ಸಮಾಚಾರ

ನಡುರಸ್ತೆಯಲ್ಲಿ ಸಂಸದ ಪ್ರತಾಪ್ ಸಿಂಹ ಮುಖಕ್ಕೆ ಮಂಗಳಾರತಿ ಮಾಡಿದ ಬಿಜೆಪಿ ಹಿರಿಯ ಮುಖಂಡ.

ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಕೇಂದ್ರದಿಂದ ಬಂದಿದ್ದ ತಂಡಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ನಡುರಸ್ತೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಡಕೇರಿಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಹೆಬ್ಬೆಟ್ಟಗೆರಿಗೆ ಇಂದು ಕೇಂದ್ರದ ನೆರೆ ಅಧ್ಯಯನ ತಂಡ ಪರಿಶೀಲನೆ ಬಂದಿತ್ತು. ಆ ಅಧಿಕಾರಿಗಳಿಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾಹಿತಿ ನೀಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ದೇವಯ್ಯ ಏಕಾಏಕಿ ಪ್ರತಾಪ್ ಸಿಂಹ ಅವರ ಮೇಲೆ ಸಿಟ್ಟಾಗಿ ‘ನಿಮ್ಮನ್ನು ಸಂಸದರಾಗಿ ಮಾಡಿದ್ದೆ ನಮ್ಮ ದುರಂತ’ ಎಂದು ತರಾಟೆಗೆ ತೆಗೆದುಕೊಂಡರು.

 

 

ಕೇಂದ್ರದ ಪರಿಶೀಲನೆ ತಂಡಕ್ಕೆ ನೀವು ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಿ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಾ ಎಂದು ದೇವಯ್ಯ ಹರಿಹಾಯ್ದರು. ಜನಪ್ರತಿನಿಧಿಗಳಾಗಿರುವ ನೀವು ಜನಪ್ರತಿನಿಧಿಯಂತೆ ವರ್ತಿಸಬೇಕು. ಅದು ಬಿಟ್ಟು ಜನವಿರೋಧಿಯಾಗಿ ವರ್ತಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ನಿಮ್ಮಂಥವರಿಂದ ಪಕ್ಷ ಉದ್ಧಾರ ಆಗಲ್ಲ. ನೀವು ಮೊದಲು ನಮ್ಮ ಪಕ್ಷದ ಸಂಸದ ಎಂಬುದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ನನ್ನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ ಎಂದು ಖಾರವಾಗಿ ನುಡಿದ್ರು. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಸಹ ಅಲ್ಲೇ ಇದ್ದರು. ತಮ್ಮ ಪಕ್ಷದ ಹಿರಿಯ ಮುಖಂಡರಿಂದಲೇ ಮಂಗಳಾರತಿ ಮಾಡಿಸಿಕೊಂಡ ಸಂಸದ ಪ್ರತಾಪ್ ಸಿಂಹ ತೀವ್ರ ಮುಜುಗರಕ್ಕೊಳಗಾಗಿ ಸ್ಥಳದಿಂದ ತೆರಳಿದರು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top