ಮನೋರಂಜನೆ

ದುನಿಯಾ ವಿಜಯ್ ಮಗನ ತಾಕತ್ ತೋರಿಸೋಕೆ ಮುಹೂರ್ತ ಫಿಕ್ಸ್..

ಬ್ಲಾಕ್ ಕೋಬ್ರಾ ವಿಜಯ್ ಇದೀಗ ಈಗ ಕುಸ್ತಿ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಅವರಿಗೆ ಸರಿ ಹೊಂದುವಂಥಾ ಪಕ್ಕಾ ಮಾಸ್ ಸಬ್ಜೆಕ್ಟ್ ಹೊಂದಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಪ್ರೇಕ್ಷಕರೆಲ್ಲರಲ್ಲಿಯೂ ಕುತೂಹಲ ಮೂಡಿಕೊಂಡಿದೆ. ಈ ಚಿತ್ರದ ಟೀಸರ್ ಇದೇ 17ನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ. ಟೀಸರ್ ನಲ್ಲಿ ತಮ್ಮ ಪುತ್ರ ಈ ಚಿತ್ರಕ್ಕಾಗಿ ಹೇಗೆಲ್ಲಾ ತಯಾರಿ ನಡೆಸಿದ್ದಾನೆ ಎಂಬುದು ಈ ಟೀಸರ್ ಮೂಲಕ ಅನಾವರಣ ಗೊಳ್ಳಲಿದೆಯಂತೆ.

 

 

ಇಂಥಾ ಚಿತ್ರದಲ್ಲಿ ವಿಜಯ್ ಅವರ ಪುಟ್ಟ ಮಗ ಸಾಮ್ರಾಟ್ ವಿಜಯ್ ನಟಿಸುತ್ತಿದ್ದಾನೆಂಬ ವಿಚಾರ ಈ ಹಿಂದೆಯೇ ಜಾಹೀರಾಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಾಮ್ರಾಟನನ್ನು ಕಸರತ್ತಿನ ವೀಡಿಯೋ ಎಲ್ಲರ ಹುಬ್ಬೇರುವಂತೆ ಮಾಡಿದೆ.ಫಿಟ್ನೆಸ್ ಬಗ್ಗೆ ಅಪಾರವಾದ ಕಾಳಜಿ ಮತ್ತು ಕ್ರೇಜ್ ಹೊಂದಿರುವ ದುನಿಯಾ ವಿಜಯ್ ಈಗಾಗಲೇ ಕುಸ್ತಿಯ ಅಖಾಡಕ್ಕಿಳಿಯಲು ದೇಹವನ್ನು ಮತ್ತಷ್ಟು ಹುರಿಗೊಳಿಸಿಕೊಂಡಿದ್ದಾರೆ. ಇದೀಗ ಖುದ್ದು ವಿಜಯ್ ಅವರೇ ಮುಂದಾಳತ್ವ ವಹಿಸಿ ತಮ್ಮ ಮಗ ಸಾಮ್ರಾಟ್’ನನ್ನು ದೈಹಿಕವಾಗಿ ಕುಸ್ತಿ ಚಿತ್ರದ ಪಾತ್ರಕ್ಕಾಗಿ ಅಣಿಗೊಳಿಸಿದ್ದಾರೆ.

 

 

ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಮತ್ತು ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ವಿಜೇತರಾದ ಪ್ರಸಾದ್ ಅವರಿಂದ ಸಾಮ್ರಾಟನಿಗೆ ವಿಜಯ್ ತರಬೇತಿ ಕೊಡಿಸಿದ್ದಾರೆ. ದೇಹವನ್ನು ಬೇಕಾದಂತೆ ಒಗ್ಗಿಸಿಕೊಳ್ಳುವ ನಾನಾ ಕ್ಲಿಷ್ಟಕರವಾದ ದೈಹಿಕ ಕಸರತ್ತುಗಳನ್ನು ಸಮರ್ಥನಿಂದ ಮಾಡಿಸುತ್ತಾ ಆತನ ದೇಹವನ್ನು ಕುಸ್ತಿ ಚಿತ್ರದ ಪಾತ್ರಕ್ಕಾಗಿ ಒಗ್ಗಿಸಲಾಗಿದೆ. ಇದರ ಜೊತೆಗೇ ಕೆಲ ಸ್ಟಂಟ್ಸ್‌ಗಳ ಪೂರ್ವಭಾವಿ ತರಬೇತಿಯನ್ನೂ ಕೂಡಾ ವಿಜಿ ತಮ್ಮ ಮಗನಿಗೆ ಕೊಡಿಸಿದ್ದಾರೆ.

ಅಂದಹಾಗೆ ಕುಸ್ತಿ ಸಿನಿಮಾವನ್ನು ಕ್ರಿಯೇಟೀವ್‌ ಡೈರೆಕ್ಟರ್‌ ಎಂದು ಹೆಸರುವಾಸಿಯಾಗಿರುವ ಚೂರಿಕಟ್ಟೆ ಖ್ಯಾತಿಯ ರಘು ಶಿವಮೊಗ್ಗ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಉಳಿದ ತಾಂತ್ರಿಕವರ್ಗ ಮತ್ತು ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಲ್ಲಾ ಮಾಹಿತಿಗಳಿಗೂ ಟೀಸರ್ ನಲ್ಲೆ ಉತ್ತರ ಸಿಗಲಿದೆ ಎನ್ನುತ್ತಿದೆ ಚಿತ್ರತಂಡ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top