ಸಮಾಚಾರ

ಸಖತ್ ಸೌಂಡ್ ಮಾಡಿದೆ ಕೆಜಿಎಫ್ ಚಿತ್ರದ 2D ಅನಿಮೇಟೆಡ್​ ಟೀಸರ್- ನೀವ್ ನೋಡಿದ್ರಾ?

ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಯಶ್ ಅಭಿಮಾನಿಗಳ ಕುತೂಹಲವಂತೂ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ಉದ್ದ ಗಡ್ಡದ ಕೂದಲಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ!

 

 

ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್​ ಕೆಲಸ ಬಿರುಸಿನಿಂದ ನಡೆಯುತ್ತಿದ್ದು ಯಶ್ ಗಡ್ಡ, ಗೆಟಪ್ ಒಳಗೊಂಡಂತೆ ಚಿತ್ರದ ಅನೇಕ ವಿಚಾರಗಳು ಟ್ರೆಂಡ್ ಆಗುತ್ತಿವೆ. ಈ ಮಧ್ಯೆ KGF ಅನಿಮೇಟೆಡ್​ ಟೀಸರ್​ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜೂಮ್ ಇನ್ ಸ್ಟುಡಿಯೋಸ್ ತಯಾರು ಮಾಡಿರುವ ಈ 2ಡಿ ಅನಿಮೇಟೆಡ್ ಟೀಸರ್’ಗೆ ಯಶ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಆ ಟೀಸರ್ ಅನ್ನು ಇಲ್ಲಿ ನೋಡಿ.

 

 

ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ. ಶ್ರೀನಿಧಿ ಶೆಟ್ಟಿ ಯಶ್’ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಒಂದನ್ನು ರಿವೀಲ್ ಮಾಡಿ ಮಾಯವಾಗಿದ್ದ ಚಿತ್ರತಂಡ ಮುಂದಿನತಿಂಗಳ ಕೊನೆಯಲ್ಲಿ ಟ್ರೈಲರ್ ಲಾಂಚ್ ಮಾಡಲು ಯೋಚನೆ ರೂಪಿಸಿದೆ. ಮುಂದಿನ ತಿಂಗಳು ಚಿತ್ರದ ಟ್ರೈಲರ್ ಮತ್ತು ಹಾಡುಗಳು ಪ್ರೇಕ್ಷಕರನ್ನು ತಲುಪಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top