ಸಮಾಚಾರ

ಪಾದಾರ್ಪಣೆ ಪಂದ್ಯದಲ್ಲೇ ಎರಡೆರೆಡು ವಿಶಿಷ್ಟ ದಾಖಲೆ ಬರೆದ ರಿಷಭ್ ಪಂತ್.

ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ ಮತ್ತುಇಂಗ್ಲೆಂಡ್ ನಡುವಣ 3ನೇ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ಮೊದಲ ಪಂದ್ಯದಲ್ಲೇ ಎರಡು ವಿಶಿಷ್ಟ ದಾಖಲೆ ಬರೆದಿದ್ದಾರೆ. ಕಳಪೆ ಫಾರ್ಮ್‌ನಲ್ಲಿ ಬಳಲುತ್ತಿರುವ ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಪಂತ್ ಆಯ್ಕೆಯಾಗಿರುವ 20ರ ರಿಷಬ್ ಪಂತ್ ಪಾದಾರ್ಪಣೆಯ ಪಂದ್ಯದಲ್ಲೇ ಗಮನ ಸೆಳೆಯುತ್ತಿದ್ದಾರೆ.

ಪಂದ್ಯದ 2ನೇ ದಿನದಾಟದ ವೇಳೆ ರಿಷಭ್ ಪಂತ್ ಐದು ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಐದು ಕ್ಯಾಚ್‌ಗಳನ್ನು ಹಿಡಿದ ಮೊತ್ತ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ದಾಂಡಿಗರಾದ ಅಲಿಸ್ಟರ್ ಕುಕ್, ಕೀಟನ್ ಜೆನಿಂಗ್ಸ್, ಒಲಿವರ್ ಪಾಪ್, ಕ್ರಿಸ್ ವೋಕ್ಸ್ ಹಾಗೂ ಆದಿಲ್ ರಶೀದ್ ಕ್ಯಾಚ್‌ಗಳನ್ನು ರಿಷಭ್ ಹಿಡಿದಿದ್ದರು.

ಇದಕ್ಕೂ ಮುನ್ನ ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ನಡೆಸಿದ್ದ ರಿಷಬ್ ಪಂತ್ ತಾನು ಎದುರಿಸಿದ 2ನೇ ಎಸೆತದಲ್ಲೆ ಸಿಕ್ಸರ್ ಭರಿಸುವ ಮೂಲಕ ರನ್ ಖಾತೆ ತೆರೆದಿದ್ದರು. ಹಾಗಾಗಿ ಸಿಕ್ಸರ್ ಭರಿಸೋ ಮೂಲಕ ಟೆಸ್ಟ್ ರನ್ ಖಾತೆ ತೆರೆದ ಮೊದಲ ಭಾರತೀಯ ಆಟಗಾರ ಹಾಗೂ ಒಟ್ಟಾರೆಯಾಗಿ ವಿಶ್ವದ 12ನೇ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 51 ಎಸೆತ ಎದುರಿಸಿದ ರಿಷಭ್ ಪಂತ್ 24 ರನ್ ಗಳಿಸಿ ಔಟಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top