ಸಮಾಚಾರ

ಕೊಡಗು ಜನರ ಕಷ್ಟಕ್ಕೆ ಕಣ್ಣೀರಿಟ್ಟು ತನ್ನ 3 ತಿಂಗಳ ಪಿಂಚಣಿ ದೇಣಿಗೆ ನೀಡಿದ ಹಿರಿಯ ಜೀವಿ

ನಿರಂತರವಾಗಿ ಸುರಿಯುತ್ತಿರುವ ಭಯಂಕರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕಳೆದೊಂದು ಶತಮಾನದಲ್ಲಿಯೇ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೊಡಗುದಲ್ಲಿ ಮಳೆರಾಯ ಇನ್ನೂ ಮುಂದುವರೆದಿದ್ದು, ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಅದ್ಭುತವಾಗಿ ಸ್ಪಂದಿಸೋ ಮೂಲಕ ಕೊಡಗಿನ ಜನರ ಕಷ್ಟಕ್ಕೆ ಮುಗಿಬಿದ್ದು ಸಹಾಯ ಮಾಡುತ್ತಿದ್ದಾರೆ.

ಇಂದು ಅರಣ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ವೆಂಕಟರಾಮಯ್ಯ ರವರು ಕೊಡಗು ಜಿಲ್ಲೆಯ ಜನರ ಸಂಕಷ್ಟಕ್ಕೆ ನೆನೆದು ಕಣ್ಣೀರಿಟ್ಟು ತಮ್ಮ 3 ತಿಂಗಳ ಪಿಂಚಣಿಯ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕೋಲಾರ ಜಿಲ್ಲೆಯ ಅಜ್ಜಪ್ಪನ ಹಳ್ಳಿ ನಿವಾಸಿ ಆಗಿರುವ ವೆಂಕಟರಾಮಯ್ಯ, ಜನರ ಸಂಕಷ್ಟ ನೋಡಲಾರದೆ ನೆರವು ನೀಡುತ್ತಿದ್ದೇನೆ ಎನ್ನುತ್ತಲೇ ಕಣ್ಣೀರು ಸುರಿಸಿದ್ದಾರೆ. ಇವರ ಪುತ್ರ ಮಂಜುನಾಥ್ ಅಟ್ಲಾಂಟಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಅವರೂ ಸಹ ಧನಸಹಾಯ ಮಾಡಲಿದ್ದಾರೆ ಎಂದು ವೆಂಕಟರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂಗೆ ತಮ್ಮ ಪಿಂಚಣಿ ಹಣದ ಐವತ್ತು ಸಾವಿರ ಚೆಕ್‌ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಬಗ್ಗೆ ಪೋಸ್ಟ್ ಮಾಡಿರುವ ಮುಖ್ಯ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆ. ” ಇದೊಂದು ಮನ ತಟ್ಟುವ ಘಟನೆ. ಇಂದು ಸಭೆ ನಡೆಯುತ್ತಿದ್ದ ಸಮಯದಲ್ಲಿ ಬಂದ ಹಿರಿಯ ವ್ಯಕ್ತಿಯೊಬ್ಬರು ಸಿಎಂ ಅವರನ್ನು ಭೇಟಿ ಮಾಡಲು ಬಯಸಿದರು, ಅವರು ವೆಂಕಟರಾಮ್. ಕೊಡಗಿನ ಸಂಕಟವನ್ನು ಓದಿದ ಅವರು ತಮ್ಮ ಇಳಿಗಾಲದ ಪಿಂಚಣಿಯನ್ನೇ ದಾನವಾಗಿ ಕೊಡಲು ಬಂದಿದ್ದರು. ಸಿಎಂ ಭೇಟಿ ಮಾಡಿ ತಮ್ಮ 3 ತಿಂಗಳ ಪಿಂಚಣಿ ಹಣವನ್ನು ಪರಿಹಾರ ನಿಧಿಗೆ ಕೊಟ್ಟೇ ಹೋದರು. ” ಎಂದು ಬರೆದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top