾಗಿದ್ದ ದೇವಿಯ ಹಣೆಯಿಂದ ಕತ್ತಿಯನ್ನು ಪಾಶವನ್ನು ಧರಿಸಿದ ಕರಾಳವದನೆಯಾದ ಕಾಳಿಕಾ ದೇವಿಯು ಚಂಡ ಮುಂಡರನ್ನು ವಧಿಸಿದ್ದರಿಂದ ಕಾಳಿಗೆ(ಚಾಮುಂಡೇಶ್ವರಿ ) ಚಾಮುಂಡಿ ಎಂಬ ಹೆಸರು  ಬಂದಿತ್ತು.

ಅನಂತರ ರಕ್ತ ಬೀಜಾಸುರ ,ಶುಂಭ -ನಿಶುಂಭ ಇವರೆಲ್ಲರೂ ದೇವಿಯ ವಿವಿಧ ಶಕ್ತಿ ರೂಪಗಳಾದ ಶಿವದೊತೀ, ಕೌಮಾರೀ, ಬ್ರಹ್ಮಿಣಿ, ಮಹೇಶ್ವರಿ ,ವೈಷ್ಣವಿ, ಮೊದಲಾದ ಮಾತೃಕೆಗಳಿಂದ ಮಾಡಿದರು. ಆಮೇಲೆ ದೇವಿಯು ತನ್ನ ಶಕ್ತಿಗಳನ್ನೆಲ್ಲಾ ತನ್ನಲ್ಲಿಯೇ ಉಪ ಸಂಹರಿಸಿಕೊಂಡು ಶುಂಭನನ್ನು ಸಂಹರಿಸಿದಳು.

ದೇವಿ ಮಹಾತ್ಮೆಯನ್ನು ಶ್ರೀ ದುರ್ಗಾಸಪ್ತಶತಿ ಎಂದು ಕರೆಯುತ್ತಾರೆ.ಇದರ ಎಂಟನೇ ಅಧ್ಯಾಯದಲ್ಲಿ ರಕ್ತ ಬೀಜಾಸುರನ ಸಂಹಾರ ಮಾಡಿದ  ವರ್ಣನೆ ಇದೆ .

 

 

ಆಸುರೇಶ್ವರ ಶುಂಭನ ಆದೇಶದಂತೆ ಅಪಾರ ರಾಕ್ಷಸ ಸೇನೆಯು ಚಂಡಿಕಾ ದೇವಿಯ ವಿರುದ್ಧ ಯುದ್ಧ ಮಾಡಲು ಹೊರಟಿತು. ಈ ಮಧ್ಯೆ ದೇವಶತ್ರುಗಳ ಅಳಿವಿಗಾಗಿಯೂ, ದೇವಶ್ರೇಷ್ಠರ ಉಳಿವಿಗಾಗಿಯೂ, ಬ್ರಹ್ಮ, ಈಶ್ವರ ,ಸ್ಕಂದ, ವಿಷ್ಣು ,ಇಂದ್ರ ಇವರ ಅತ್ಯಂತ ವೀರ್ಯಬಲಯುಕ್ತವಾದ ಶಕ್ತಿಗಳು ಅವರವರ ದೇಹದಿಂದ ಹೊರಬಂದು, ಆಯಾ ರೂಪದಿಂದಲೇ ಚಂಡಿಕೆಯನ್ನು ಸೇರಿದರು.

ಯಾವ ದೇವತೆಗೆ ? ಯಾವ ರೂಪವಿತ್ತೂ  ? ಯಾವ ಭೂಷಣ ವಾಹನಗಳಿದ್ದವೋ, ಅವುಗಳ ಆಕಾರವನ್ನೇ ಹೊಂದಿ ಆಯಾ ಶಕ್ತಿಯ ಅಸುರರೊಡನೆ ಯುದ್ಧ ಮಾಡಲು ಬಂದಿತ್ತು. ಆದರೆ ರಕ್ತ ಬೀಜಾಸುರನಿಗೆ ಒಂದು ವರವಿತ್ತು. ಅವನ ಶರೀರದಿಂದ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದರೆ, ಆ ಜಾಗದಿಂದ ಅವನಷ್ಟೇ ಬಲಶಾಲಿಯಾದ ಮಹಾ ಅಸುರನೊಬ್ಬ ಮೇಲೆ ಏಳುತ್ತಿದ್ದ.

ಹೀಗಾಗಿ ದೇವಿಯ ಶಕ್ತಿಯ ಆಯುಧಗಳ ಹೊಡೆತದಿಂದ ರಕ್ತ ಬೀಜಾಸುರನ ರಕ್ತ ಚೆಲ್ಲಿದಂತೆಲ್ಲಾ ಸಾವಿರಾರು ರಾಕ್ಷಸರು ಎದ್ದು ಬರುತ್ತಿದ್ದರು. ಅವರನ್ನೆಲ್ಲ ಕೊಂದು ದೇವಿ ದಣಿದಳು. ಇದನ್ನು ಕಂಡ ದೇವಿ ದೇವತೆಯರು ಗಾಬರಿಗೊಂಡು ದುಃಖಿತರಾದರು. ಆಗ ದೇವಿಯು ಕಾಳಿಯನ್ನು ಕುರಿತು “ಹೇ ಕಾಳಿಕೆ ನಿನ್ನ ಬಾಯಿಯನ್ನು ವಿಸ್ತರಿಸಿ ನನ್ನ ಶಸ್ತ್ರಗಳ ಏಟಿನಿಂದ ಹರಿಯುವ ರಕ್ತದ ಹನಿಗಳನ್ನು ರಕ್ತ ಬಿಂದುವಿನಿಂದ ಹುಟ್ಟಿದ ಮಹಾಸುರನನ್ನು ವೇಗಶಾಲಿಯಾದ ಈ ನಿನ್ನ ಬಾಯಿಯಿಂದ ಹೀರಿಬಿಡು. ಆ ಮಹಾಸುರನನ್ನು ತಿನ್ನುತ್ತಾ ರಣಭೂಮಿಯಲ್ಲಿ ಸಂಚರಿಸುತ್ತಿರು ಎಂದು ಹೇಳಿದಳು. ಅದರಂತೆಯೇ ಕಾಳಿಕೆಯೂ ತನ್ನ ನಾಲಿಗೆಯನ್ನು ನೆಲದಲ್ಲಿ ಹರಡಿ ರಾಕ್ಷಸರ ರಕ್ತವನ್ನೆಲ್ಲಾ ಕುಡಿದಳು. ರಾಕ್ಷಸರ  ದೇಹಗಳನ್ನು ನುಂಗಿದಳು. ಈ ರೀತಿಯ ನೆರವಿನಿಂದ ದೇವಿಯು ರಕ್ತಬೀಜಾಸುರನನ್ನು ಸಂಹರಿಸಿದಳು.

 

 

ಈ ಕಾಳಿ ದೇವಿಯೇ ಉತ್ತನಹಳ್ಳಿಯ ಗುಡ್ಡದಲ್ಲಿ ನೆಲೆಸಿರುವ ಉರಿಮಾರಿ. ಇವಳನ್ನು ಜ್ವಾಲಾಮಾಲಾ, ಜ್ವಾಲಾಮಾಲಿನಿ ಜ್ವಾಲಾಮುಖಿ ತ್ರಿಪುರಸುಂದರಿ ದೇವಿ ಎಂದು ಕರೆಯುತ್ತಾರೆ .ದೇವಿಯ ಪರಾಕ್ರಮದ ಈ ಕಥೆಯನ್ನು ಓದಿ ದೇವಿಯ ದರ್ಶನ ಮಾಡಿ ಅವಳ ಕೃಪೆಗೆ ಪಾತ್ರರಾಗಿ . ದೇವಿಯು ಎಲ್ಲರಿಗೂ ಸನ್ಮಂಗಳವನ್ನು ಉಂಟು ಮಾಡಲಿ.

ಶ್ರೀ ಚಾಮುಂಡೇಶ್ವರಿ ಸಹೋದರಿಯಾದ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಯ  ದೇವಸ್ಥಾನ ಉತ್ತನಹಳ್ಳಿ, ಮೈಸೂರು ಇಲ್ಲಿ ನೆಲೆಯಾಗಿದೆ.

ಅಭಿಷೇಕದ ಸಮಯ – ಬೆಳಗ್ಗೆ ಆರು ಗಂಟೆಯಿಂದ 7 ;30 ವರೆಗೆ.

ಮಹಾಮಂಗಳಾರತಿ – ಬೆಳಗ್ಗೆ  10;30 ಗಂಟೆಗೆ .

ದರ್ಶನದ ವೇಳೆ – ಬೆಳಗ್ಗೆ 7;30 ರಿಂದ ಮಧ್ಯಾಹ್ನ 2.00 ಗಂಟೆಗೆ .

ಮಧ್ಯಾಹ್ನದ ದರ್ಶನದ ವೇಳೆ – 3.30 ರಿಂದ ಸಾಯಂಕಾಲ 8.30 ರವರೆಗೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top