ಮನೋರಂಜನೆ

ನಾಗರಹಾವು ಚಿತ್ರದ ಓಬವ್ವನ ಪಾತ್ರವನ್ನ ಮಾಡಲ್ಲ ಅಂತ ಕಲ್ಪನಾ ಹೇಳಿದ್ದೇಕೆ ಗೊತ್ತಾ?

ನಾಗರಹಾವು… ಈ ಎವರ್ ಗ್ರೀನ್ ಕನ್ನಡ ಸಿನಿಮಾಗೆ ಸ್ಪೆಷಲ್ ಪವರ್ ಇದೆ., ಹೌದು ಸಾಹಸಸಿಂಹ ವಿಷ್ಣುವರ್ಧನ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಮೊದಲ ಸಿನಿಮಾ ‘ನಾಗರಹಾವು’. ಹಾಗೆ ಬುಸ್ಸೆಂದು ಪರದೆ ಸೀಳಿಬಂದ ನಾಗರಹಾವು ಸೃಷ್ಟಿಸಿದ ಇತಿಹಾಸ ಬಹುದೊಡ್ಡದು. ವಿಷ್ಣುವರ್ಧನ್​ ಮತ್ತು ಅಂಬರೀಶ್​ ಅನ್ನೋ ಸೂಪರ್ ಸ್ಟಾರ್​ಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ಈ ಚಿತ್ರ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರ್ತಿದೆ.

 

ಇಂಥಾ ನಾಗರಹಾವು ಚಿತ್ರದ ಹಾಡೊಂದರಲ್ಲಿ ಓಬವ್ವನಾಗಿ ಅಬ್ಬರಿಸಿರುವ ಜಯಂತಿಯವರ ಅಭಿನಯವನ್ನು ಯಾರು ಮರೆಯುವಂತಿಲ್ಲ. ಓಬವ್ವನಾಗಿ ಅವರು ಎಷ್ಟು ಚೆಂದವಾಗಿ ನಟಿಸಿದ್ದರು ಎಂದರೆ, ಇಂದಿಗೂ ‘ಓಬವ್ವ’ ಎಂಬ ಹೆಸರು ಕೇಳಿದ ಕೂಡಲೇ ಬಹುತೇಕರ ಕಣ್ಣ ಮುಂದೆ ಬರುವುದು ನಾಗರಹಾವು ಚಿತ್ರದ ಜಯಂತಿ.. ಇಂಥಾ ಓಬವ್ವನ ಪಾತ್ರಕ್ಕೆ ಜಯಂತಿಗಿಂತ ಮೊದಲು ಮಿನುಗುತಾರೆ ಕಲ್ಪನಾರನ್ನು ಕೇಳಲಾಗಿತ್ತಂತೆ ಆದರೆ ಅದನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದರಂತೆ.. ಆನಂತರ ಆ ಪಾತ್ರಕ್ಕೆ ಜಯಂತಿಯವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ..

ಮೊನ್ನೆ ಚಿತ್ರರಂಗದ ಗಣ್ಯರಿಗೆ ನಾಗರಹಾವು ಚಿತ್ರದ ನೂತನ ಅವತರಣಿಕೆಯ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಆ ವೇಳೆ ಅಂಬರೀಷ್, ಲೋಕನಾಥ್, ಶಿವರಾಮ್, ಜಯಂತಿ, ಲೀಲಾವತಿ, ಭಾರತಿ  ಹಾಜರಿದ್ದರು. ಉಪಸ್ಥಿತರಿದ್ದ ಎಲ್ಲರೂ ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆ ವೇಳೆ ಈ ಓಬವ್ವನ ಬಗೆಗಿನ ಕುತೂಹಲಕಾರಿ ಸಂಗತಿ ಬಹಿರಂಗವಾಯಿತು.. ಅದನ್ನು ಹೇಳಿದ್ದು ಓಬವ್ವನ ಪಾತ್ರ ಮಾಡಿದ್ದ ಸಾಕ್ಷಾತ್ ಜಯಂತಿಯವರೇ. ತಮ್ಮ ಸರದಿ ಹಿಡಿದಾಗ ಮೈಕು ಹಿಡಿದು ಮಾತನಾಡಲು ಆರಂಭಿಸಿದ ಜಯಂತಿ ಚಿತ್ರದ ಬಗ್ಗೆ ಕೊಂಡಾಡಿದರು, ಕನ್ನಡಿಗರೆಲ್ಲರೂ ಈ ಚಿತ್ರವನ್ನು ನೋಡಿ ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಕೇಳಿಕೊಂಡರು. ನಂತರ ತಾವು ಮಾಡಿದ್ದ ಓಬವ್ವನ ಪಾತ್ರದ ಬಗ್ಗೆ ಮಾತನಾಡಲು ಶುರುಮಾಡಿದ ಜಯಂತಿ “ನಾನು ಮಾಡಿದ್ದ ಓಬವ್ವನ ಪಾತ್ರಕ್ಕೆ ಮೊದಲು ಕಲ್ಪನಾ ಅವರನ್ನು ಕೇಳಲಾಗಿತ್ತಂತೆ. ಆದರೆ ‘ಅಂತಹ ತುಕಡಾ ಕ್ಯಾರೆಕ್ಟರ್, ನಾನು ಮಾಡೋದಿಲ್ಲ. ಹೀರೋಯಿನ್ ಪಾತ್ರ ಇದ್ರೆ ಕೊಡಿ ಮಾಡುತ್ತೇನೆ’ ಎಂದು ಕಲ್ಪನಾ ಕಡ್ಡಿ ತುಂಡಾಗುವಂತೆ ಹೇಳಿದ್ದರಂತೆ. ಹೀಗಂತ ಸ್ವತಃ ವೀರಾಸ್ವಾಮಿ ಮತ್ತು ಪುಟ್ಟಣ್ಣ ಅವರೇ ನನ್ನ ಬಳಿ ಓಬವ್ವ ಪಾತ್ರದ ಮಾತನಾಡುವಾಗ ಹೇಳಿದ್ದರು. ಆಗ ಬೇರೆಯವರು ರಿಜೆಕ್ಟ್ ಮಾಡುದ್ರೆ ಮಾತ್ರಾನಾ ನಾನು ನೆನಪಾಗೋದು ಎಂದು ತಮಾಷೆಗೆ ಕೇಳಿದ್ದೆ” ಎಂದು ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.

 

 

ಜುಲೈ 20ರಂದು ಬಿಡುಗಡೆ:
ಈಗಾಗಲೇ ಚಿತ್ರದ ಟೀಸರ್ ಒಂದು ಮಿಲಿಯನ್’ಗಿಂತಲೂ ಹೆಚ್ಚು ಮಂದಿಯಿಂದ ವೀಕ್ಷಣೆಯಾಗಿದ್ದು ಆಧುನಿಕ ತಂತ್ರಜ್ಞಾನದ ಟಚ್ ಸಿಕ್ಕಿರುವ ನಾಗರಹಾವನ್ನು ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ.. ಇದೀಗ ಚಿತ್ರದ ರಿಲೀಸ್ ಡೇಟ್ ಕೂಡ ಫೈನಲ್ ಆಗಿದ್ದು ಇದೇ ಜುಲೈ 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಇಂದು ಸಿನಿಮಾದ ಮೇಕಿಂಗ್(ಮರುಸೃಷ್ಟಿಸಿದ) ವಿಡಿಯೋವನ್ನು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ರಿವೀಲ್ ಮಾಡಲಿದ್ದಾರೆ.

ನಾಗರಹಾವು ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ತಂದೆ ವೀರಸ್ವಾಮಿಯವರು ನಿರ್ಮಾಣ ಮಾಡಿದ್ದರು. ಇದೀಗ ಅವರ ಎರಡನೇ ಪುತ್ರ ಬಾಲಾಜಿ ಈ ಚಿತ್ರವನ್ನು ರೀ ರಿಲೀಸ್ ಮಾಡಲು ಚಿಂತನೆ ನಡೆಸುತ್ತಿದ್ದು ಈ ಬಗ್ಗೆ ಶ್ರೀ ಈಶ್ವರಿ ಪ್ರೊಡಕ್ಷನ್​ ಜಾಹೀರಾತು ಹೊರಡಿಸಿದೆ. ಚಿತ್ರಕ್ಕೆ ನೂತನ ತಂತ್ರಜ್ಙಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ಟಚ್ ನೀಡಲಿದ್ದು, ಮೊದಲಿಗಿಂತ ಹೈ ಕ್ವಾಲಿಟಿಯಲ್ಲಿ ಸಿನಿಮಾವನ್ನು ಹೊರತಂದಿದ್ದಾರಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top