ಮನೋರಂಜನೆ

ಯಶ್ ಹತ್ಯೆಗೆ ಸಂಚು ಎಂಬುದು ಶುದ್ಧ ಸುಳ್ಳು ಸುದ್ದಿ- ಪೊಲೀಸ ಅಧಿಕಾರಿಗಳ ಸ್ಪಷ್ಟನೆ.

ಎಂಥದೇ ಪ್ರಕರಣವಾಗಲಿ ಅದಕ್ಕೆ ಮತ್ತೊಂದು ವಿಚಾರವನ್ನು ಥಳುಕು ಹಾಕಿ ಬ್ರೇಕಿಂಗ್ ನ್ಯೂಸ್ ಸೃಷ್ಟಿಸೋದರಲ್ಲಿ ಇಂದಿನಕಾಲದ ನ್ಯೂಸ್ ಚಾನೆಲ್’ಗಳು ನಿಸ್ಸೀಮರು. ನೀರುಕುಡಿದಷ್ಟು ಸುಲಭವಾಗಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಹವ್ಯಾಸ ರೂಢಿಸಿಕೊಂಡಿರೋ ಇವರುಗಳು ತಮ್ಮ ವೃತ್ತಿಧರ್ಮಕ್ಕೆ ಸಂಪೂರ್ಣವಾಗಿ ಗುಡ್ ಬೈ ಹೇಳಿದಂತಿದೆ. ಟಿಆರ್’ಪಿ ಹುಚ್ಚಿಗೆ ಬಿದ್ದಿರುವ ಕೆಲ ಚಾನೆಲ್ಲುಗಳು ತಮ್ಮ ಕರ್ತವ್ಯವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಾ ಯಾಮಾರಿಸುತ್ತಿವೆ. ಇಂಥಾ ನ್ಯೂಸ್ ಚಾನೆಲ್ಗಳ ಬ್ರೇಕಿಂಗ್ ನ್ಯೂಸ್ ಹುಚ್ಚಿಗೆ ಬಲಿಯಾಗಿರೋದು ರಾಕಿಂಗ್ ಸ್ಟಾರ್ ಯಶ್.

 

 

ಕುಖ್ಯಾತ ಭೂಗತ ಕ್ರಿಮಿನಲ್ ಸೈಕಲ್ ರವಿ ಜೂನ್ 27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿ ಸದ್ಯ ಪೋಲೀಸರ ಅಥಿತಿಯಾಗಿದ್ದಾನೆ.. ಈ ಸುದ್ದಿಯನ್ನು ತೆವಲು ತೀರಿಸಿಕೊಳ್ಳಲು ತಮಗೆ ಬೇಕಾದ ರೀತಿಯಲ್ಲಿ ತಿರುಚಿದ ಕೆಲ ಮಾಧ್ಯಮಗಳು “ಯಶ್ ಹತ್ಯೆಗೆ ಸಂಚು ರೂಪಿಸಲಾಗಿತ್ತು, ಈ ವಿಚಾರವನ್ನು ಸ್ವತಃ ಸಿಸಿಬಿ ಅಧಿಕಾರಿಗಳೇ ತಮಗೆ ತಿಳಿಸಿದ್ದಾರೆ” ಎಂದು ಸುದ್ದಿ ಹರಡಿಸಿದ್ದರು. ಯಾವಾಗ ಈ ಸುದ್ದಿ ಟಿವಿ ಪರದೆ ಸೀಳಿಕೊಂಡು ಊರ ತುಂಬೆಲ್ಲಾ ಕಾಡ್ಗಿಚ್ಚಿನಂತೆ ಹರಡಿಕೊಂಡಿತೋ ಯಶ್ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಒಂದೇ ಕ್ಷಣ ಇತರೆ ಜನಸಾಮನ್ಯರಿಗೂ ಆತಂಕದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಬಗ್ಗೆ ಇದೀಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೋಲೀಸ್ ಅಧಿಕಾರಿ ಸತೀಶ್ ಕುಮಾರ್ “ಇವೆಲ್ಲವೂ ಶುದ್ಧಸುಳ್ಳು ಸುದ್ದಿ, ಮಾಧ್ಯಗಳ ಸೃಷ್ಟಿ. ಒಂದು ವೇಳೆ ಆ ರೀತಿ ಯಾವುದಾದರೂ ಗಂಭೀರ ಸುದ್ದಿ ಇದ್ದಲ್ಲಿ ನಾವೇ ತಿಳಿಸುತ್ತೇವೆ.. ಯಾರೋ ಸುಮ್ಮನೆ ಸುಳ್ಳುಸುದ್ದಿ ಹರಡಿಸಿದ್ದಾರೆ ” ಎಂದು ಸ್ಪಷ್ಟ ಪಡಿಸಿದ್ದಾರೆ. ಆ ಮೂಲಕ ಜನರ ಆತಂಕಕ್ಕೆ ಕಾರಣವಾಗಿದ್ದ ಗೊಂದಲವೊಂದು ಅಧಿಕೃತವಾಗಿ ಕೊನೆಯಾಗಿದೆ.

ಏನಿದು ಸುಳ್ಳು ಸುದ್ದಿ:
ಎರಡೂವರೆ ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಗಣ್ಯ ವ್ಯಕ್ತಿಗಳ ಮಕ್ಕಳ ಪಾರ್ಟಿಯಲ್ಲಿ ಯಶ್ ಅವರನ್ನು ಕೊಲೆ ಮಾಡುವ ಪ್ರಸ್ತಾಪ ಆಗಿತ್ತು. ಯಾರಿಗೂ ತಿಳಿಯದ ರೀತಿಯಲ್ಲಿ ಯಶ್ ಹತ್ಯೆ ಮಾಡಬೇಕು ಎಂದು ಆ ಸಂದರ್ಭದಲ್ಲಿ ಮಾತಾಡಿದ್ದರು. ಆದರೆ ಆನಂತರದಲ್ಲಿ ಯಾರೂ ಸಂಚು ರೂಪಿಸುವ ಮಟ್ಟಕ್ಕೆ ಹೋಗಿಲ್ಲ.. ಆ ವೇಳೆ ನಡೆಯುತ್ತಿದ್ದ ಸ್ಟಾರ್ ವಾರ್ ನಿಂದಲೇ ಯಶ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಗಳನ್ನು ಪೊಲೀಸ್ರ ಬಳಿ ಇರುವ ಸೈಕಲ್ ರವಿ ಹೊರಹಾಕಿದ್ದಾನೆ” ಎಂದು ಕನ್ನಡದ ಕೆಲ ಘನತೆವೆತ್ತ(?) ಮಾಧ್ಯಮಗಳು ಪ್ರಸಾರ ಮಾಡಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top