ಮನೋರಂಜನೆ

ಫೇಸ್‌ಬುಕ್‌ನಲ್ಲಿ ತಮ್ಮ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಿಡಿಗೇಡಿಗಳ ವಿರುದ್ಧ ತಿರುಗಿಬಿದ್ದ ಡಿ ಬಾಸ್.

ಸೋಷಿಯಲ್ ಮೀಡಿಯಾ, ಇಂಟರ್ ನೆಟ್ ಎನ್ನುವುದು ಈವತ್ತಿಗೆ ಎಲ್ಲೇ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು.. ಏಕಮುಖವಾಗಿ ಆಲೋಚನೆ ಮಾಡುವ ಕೆಲಸಿಲ್ಲದ ಕೆಲವು ಅತೃಪ್ತ ಆತ್ಮಗಳು ತಮಗೆ ಹಿಡಿಸದ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡಂತೆ ನಾನಾ ಖ್ಯಾತನಾಮರ ವಿರುದ್ಧ ಸೊಂಟದ ಕೆಳಗಿನ ಭಾಷೆಯಲ್ಲಿ ಕೊಳಕು ಕಾರುತ್ತಾ ವಿಕೃತಾನಂದ ಪಡುವುದನ್ನೇ ಕಸುಬಾಗಿಸಿಕೊಂಡಿದ್ದಾರೆ.. ಇಂಥ ಕೆಲ ಕಿಡಿಗೇಡಿಗಳು ತಮಗಾಗದವರ ಮಾನ ಕಳೆಯಲು ದುರುಪಯೋಗಪಡಿಸಿಕೊಳ್ಳುವುದು ಸೆಲೆಬ್ರೆಟಿಗಳ ಹೆಸರು. ಖ್ಯಾತ ಸೆಲೆಬ್ರೆಟಿಗಳ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ತಮ್ಮ ತೀಟೆಯನ್ನೂ ತೀರಿಸಿಕೊಂಡು ಎಬ್ಬಿಸುವ ರಾದ್ಧಾಂತಗಳು ಒಂದೊಂದಲ್ಲ.

 

 

ದರ್ಶನ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡಿರುವ ವಿಚಾರ ನೆನ್ನೆ ಸಂಜೆ ಹೊತ್ತಿಗೆಲ್ಲಾ ವರದಿಯಾಗಿತ್ತಲ್ಲಾ ಅದರಿಂದ ಇದೀಗ ದಾಸ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಹೆಸರನ್ನು ಮಿಸ್ ಯೂಸ್ ಮಾಡೋರಿಗೆ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ದಾಸ “ಇತ್ತೀಚಿಗೆ ತಿಳಿದು ಬಂದಿರುವಂತೆ ನನ್ನ ಹೆಸರಲ್ಲಿ ಕೆಲವು ಕಿಡಿಗೇಡಿಗಳ ಅನೇಕ ನಕಲಿ ಫೇಸ್ ಬುಕ್ ಖಾತೆಗಳಿವೆ. ಈ ಖಾತೆಗಳಿಂದ ಕೆಲವು ವ್ಯಕ್ತಿಗಳ ಮೇಲೆ ಅವಹೇಳನಕಾರಿ ಹೇಳಿಕೆಗಳು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಈ ರೀತಿ ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಕೊಳ್ಳುವುದಾಗಿ ಹೇಳಿದ್ದಾರೆ. ದಯಮಾಡಿ ಯಾರೂ ಇಂತಹ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಳಕಳಿಯ ವಿನಂತಿ” ಎಂದು ವಿನಮ್ರವಾಗಿ ವಾರ್ನ್ ಮಾಡಿದ್ದಾರೆ.

 

 

 

ಏನಿದು ವಿವಾದ:
‘ದರ್ಶನ್ ತೂಗುದೀಪ’ ಹೆಸರಿನ ಫೇಕ್ ಅಕೌಂಟ್ ಓಪನ್ ಮಾಡಿ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿತ್ತು. ಕೆಲವರು ಇದನ್ನು ದರ್ಶನ್ ಅವರೇ ಮಾಡಿದ್ದಾರೆ ಎಂದು ತಪ್ಪಾಗಿ ಭಾವಿಸಿಕೊಂಡಿದ್ದರು. ಆದರೆ ನಂತರ ಇದನ್ನು ನೀಟಾಗಿ ತಲಾಷು ಮಾಡಿದ ಮೇಲೆ ಗೊತ್ತಾಗಿತ್ತು ಇದು ಯಾರೋ ಕಿಡಿಗೇಡಿಗಳ ಕೈಚಳಕವೆಂದು. ದರ್ಶನ್ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿ ಮುಖ್ಯಮಂತ್ರಿಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸುವ ಕೀಳು ಮನಸ್ಥಿತಿಯ ನೀಚರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂದು ಮುಂದಾಲೋಚಿಸಿದ ಅಖಿಲ ಕರ್ನಾಟಕ ಹೆಚ್ಡಿಕೆ ಅಭಿಮಾನಿಗಳ ಸೇವಾ ಸಂಘ ಕೂಡಲೇ ಹೋಗಿ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ದೂರು ನೀಡಿ ದುಷ್ಕರ್ಮಿಗಳ ಪತ್ತೆಗೆ ಆಗ್ರಹಿಸಿದ್ದರು. ಪೊಲೀಸರು ಕೂಡ ಇಂಥ ವಿಕೃತ ಮನಸ್ಥಿಯ ಕ್ರಿಮಿಕೀಟಗಳ ಪತ್ತೆಗೆ ಬಲೇ ಬೀಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top