ಮನೋರಂಜನೆ

ವಿಜಯಲಕ್ಷ್ಮೀ ನೋವಿಗೆ ಕರಗಿದ ದುನಿಯಾ ವಿಜಯ್- ಕುಸ್ತಿ ಅಖಾಡಕ್ಕಿಳಿಯೋಕೆ ಸೇವಂತಿ ರೆಡಿ.

ಇತ್ತೀಚಿಗೆ ಮೀಡಿಯಾ ಮುಂದೆ ಪ್ರತ್ಯಕ್ಷಳಾಗಿ ತನ್ನ ಬದುಕಿನ ನೋವು, ಸಂಕಟಗಳನ್ನೆಲ್ಲಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರಲ್ಲಾ ನಟಿ ವಿಜಯಲಕ್ಷ್ಮಿ ಆಕೆಯ ನೋವಿಗೆ ನಟ ದುನಿಯಾ ವಿಜಯ್ ಸ್ಪಂದಿಸಿದ್ದಾರೆ. ಒಂದು ಕಾಲದಲ್ಲಿ ತಮ್ಮನ್ನು ದುಡಿಸಿಕೊಂಡಿದ್ದ ಚಿತ್ರರಂಗ ಇದೀಗ ತಮ್ಮ ಕಷ್ಟಕಾಲದಲ್ಲಿ ಕೈಹಿಡಿಯುತ್ತಿಲ್ಲ, ಜೀವನ ಸಾಗಿಸೋಕು ತನ್ನ ಬಳಿ ದುಡ್ಡಿಲ್ಲ, ಸಿನಿಮಾ ಬಿಟ್ಟು ನನಗೇನು ಬರಲ್ಲ ಯಾರಾದ್ರೂ ನನಗೆ ಅವಕಾಶ ಕೊಡಿ ಎಂತೆಲ್ಲಾ ಚಾನೆಲ್’ನಲ್ಲಿ ಕೂತು ಗೊಳೋ ಅಂತ ತೋಡಿಕೊಂಡಿದ್ದ ದುಃಖಕ್ಕೆ ದುನಿಯಾ ವಿಜಯ್ ಕರಗಿದ್ದಾರೆ. ಸಿನಿಮಾ ಅವಕಾಶಗಳಿಗಾಗಿ ಸೆರಗೊಡ್ಡಿ ಅಂಗಲಾಚುತ್ತಿರುವ ವಿಜಯಲಕ್ಷ್ಮಿಗೆ ವಿಜಿ ತಮ್ಮ ಮುಂದಿನ ಕುಸ್ತಿ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದ್ದಾರಂತೆ.

 

 

ದುನಿಯಾ ವಿಜಯ್ ನಟಿಸಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ವಿಜಯಲಕ್ಷ್ಮಿ ಅವರಿಗೆ ಯಾವ ಪಾತ್ರ ಸಿಕ್ಕಿದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲವಾದರೂ ಅದು ಚಿತ್ರದ ಪ್ರಮುಖ ಪಾತ್ರ ಎನ್ನುವುದು ಮಾತ್ರ ನಿಕ್ಕಿಯಾಗಿದೆ. ಕುಸ್ತಿ ಸಿನಿಮಾವನ್ನು ಕ್ರಿಯೇಟೀವ್‌ ಡೈರೆಕ್ಟರ್‌ ಎಂದು ಹೆಸರುವಾಸಿಯಾಗಿರುವ ಚೂರಿಕಟ್ಟೆ ಖ್ಯಾತಿಯ ರಘು ಶಿವಮೊಗ್ಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ದುನಿಯಾ ವಿಜಿ ಮಗ ಸಾಮ್ರಾಟ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ವಿಜಯಲಕ್ಷ್ಮಿ ಅವರ ನೋವಿಗೆ ಕೇವಲ ವಿಜಯ್ ಮಾತ್ರವಲ್ಲದೆ ಚಿತ್ರರಂಗದ ಅನೇಕ ಸಿನಿಮಾಕರ್ತರು ಸ್ಪಂದಿಸಿದ್ದು ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶಗಳನ್ನ ನೀಡುತ್ತಿದ್ದರಂತೆ. ನಿರ್ಮಾಪಕ ಎನ್.ಎಂ.ಸುರೇಶ್ ಕೂಡ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಕಾಲದ ಸ್ಟಾರ್ ನಟಿ ಟಿವಿಯಲ್ಲಿ ಕೂತು ಗೋಗರಿಯುವುದನ್ನು ನೋಡಿ ಅವಕಾಶಗಳನ್ನು ನೀಡುವ ಮೂಲಕ ನೆರವಿಗೆ ದಾವಿಸುತ್ತಿರುವುದು ಆಕೆಯ ಬದುಕಿಗೆ ಪುನರ್ಚೆತನ ನೀಡಲಿದೆ ಎಂಬುದು ಅನೇಕರ ಅಭಿಪ್ರಾಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top