ಮನೋರಂಜನೆ

ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡ ‘ಅಯೋಗ್ಯ’ ಸಿನಿಮಾ.

ಇತ್ತೀಚಿನ ದಿನಗಳಲ್ಲಿ ತರಹೇವಾರಿ ವಿವಾದಗಳೇಳುವುದು ಸಿನಿಮಾರಂಗದಲ್ಲಿ ಮಾಮೂಲಿನ ವಿಷಯವಾಗಿದೆ.ಮಾರ್ಮಿಕವಾಗಿ ಹೇಳೋದಾದರೆ ಖರ್ಚಿಲ್ಲದೇ ತಮ್ಮ ಸಿನಿಮಾ ಪ್ರಚಾರಕ್ಕಾಗಿ ವಿವಾದದ ರೂಟು ಹಿಡಿದ್ದಾರೆಯೇ ಎಂಬ ಡೌಟ್ ಹಲವರಲ್ಲಿ ಮೂಡಿಕೊಂಡಿದೆ. ಮಾಮೂಲಾಗಿ ಒಂದು ಚಿತ್ರದ ಪ್ರಚಾರಕ್ಕೆ ಅದರ ಒಟ್ಟಾರೆ ಬಜೆಟ್ಟಿಗೆ ಸರಿಸಮನಾದ ಕಾಸು ಖರ್ಚು ಮಾಡಬೇಕಾಗುತ್ತೆ. ಆದರೆ ಯಾರನ್ನಾದರೂ ಕೆರಳಿಸುವ ಸನ್ನಿವೇಶವನ್ನು ಸೃಷ್ಟಿಸಿ ಬಿಟ್ಟರೆ ಪ್ರಚಾರವೆಂಬುದು ಹೋದಲ್ಲಿ ಬಂದಲ್ಲಿ ಹಿಂಬಾಲಿಸಿಕೊಂಡು ಬರುತ್ತದೆ.

 

 

ಇದೀಗ ಇಂತದ್ದೇ ಸಿಲ್ಲಿ ಕಾರಣಕ್ಕೆ ವಿವಾದವನ್ನು ಸೃಷ್ಟಿಸಿರೋದು ಅಭಿನಯ ಚತುರ ಎಂದು ಕರೆಸಿಕೊಳ್ಳುವ ನೀನಾಸಂ ಸತೀಶ್ ಅಭಿನಯದಲ್ಲಿ ಮೂಡಿಬಂದಿರೋ ಅಯೋಗ್ಯ ಸಿನಿಮಾ. ಸದರಿ ಚಿತ್ರಕ್ಕೆ ಫಿಲ್ಮಂ ಚೇಂಬರ್’ನಲ್ಲಿ ‘ಅಯೋಗ್ಯ’ ಎನ್ನುವ ಟೈಟಲ್ ಮಾತ್ರ ನೊಂದಣಿಯಾಗಿದ್ದು ಪ್ರಚಾರದ ವೇಳೆ ಮಾತ್ರ ‘ಅಯೋಗ್ಯ’ ಪದದ ಜೊತೆಗೆ ‘ಗ್ರಾಮ ಪಂಚಾಯಿತಿ ಸದಸ್ಯ’ ಎಂಬ ಅಡಿಬರಹವನ್ನು ಸೇರಿಸಿಕೊಳ್ಳಲಾಗಿದೆ. ಇದನ್ನು ಕಂಡು ಕೆರಳಿರುವ ಕನ್ನಡ ಕ್ರಾಂತಿ ದಳ ಸಂಘಟನೆ ಟೈಟಲ್ ವಿಚಾರವಾಗಿ ತಗಾದೆ ತೆಗೆದಿದೆ.

ಚುನಾವಣೆಯಲ್ಲಿ ಜನರಿಂದಲೇ ಆಯ್ಕೆಯಾಗುವ ಗ್ರಾಮಪಂಚಾಯತಿಯ ಸದಸ್ಯನನ್ನು ‘ಅಯೋಗ್ಯ’ ಚಿತ್ರತಂಡ ಅಯೋಗ್ಯ ಎಂಬರ್ಥದಲ್ಲಿ ಬಿಂಬಿಸುತ್ತಿದೆ. ಇದು ಜನರಿಗೆ ಮತ್ತು ಪ್ರಜಾಪ್ರಭಭುತ್ವಕ್ಕೆ ಮಾಡಲಾಗುತ್ತಿರುವ ಘನಘೋರ ಅಪಚಾರ ಎನ್ನುವುದು ಕನ್ನಡ ಕ್ರಾಂತಿದಳದ ವಾದ. ಅಲ್ಲದೆ ಗ್ರಾಮ ಪಂಚಾಯಿತಿ ಸದಸ್ಯ ಎನ್ನು ಉಪ ಶೀರ್ಷಿಕೆಯನ್ನು ಕೈ ಬಿಡಬೇಕು ಎಂದು ಮೈಸೂರಿನ ಕನ್ನಡ ಕ್ರಾಂತಿ ದಳ ಸಂಘಟನೆ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದೆ.

 

 

ಈ ಬಗ್ಗೆ ಚಿತ್ರದ ನಾಯಕ ಸತೀಶ್ ಅವರೇ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಪ್ರತಿಕ್ರಿಯಿಸಿದ್ದು “ಗೆಳೆಯರೇ “ಅಯೋಗ್ಯ” ಚಿತ್ರದ ಅಡಿಬರಹ ‘ಗ್ರಾಮ ಪಂಚಾಯಿತಿ ಸದಸ್ಯ’ಸಿನಿಮಾ ನೋಡದೇ ವಿರೋಧ ವ್ಕಕ್ತ ಪಡಿಸುವುದು ಸರಿಯಲ್ಲ ,ಇಲ್ಲಿ ಯಾವುದೇ ಸದಸ್ಯನಿಗೂ ಧಕ್ಕೆ ಬರುವ ರೀತಿಯ ದೃಷ್ಯಗಳು ಯಾವುದು ಇಲ್ಲ. ಸಿನಿಮಾ ನೋಡಿ ನಂತರ,ನಿಮ್ಮ ಅಭಿಪ್ರಾಯಗಳನ್ನ ಮುಕ್ತವಾಗಿ ಸ್ವೀಕರಿಸಲು ನಾವು ತಯಾರು…..” ಎಂದು ಬರೆದುಕೊಂಡಿದ್ದಾರೆ. “ಚಿತ್ರದ ಕತೆಗೆ ಈ ಪದ ಹೊಂದಾಣಿಕೆಯಾಗುತ್ತದೆ ಎಂದು ಬಳಸಿಕೊಂಡಿದ್ದೇವೋ ಹೊರೆತು ಯಾರಿಗೂ ನೋಯಿಸಬೇಕು ಎಂಬ ಉದ್ದೇಶ ನಮಗಿಲ್ಲ. ಸಿನಿಮಾ ನೋಡುವ ಮುಂಚೆಯೇ ಯಾವುದನ್ನೂ ನೀವೇ ಊಹಿಸಿಕೊಳ್ಳಬೇಡಿ ..ಸಿನಿಮಾ ನೋಡಿದ ಮೇಲೆ ನನ್ನ ಅಡಿಬರಹ ತಪ್ಪು ಅನಿಸಿದರೆ ನಾನು ಆ ಕ್ಷಣವೇ ಅದನ್ನು ಕೈಬಿಟ್ಟು ತೆಗೆದು ಕ್ಷಮೆಕೇಳಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top