ಮನೋರಂಜನೆ

ಉಪ್ಪಿಗೆ ಹೊಸ ಚಾಲೆಂಜ್ ಒಡ್ಡಿದ ಕಿಚ್ಚ.

ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಚಾಲೆಂಜ್ ಹುಟ್ಟುಹಾಕೋದು ಇತ್ತೀಚಿನ ದಿನಗಳ ಟ್ರೆಂಡ್ ಆಗಿಹೋಗಿದೆ. ಅದರಲ್ಲೂ ಸಿನಿಮಾ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡು ಅದರ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಹವ್ಯಾಸ. ಈ ಹಿಂದೆ ಸ್ಯಾನಿಟರಿ ಪ್ಯಾಡ್‌‌‌‌‌‌‌‌‌‌‌‌‌‌ಗಳನ್ನು ಕೈಯಲ್ಲಿ ಹಿಡಿದು ಆ ಫೊಟೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌‌ಲೋಡ್ ಮಾಡಿದ್ದ ಮತ್ತು ಇತ್ತೀಚಿಗೆ ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಫಿಟ್ನೆಸ್ ಚಾಲೆಂಜ್ ವೈರಲ್ ಆಗಿದ್ದು ಗೊತ್ತೇ ಇದೆ ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವ್ರು ಹೊಸ ಚಾಲೆಂಜೊಂದನ್ನ ಹುಟ್ಟುಹಾಕಿದ್ದಾರೆ.

 

 

ಆಸುಪಾಸಿನ ನಟರು ಜಿಮ್ಮು ಸೇರಿಕೊಂಡು ಬೆವರಿಳಿಸಿ ಅಂಗಸೌಷ್ಠವ ವೃದ್ಧಿಸಿಕೊಳ್ಳುತ್ತಿದ್ದರೂ ಸುದೀಪ್ ಮಾತ್ರ ಅಷ್ಟಾಗಿ ಬಾಡಿ ಟ್ಯೂನಿಂಗ್‌ನತ್ತ ಗಮನ ಹರಿಸಿದವರಲ್ಲ. ಆದರೆ, ಪೈಲ್ವಾನ್ ಚಿತ್ರದ ದೆಸೆಯಿಂದಾಗಿ ಕಿಚ್ಚ ಕೂಡ ಜಿಮ್’ನತ್ತ ಮುಖ ಮಾಡಿದ್ದಾರೆ. ಜಿಮ್ ಒಳಗಿಂದಲೇ ‘ಪೈಲ್ವಾನ್ ಇನ್ ಯು'(phailwan in you) ಎನ್ನುವ ಹೊಸ ಅಭಿಯಾನವೊಂದನ್ನು ಆರಂಭಿಸಿರುವ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳನ್ನು ಒಳಗೊಂಡಂತೆ ಇಡೀ ಚಿತ್ರರಂಗಕ್ಕೆ ಹೊಸ ಚಾಲೆಂಜ್ ಹಾಕಿದ್ದಾರೆ.

ವಿಶೇಷವಾಗಿ ರಿಯರ್ ಸ್ಟಾರ್ ಉಪೇಂದ್ರ ಅವರಿಗೆ ನೇರ ಚಾಲೆಂಜ್ ರವಾನಿಸಿರುವ ಸುದೀಪ್ ”ನಾನು ‘ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು(bring out phailwan in you)’ ಚಾಲೆಂಜ್ ಅನ್ನು ನಿಮಗೆ (ಉಪೇಂದ್ರ) ನೀಡುತ್ತಿದ್ದೇನೆ. ಯಾವಾಗಲೂ ನೀವು ತುಂಬಾ ಫಿಟ್ ಆಗಿದ್ದೀರಾ. ನೀವು ಇನ್ನೂ ಹೆಚ್ಚು ಜನರಿಗೆ ಸ್ಫೂರ್ತಿ ನೀಡಬಹುದು ಎಂದು ನನಗೆ ನಂಬಿಕೆ ಇದೆ. ಸರ್” ಎಂದು ಟ್ವೀಟ್ ಮಾಡಿದ್ದಾರೆ.

 

 

ಏನಿದು ಹೊಸ ಚಾಲೆಂಜ್:
ಈ ಚಾಲೆಂಜ್ ಪ್ರಕಾರ ಸವಾಲು ಸ್ವೀಕರಿಸಿದವರು ತಮ್ಮ ಈಗಿನ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕು. ನಂತರ ಪ್ರತಿದಿನ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರ ಅವರು ಮತ್ತೆ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆಗ ಎರಡು ಫೋಟೋಗಳ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆಯಾಗಿರುತ್ತದೆ ಎಂಬುದನ್ನು ತೋರಿಸಬೇಕು. ಹೀಗೆ ಪ್ರತಿ ತಿಂಗಳೂ ಒಂದೊಂದು ಫೋಟೋವನ್ನು ಅಪ್ಲೋಡ್ ಮಾಡುತ್ತಿರಬೇಕು. ಸುದೀಪ್ ಅವರ ಈ ಚಾಲೆಜಿಂಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು ನಿರ್ದೇಶಕ ಕೃಷ್ಣ, ಕಾರ್ತಿಕ್ ಗೌಡ, ಅನೂಪ್ ಭಂಡಾರಿ, ಪವನ್ ಒಡೆಯರ್ ,ರಾಜೀವ್ ಸೇರಿದಂತೆ ಸಾಕಷ್ಟು ಮಂದಿ ಅಭಿಮಾನಿಗಳು ಈ ಸವಾಲನ್ನು ಸ್ವೀಕರಿಸಿ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

 

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top