ಸಮಾಚಾರ

ಬಲಗೈ ಇಲ್ಲದ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿ ಉದ್ಯೋಗ ಕೊಡಿಸಿದ ಸಿಎಂ ಕುಮಾರಸ್ವಾಮಿ

ಜನತಾ ದರ್ಶನದ ಮೂಲಕವೇ ಖ್ಯಾತಿ ಗಳಿಸಿದ್ದ ಸಿಎಂ ಕುಮಾರಸ್ವಾಮಿ ಈ ಬಾರಿಯೂ ಅದೇ ರೀತಿ ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಜೆ.ಪಿ,ನಗರದ ನಿವಾಸದ ಮುಂದೆ ತಮ್ಮನ್ನ ಭೇಟಿಯಾದ ಬಲಗೈ ಇಲ್ಲದ ಮಹಿಳೆಗೆ ಕುಮಾರಸ್ವಾಮಿ ಉದ್ಯೋಗ ಕೊಡಿಸಿದ ಘಟನೆ ನಡೆದಿದೆ.

 

 

ಕೆಲವು ದಿನಗಳ ಹಿಂದೆ ಬಲಗೈ ಇಲ್ಲದ ಮಹಿಳೆ ಒಬ್ಬರು ಮಗು ಎತ್ತಿಕೊಂಡು ಸಿಎಂ ಕುಮಾರಸ್ವಾಮಿ ಅವರ ನಿವಾಸದ ಮುಂದೆ ನಿಂತಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳು ಆಕೆಯನ್ನು ಏನಮ್ಮಾ ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಪ್ರತಿಕ್ರಿಯೆ ನೀಡಿದ ಮಹಿಳೆ “ನನ್ನ ಹೆಸರು ಶೈಲಾ, ದಾವಣಗೆರೆಯಿಂದ ಬಂದಿದ್ದೇನೆ, ಲಾರಿ ಅಪಘಾತದಲ್ಲಿ ನನ್ನ ಬಲಗೈ ಕತ್ತರಿಸಿ ಹೋಗಿದೆ, ಆದರೆ ಜೀವನ ನಡೆಸಲು ಎಡಗೈನಲ್ಲಿ ಟೈಪಿಂಗ್ ಮಾಡುವುದನ್ನು ಕಲಿತಿದ್ದೇನೆ, ನನಗೆ ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿದರು.

ಇದನ್ನು ಕೇಳಿ ಮರುಗಿದ ಮುಖ್ಯಮಂತ್ರಿಗಳು ಕುಮಾರಸ್ವಾಮಿ ಅವರು ವಿಧಾನಸೌಧಕ್ಕೆ ಬರಲು ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನ ಭೇಟಿಯಾದ ಶೈಲಜಾಗೆ ದಾವಣಗೆರೆಯಲ್ಲಿ ತಾತ್ಕಾಲಿಕ ಟೈಪಿಸ್ಟ್ ಹುದ್ದೆ ಕೊಡಿಸಿದ್ದಾರೆ. ಮುಖ್ಯಮಂತ್ರಿಗಳ ಸ್ಪಂದನೆಗೆ ಮಹಿಳೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ “ಸರ್ಕಾರಕ್ಕೆ ತಾಯಿ ಹೃದಯ ಇರಬೇಕು, ನಾವು ವ್ಯವಸ್ಥೆಯ ಒಳಗೆ ಏನೆಲ್ಲ ಕೆಲಸ ಮಾಡಲು ಸಾಧ್ಯವಿದೆ, ಆದರೆ ಅಸಂಘಟಿತ ವಲಯದಲ್ಲಿರುವ ವ್ಯಕ್ತಿಗಳಿಗೆ ಸಹಾಯ ನೀಡಲು ನಾವು ಕಾನೂನು ಚೌಕಟ್ಟುಗಳನ್ನು ಸ್ವಲ್ಪ ವಿಸ್ತರಿಸಿ ಕೆಲಸ ಮಾಡ ಬೇಕಾಗುತ್ತದೆ. ಈಕೆಯ ಕಷ್ಟ ನೋಡಿ ಮರುಗಿದ್ದೇನೆ, ಇಂತಹ ನೂರಾರು, ಸಹ್ರಸ್ರಾರು ಜನರಿದ್ದಾರೆ, ಇವರಿಗೆ ಉದ್ಯೋಗ ಕೊಡಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕಾಗಿದೆ” ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top