fbpx
ಸಮಾಚಾರ

ಪತ್ರದ ಮೂಲಕ ಕೊಡಗಿನ ಪರವಾಗಿ ಎಲ್ಲರಿಗೂ ಧನ್ಯವಾದ ಹೇಳಿದ ರಶ್ಮಿಕಾ ಮಂದಣ್ಣ..

ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಸ್ವಲ್ಪ ಸುಧಾರಿಸಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಅದ್ಭುತವಾಗಿ ಸ್ಪಂದಿಸೋ ಮೂಲಕ ಕೊಡಗಿನ ಜನರ ಕಷ್ಟಕ್ಕೆ ಮುಗಿಬಿದ್ದು ಸಹಾಯ ಮಾಡುತ್ತಿದ್ದಾರೆ.. ಅದೇ ರೀತಿ ಹ್ಯಾಟ್ರಿಕ್ ಹೀರೊ ಶಿವಕರಜಕುಮಾರ್ ಅವರು ಕೂಡ ಕೊಡಗಿನ ನಿರಾಶ್ರಿತರ ನೋವಿಗೆ ಸ್ಪಂದಿಸಿದ್ದಾರೆ.

 

 

ಕೊಡಗಿನವರ ಕಷ್ಟಕ್ಕೆ ಮಿಡಿದು ಸಹಾಯಕ್ಕೆ ಧಾವಿಸಿದ ಪ್ರತಿಯೊಬರಿಗೂ ಸ್ವತಃ ಕೊಡಗಿನ ಹುಡುಗಿಯೇ ಆಗಿರುವ ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್ ಮುಖಾಂತರ ವಂದನೆ ಸಲ್ಲಿಸಿದ್ದಾರೆ.. ಟ್ವಿಟರ್ ನಲ್ಲಿ ಭಾವನಾತ್ಮಕ ಪಾತ್ರವನ್ನು ಪೋಸ್ಟ್ ಮಾಡಿರುವ ರಶ್ಮಿಕಾ ನೋವಿನ ಮಾತುಗಳನ್ನು ಪಾತ್ರಗಳ ಮೂಲಕ ಹೊರಹಾಕಿದ್ದಾರೆ. ಅವರ ಪತ್ರ ಹೀಗಿದೆ ನೋಡಿ..

“ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ, ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು? ಏನೆಂದು ಕೂಗುವುದು.
ನಾ ಹುಟ್ಟಿದ , ಬೆಳೆದ ಆಡಿದ ಓದಿದ ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ. ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರುಪಾಲಾಗಿದ್ದಾರೆ. ಇದಕ್ಕೆ ಮೂಕಜೀವಿಗಳು ಹೊರತಾಗಿಲ್ಲ.
ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ!
ನಾನು, ನೀನು, ನಂದು, ನಿಂದು, ಮೇಲು, ಕೀಳು, ಶ್ರೀಮಂತಿಕೆ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ.
ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆಯ ಶಬ್ಧ, ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ.
ಮಕ್ಕಳು ಮಾಡಿದ ಪಾಪವಾದರು ಏನು? ಪ್ರಾಣಿಗಳು ಮಾಡಿದ ಪಾಪವಾದರು ಏನು? ದೇವರೆ ಉತ್ತರಿಸು.
ಬೆಟ್ಟಗಳು ನೆಂದು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ.
ನೀರು ನೀರು ನೀರು ಬಿಟ್ಟರೆ ಕಣ್ಣೀರು. ಧೈರ್ಯವಾಗಿರಿ ನಾವಿದ್ದೇವೆ ಎಂಬ ನಿಮ್ಮ ಮಾತು ನಮ್ಮನ್ನು ಜೀವಂತವಾಗಿರಿಸಿದೆ.
ಸರ್ಕಾರಗಳು, ಸ್ವಯಂ ಸಂಘಗಳು, ಸಂಸ್ಥೆಗಳು, ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು, ಪ್ರಪಂಚದ ಮೂಲೆಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈ ಮೀರಿ ಸಹಾಯ ಮಾಡಿದ್ದೀರಿ, ಮಾಡುತ್ತಿದ್ದೀರಿ. ಬಳ್ಳಾರಿಯ ಜೈಲಿನ ಕೈದಿಗಳು ನಾಲ್ಕು ವಾರದ ಮಾಂಸದೂಟ ಬೇಡವೆಂದು ಮೂರು ಲಕ್ಷ ರೂಗಳನ್ನು ಕೊಡಗಿನ ಸಂತ್ರಸ್ತರಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆಯೆನಿಸುತ್ತದೆ. ನಿಮ್ಮ ಸ್ಪಂದನೆಗೆ, ಸಹಾಯಕ್ಕೆ ನಾನು ಋಣಿ. ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ. ಕೊಡಗನ್ನು ಕೊಡಗಿನವರ ನೆಂದ, ನೊಂದ ಬದುಕನ್ನು ಪುನರ್ನಿರ್ಮಿಸಬೇಕಾಗಿದೆ. ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ.

ಇಂತಿ ನಿಮ್ಮ ರಶ್ಮಿಕ ಮಂದಣ್ಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top