ಮನೋರಂಜನೆ

ಸಂಜಯ್​ ದತ್​ ಜೀವನಾಧಾರಿತ​ ‘ಸಂಜು’ ಸಿನಿಮಾ ವಿರುದ್ಧ ಆರ್​ಎಸ್​ಎಸ್ ಆಕ್ರೋಶ.

ಬಾಲಿವುಡ್‌ನ ಈ ಹಿಂದಿನ ತಲೆಮಾರಿನ ನಟರಲ್ಲಿ ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದ, ಸದಾ ಒಂದಿಲ್ಲೊಂದು ವಿವಾದಗಳಿಗೆ ಸಿಕ್ಕಿಕೊಳ್ಳುತ್ತಿದ್ದ ನಟ ಸಂಜಯ್ ದತ್. ತನ್ನ ಯೌವನದ ಹುಮ್ಮಸ್ಸಿನಲ್ಲಿ ಧಾರಾಳವಾಗಿಯೇ ಅಡ್ಡದಾರಿಯನ್ನೂ ಹಿಡಿದು ಆ ಹುರುಪಿನಲ್ಲಿ ಮಾಡಿಕೊಂಡಿದ್ದ ಯಡವಟ್ಟೊಂದಕ್ಕೆ ವರ್ಷಗಳ ಕಾಲ ಜೈಲು ಹಕ್ಕಿಯಾಗಿಯೂ ಹೊರ ಬಂದಿದ್ದಾನೆ. ಇಂಥಾ ಹಿನ್ನೆಲೆ ಇರುವ ಸಂಜಯ್ ದತ್ ಜೀವನವನ್ನು ಆಧರಿಸಿದ ‘ಸಂಜು’ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ. ದೇಶದ ಬಹುತೇಕ ಚಿತ್ರಮಂದಿರಗಳಲ್ಲಿ ಸಂಜು ಬಾಬಾ ಎಗ್ಗಿಲ್ಲದೆ ನುಗ್ಗುತ್ತಿದ್ದಾನೆ. ಚಿತ್ರರಂಗದ ಇತರೇ ನಟ ನಟಿಯರೂ ಸೇರಿದಂತೆ ದೇಶದ ಗಣ್ಯರೂ ಈ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡಿ ಈ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

 

 

ರಂಗು ರಂಗಾದ ವ್ಯಕ್ತಿತ್ವ ಹೊಂದಿರುವ ಸಂಜಯ್ ದತ್ ಜೀವನವನ್ನು ಸಿನಿಮಾ ಚೌಕಟ್ಟಿಗೆ ಹೇಗೆ ಒಗ್ಗಿಸಲಾಗಿದೆ ಎಂಬ ಕ್ಯೂರಿಯಾಸಿಟಿಯಿಂದ ಚಿತ್ರಪ್ರೇಮಿಗಳು ಚಿತ್ರಮಂದಿರಗಳತ್ತ ದೌಡಾಯಿಸುತ್ತಿದ್ದಾರೆ. ಪರಿಣಾಮ ಬಾಲಿವುಡ್ ಬಾಕ್ಸ್ ಆಫೀಸ್ ದಾಖಲೆಗಳೆಲ್ಲಾ ಮುರಿದು ಬೀಳುತ್ತಿವೆ. ಒಂದೇ ವಾರದಲ್ಲೇ ಇನ್ನೂರು ಕೋಟಿಗಳಿಗಿಂತಲೂ ಹೆಚ್ಚು ಹಣ ಬಾಚಿಕೊಂಡಿರುವ ‘ಸಂಜು’ ಚಿತ್ರದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಡಿ ಹೊಗಳಿದರೇ ಇತ್ತ ಬಿಜೆಪಿಯ ಅಂಗಸಂಸ್ಥೆಯಾಗಿರುವ RSS ಸಿನಿಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ತನ್ನ ಮುಖ್ಯ ಪತ್ರಿಕೆ ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಸಂಜು ಚಿತ್ರದ ವಿರುದ್ಧ ಕಿಡಿಕಾರಿದೆ. ‘ಕಿರ್​ದಾರ್​ ದಾಗ್​ದಾರ್​’ ಎಂಬ ತಲೆ ಬಹರ ನೀಡಿರುವ ಈ ಲೇಖನದಲ್ಲಿ ಸಂಜುವಿನಂತ ಚಿತ್ರಗಳು ಅಪರಾಧಿಗಳು ಮತ್ತು ಮಾಫಿಯಾವನ್ನು ವೈಭವೀಕರಿಸುತ್ತವೆ ಎಂದು ಹೇಳಿದೆ. ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಹಿಂದೂ ವಿರೋಧಿ ಸಿನಿಮಾಗಳನ್ನು ತೆಗೆಯುತ್ತಾರೆ. ಅವರ ಹಿಂದಿನ ‘ಪಿಕೆ’ ಸಿನಿಮಾ ಸಹ ಹಿಂದೂ ವಿರೋಧಿಯಾಗಿತ್ತು. ಇದೀಗ ಸಂಜು ಸಿನಿಮಾ ಮೂಲಕ ಸಂಜಯ್ ದತ್ ಅವರು ಮಾಡಿರುವ ತಪ್ಪು ಮತ್ತು ಅವರ ಕೆಟ್ಟ ಗುಣಗಳನ್ನು ಮರೆಮಾಚಲಾಗಿದೆ..ಅಷ್ಟಕ್ಕೂ ಸಂಜಯ್​ ದತ್​ ಅದ್ಯಾವ ಘನಕಾರ್ಯ ಮಾಡಿದ್ದಾರೆ ಎಂದು ಅವರ ಬಯೋಪಿಕ್ ಸಿನಿಮಾ ಮಾಡಬೇಕಿತ್ತು.. ಚಿತ್ರದಲ್ಲಿ ಅವರ ವ್ಯಕ್ತಿತ್ವವನ್ನು ವೈಭವೀಕರಿಸಿ ಅವರನ್ನು ಉತ್ತಮ ವ್ಯಕ್ತಿ ಎಂಬಂತೆ ಬಿಂಬಿಸಲಾಗಿದೆ ಎಂದು RSS ಟೀಕಿಸಿದೆ.

ಅಂದಹಾಗೆ ಬಾಲಿವುಡ್ ನಟರಲ್ಲಿ ಅತ್ಯಂತ ಹೆಚ್ಚು ಸಲ ವಿವಾದದ ಕೇಂದ್ರ ಬಿಂದುವಾಗಿದ್ದ ನಟ ಎನಿಸಿಕೊಂಡಿರುವ ಸಂಜಯ್ ದತ್ ವಿವಾದಾತ್ಮಕ ನಡೆ-ನುಡಿಗಳಿಂದಾಗಿ ಸದಾ ಸುದ್ದಿಯಲ್ಲಿದ್ದು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. 1993 ರ ಮುಂಬೈ ಬಾಂಬ್ ಬ್ಲಾಸ್ಟ್ ಕೇಸಿನಲ್ಲಿ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದ ಸಂಜಯ್ ದತ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ(ಎಕೆ-56 ರೈಫಲ್) ಹೊಂದಿದ್ದ ಅಪರಾಧ ಸಾಬೀತಾಗಿತ್ತು. ಇದೇ ಪ್ರಕರಣದಲ್ಲಿ ಆರು ವರ್ಷಗಳ ಕಾಲ ಜೈಲು ಹಕ್ಕಿಯಾಗಿದ್ದ ಸಂಜಯ್ ದತ್ 2016ರಲ್ಲಿ ರಿಲೀಸ್ ಆಗಿದ್ದರು…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top