ಮನೋರಂಜನೆ

ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ ಯಶ್ ‘ಯಶೋಮಾರ್ಗ’

ಸತತವಾಗಿಅಬ್ಬರಿಸುತ್ತಿರುವ ಮಳೆರಾಯ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿ ಮರಣ ಮೃದಂಗ ಬಾರಿಸುತ್ತಿದ್ದಾನೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಸ್ಪಂದಿಸಿದ್ದಾರೆ.. ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಫೌಂಡೇಶನ್ ಕೂಡ ಕೊಡಗಿನ ಸಂತ್ರಸ್ತರಿಗೆ ನೆರವಾಗಿದೆ.

 

 

ನಟ ಯಶ್​ ಅವರ ಮುಂದಾಳತ್ವದ ಯಶೋಮಾರ್ಗ ಫೌಂಡೇಶನ್​​ ಮೂಲಕ ಕೊಡಗಿನ ನಿರಾಶ್ರಿತರಿಗೆ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ. ಯಶೋಮಾರ್ಗ ತಂಡವು ವಸ್ತುಗಳನ್ನ ಟ್ರಕ್​ನಲ್ಲಿ ತುಂಬಿಸಿಕೊಂಡು ಕೊಡಗಿನತ್ತ ಹೊರಟಿದ್ದು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ನೆರವು ನೀಡಿದೆ. ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಕುಡಿಯುವ ನೀರು, ಬ್ರೆಡ್ಡು, ಬಿಸ್ಕೆಟ್, ಸಿದ್ದ ಆಹಾರಗಳು, ಔಷಧ ಸೇರಿದಂತೆ ಅಗತ್ಯ ಸಂಗ್ರಹಿಸಿ ಕೊಡಗಿನ ನಿರಾಶ್ರಿತರಿಗೆ ತಲುಪಿಸಿದ್ದಾರೆ.

ಕೊಡಗು ಮಳೆ ಅಪ್ ಡೇಟ್:
ಕೊಡಗು ಜಿಲ್ಲೆಯಲ್ಲಿ ಬಿಡುವಿಲ್ಲದೇ ಧಾರಾಕಾರ ಮಳೆ ಮುಂದುವರಿದಿದ್ದು ಮಹಾ ಮಳೆಗೆ ಇಡೀ ಕೊಡಗು ಜಿಲ್ಲೆಯೇ ಅಕ್ಷರಶಃ ಕೊಚ್ಚಿಹೋಗಿದೆ. ಭಾರಿ ಬಿರುಗಾಳಿ, ಮಹಾಮಳೆ ಮತ್ತು ಭೂಕುಸಿತದಲ್ಲಿ 10 ಮಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದ್ದು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈವರೆಗೂ 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ, ನಿರಾಶ್ರಿತರಿಗಾಗಿ 40ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನ ತೆರೆಯಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ರಾಜ್ಯ ಸರ್ಕಾರ 100 ಕೋಟಿ ಪರಿಹಾರವನ್ನು ಘೋಷಿಸಿದೆ.

ಕೊಡಗು ಜಿಲ್ಲೆಯಲ್ಲಿ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಜ್ಯ ಹೆದ್ದಾರಿ ಪೂರ್ತಿ ಕೊಚ್ಚಿ ಹೋಗಿದೆ. ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಸ್ವಲ್ಪವೂ ಕಡಿಮೆ ಆಗಿಲ್ಲವಾದ್ದರಿಂದ ಈ ಎರಡೂ ಘಾಟಿ ಹೆದ್ದಾರಿಗಳಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.ರಸ್ತೆಗಳು ನೀರು ತುಂಬಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಳೆದುಕೊಂಡಿವೆ. ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಗಳು ಕಗ್ಗತಲಲ್ಲಿ ಮುಳುಗಿವೆ. ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂತ್ರಸ್ತ ಜನರು ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ಹಣ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ರಾಜ್ಯದ ವಿವಿಧ ಸಂಘಟನೆಗಳು ಮುಂದಾಗಿವೆ. ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಸಹಾಯ ಮಾಡುವಂತೆ ಕೊಡವ ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ‘ಡೊನೆಟ್ ಕೊಡಗು’ ಎನ್ನವ ಹೆಸರಿನಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top