ಸಮಾಚಾರ

ಕೇರಳ ಪ್ರವಾಹ ಪರಿಹಾರಕ್ಕೆ 500 ಕೋಟಿ ಘೋಷಿಸಿದ ಪ್ರಧಾನಿ ಮೋದಿ.

ಕೇರಳದಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿರುವ ಜಲಪ್ರಳಯ ಪರಿಹಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ 500 ಕೋಟಿ ಘೋಷಿಸಿದ್ದಾರೆ. ಕಳೆದೊಂದು ಶತಮಾನದಲ್ಲಿಯೇ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದಲ್ಲಿ ಮಳೆರಾಯ ಇನ್ನೂ ಮುಂದುವರೆದಿದ್ದು, ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಪರಿಹಾರ ಹಣವನ್ನು ಘೋಷಿಸಿದ್ದಾರೆ.

ಈ ಮಧ್ಯೆ ಭಾರತೀಯ ಸ್ಟೇಟ್ ಬ್ಯಾಂಕ್ ಸಹ 2 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿದೆ. ಇನ್ನು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ 25 ಕೋಟಿ ರೂ.ಗಳು ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 10 ಕೋಟಿ ರೂ.ಗಳ ನೆರವು ಘೋಷಣೆ ಮಾಡಿದ್ದಾರೆ.

ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಮಳೆಯಿಂದಾಗಿ ಬರೊಬ್ಬರಿ 106 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಸವಾನಿ ಸಂಖ್ಯೆ 324ಕ್ಕೆ ಏರಿಕೆಯಾಗಿದೆ.ಸುಮಾರು 2 ಲಕ್ಷ ಮಂದಿ ಪ್ರವಾಹ ಸಂತ್ರಸ್ಥರ ಕ್ಯಾಂಪ್ ಗಳಲ್ಲಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಮತ್ತು ಭಾರತೀಯ ಸೇನಾ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದಾಗಿ ಎಷ್ಟೋ ಪ್ರಾಣಹಾನಿಯನ್ನು ತಪ್ಪಿಸಲಾಗಿದೆ. ನಿರಂತರ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ.. ಕೇರಳದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ರಾಷ್ಟ್ರೀಯ ವಿಪತ್ತು ದಳದ 35 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top