ಹೆಚ್ಚಿನ

ಆಗಸ್ಟ್ 24 ನೇ ತಾರೀಖು ವರಮಹಾಲಕ್ಷ್ಮೀ ಹಬ್ಬ,ಈ ಹಬ್ಬವನ್ನು ಶಾಸ್ತ್ರೋಕ್ತವಾಗಿ ಹೀಗೆ ಆಚರಿಸಿದರೆ ನಿಮಗೆ ಲಕ್ಷ್ಮಿಕಟಾಕ್ಷ ದೊರೆಯುವುದು ಖಂಡಿತಾ

ಶ್ರಾವಣ ಮಾಸದ ವಿಶೇಷವಾದ ಹಬ್ಬ ,ವರಮಹಾಲಕ್ಷ್ಮೀ ಹಬ್ಬ ಇದೇ ವಾರ ಅಗಸ್ಟ್ 24 ನೇ ತಾರೀಖಿನಂದು ಆಚರಣೆ ಮಾಡಲಾಗುತ್ತಿದೆ.
ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಶಾಸ್ತ್ರೋಕ್ತವಾಗಿ ಹೀಗೆ ಆಚರಿಸಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ .ವರ ಮಹಾಲಕ್ಷ್ಮೀ ಹಬ್ಬವನ್ನು ಈ ವರ್ಷ 2018 ರಂದು 3 ದಿನ ಕೂರಿಸಬಾರದು.ಪ್ರತಿ ವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಶ್ರಾವಣ ಹುಣ್ಣಿಮೆಯ ಹಿಂದಿನ ದಿನವನ್ನು ವಾರ ಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಬಾರಿ ವರಮಹಾಲಕ್ಷ್ಮಿ ಹಬ್ಬವು ಇದೇ ಶುಕ್ರವಾರ ಅಗಸ್ಟ್ 24 ನೇ ತಾರೀಖಿನಂದು ಆಚರಣೆಗೆ ಬಂದಿದೆ. ದೇವಿಗೆ ತುಂಬಾ ಇಷ್ಟವಾದ ಮಾಸ ಶ್ರಾವಣಮಾಸ ಆದ್ದರಿಂದ ಈ ವ್ರತವನ್ನು ಆಚರಿಸುವುದರಿಂದ ಆಶೀರ್ವಾದ ಲಭಿಸಿ ಮನೆಯಲ್ಲಿ ಕಷ್ಟಗಳು ತೊಲಗಿ ಮನೆಯಲ್ಲಿ ಸುಖ, ಸಂತೋಷ ನೆಲೆಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಲಕ್ಷ್ಮೀ ಎಂದರೆ ಸ್ವಚ್ಛತೆಯ ಪ್ರತೀಕ .
ಈ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದರೆ ಅಷ್ಟ ಲಕ್ಷ್ಮಿಯರಿಗೆ ಪೂಜೆ ಮಾಡಿದಷ್ಟು ಫಲ ಸಿಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಈ ಹಬ್ಬದ ದಿನ ಬೆಳಗಿನ ಜಾವ ಬೇಗನೆ ಎದ್ದು ಮನೆಯನ್ನು ಮೊದಲಿಗೆ ಸ್ವಚ್ಛಗೊಳಿಸಿ, ಶುದ್ದಿಗೊಳಿಸಬೇಕು.

 

 

ಮನೆಯ ಮುಂದೆ ಅರಿಶಿನ-ಕುಂಕುಮ ,ರಂಗೋಲಿ ತಳಿರು ತೋರಣಗಳಿಂದ ಅಲಂಕರಿಸಬೇಕು ನಂತರ ಅಭ್ಯಂಜನವನ್ನು ಮಾಡಿ ವಸ್ತ್ರವನ್ನು ಧರಿಸಿ ಕಡಲೇ ಬೇಳೆಯಿಂದ ತಯಾರಿಸಿದ ಹಯಗ್ರೀವ ಪಾಯಸ ,ಹೋಳಿಗೆ ಇನ್ನು ಮುಂತಾದ ಸಿಹಿ ತಿನಿಸುಗಳನ್ನು ನೈವೇದ್ಯವಾಗಿ ತಯಾರಿಸಿಕೊಳ್ಳಬೇಕು. ನೀವು ಕಳಶವನ್ನು ಇಡುವ ಜಾಗವನ್ನು ಸ್ವಚ್ಛಗೊಳಿಸಿದ ಬಳಿಕ, ಅಲ್ಲಿ ಮೊದಲಿಗೆ ಅಕ್ಕಿಯನ್ನು ಹರಡಿ ಇದರ ಮೇಲೆ ಬಟ್ಟೆಯನ್ನು ಹಾಸಬೇಕು. ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯ ಚೊಂಬು ಇದ್ದರೆ ಒಳ್ಳೆಯದು.

ಈ ಕಳಶದ ಚಂಬಿನಲ್ಲಿ ಅಕ್ಕಿ, ನೀರು, ಅರಿಶಿನ ಪುಡಿ ,ನಾಣ್ಯ, ಅಡಿಕೆ ಮತ್ತು ಬಿಲ್ವಪತ್ರೆಯನ್ನು ಹಾಕಬೇಕು. ಕಳಶದ ಮೇಲ್ಭಾಗವನ್ನು ಮಾವಿನ ಎಲೆಗಳಿಂದ ಮೊದಲಿಗೆ ಶೃಂಗರಿಸಬೇಕು. ನಂತರ ಎಲೆಯ ತುದಿ ಭಾಗ ಮೇಲ್ಮುಖವಾಗಿ ಇರಬೇಕು. ಮತ್ತು ಎಲೆಯ ತೊಟ್ಟು, ಕೆಳಬಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕಲಶದ ಮೇಲೆ ಒಂದು ತೆಂಗಿನಕಾಯಿಯನ್ನು ಇಡಬೇಕು. ತೆಂಗಿನ ಕಾಯಿಯ ಮೂರು ಕಣ್ಣುಗಳು ಮೇಲೆ ಬರುವಂತೆ ನೋಡಿಕೊಳ್ಳಬೇಕು. ನಂತರ ಇದಕ್ಕೆ ಅರಿಶಿಣ, ಕುಂಕುಮ, ಗಂಧದಿಂದ ಅಲಂಕಾರ ಮಾಡಬೇಕು. ಹೊಸ ಸೀರೆಯನ್ನು ಕಳಶಕ್ಕೆ ಉಡಿಸಬೇಕು.

ಲಕ್ಷ್ಮೀದೇವಿಯನ್ನು ನಿಮ್ಮ ಯಥಾನು ಶಕ್ತಿಯಂತೆ ಚಿನ್ನ ,ಬೆಳ್ಳಿ ಹೂವುಗಳಿಂದ ಅಲಂಕರಿಸಬೇಕು. ದೇವಿಗೆ ಹೂವುಗಳು ಎಂದರೆ ತುಂಬಾ ಇಷ್ಟ ಅದರಲ್ಲೂ ಕಮಲದ ಹೂವು ಅಂದರೆ ಇನ್ನೂ ತುಂಬಾ ಇಷ್ಟ.
ಈ ವೃತವನ್ನು ಮಾಡುವಾಗ ಮೊದಲಿಗೆ ವಿಘ್ನ ವಿನಾಶಕನಾದ ಗಣಪತಿಯನ್ನು ಪೂಜೆ ಮಾಡಬೇಕು . ಲಕ್ಷ್ಮೀದೇವಿಗೆ ಕುಂಕುಮ ಎಂದರೆ ತುಂಬಾ ಇಷ್ಟ. ಆದ್ದರಿಂದ ಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಮಾಡುತ್ತಾ ಅಷ್ಟೋತ್ತರವನ್ನು ಪಠಿಸಬೇಕು .
ಹಾಗೆಯೇ ಶ್ರೀಸೂಕ್ತ, ಕನಕಧಾರ ಸ್ತೋತ್ರ ,ಲಕ್ಷ್ಮಿ ಸಹಸ್ರನಾಮ ಪಠಿಸಿದರೆ ಒಳ್ಳೆಯದು. ದೇವಿಗೆ ಶುದ್ಧ ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು. ಪೂಜೆಯ ನಂತರ ಶ್ರೀ ವರಮಹಾಲಕ್ಷ್ಮಿ ವ್ರತದ ಕಥಾ ಶ್ರವಣ ಮಾಡಬೇಕು. ಹೀಗೆ ಮಾಡಿದವರಿಗೆ ದಾರಿದ್ರ್ಯ ಹೋಗಿ ಆಯಸ್ಸು, ಆರೋಗ್ಯ ಸಂಪತ್ತು ,ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top