ಸಮಾಚಾರ

ಮಲ್ಯ ಅರುಣ್ ಜೇಟ್ಲಿ ಭೇಟಿ ವಿಚಾರ- ಮತ್ತೊಂದು ಹೇಳಿಕೆ ನೀಡಿದ ವಿಜಯ್‌ ಮಲ್ಯ.

ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ, ದೇಶ ಬಿಡುವುದಕ್ಕೂ ಮೊದಲು ತಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿರುವ ಹೇಳಿಕೆ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದೆ.. ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಗೆ ವಿಚಾರಣೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ, “ನಾನು ಭಾರತದಿಂದ ಲಂಡನ್‌ಗೆ ಹೊರಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ, ಪ್ರಕರಣ ಇತ್ಯರ್ಥ ಪಡಿಸಲು ಇಚ್ಛೆ ವ್ಯಕ್ತಪಡಿಸಿದ್ದೆ. ಅಲ್ಲದೆ ಬ್ಯಾಂಕ್‌ಗಳಿಗೆ ಸಲ್ಲಿಸಿದ್ದ ಮನವಿಗಳನ್ನು ತಿರಸ್ಕರಿಸಲಾಗಿತ್ತು” ಎಂದು ಹೇಳಿದ್ದರು.

 

 

 

 

ವಿಜಯ್ ಮಲ್ಯ, ಕೆಲವೇ ಗಂಟೆಯಲ್ಲಿ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. “ಸಂಸತ್‌ನಲ್ಲಿ ನಾನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲು ಕೋರಿದ್ದೆ, ನಾನು ಲಂಡನ್‌ಗೆ ತೆರಳುತ್ತಿರುವುದಾಗಿಯೂ ಅವರಿಗೆ ತಿಳಿಸಿದ್ದೆ, ನಮ್ಮ ಭೇಟಿ ಪೂರ್ವನಿಗದಿತವಾಗಿರಲಿಲ್ಲ’ ಎಂದು ಮಲ್ಯ ತಮ್ಮ ಹೊಸ ಹೇಳಿಕೆಯನ್ನು ನೀಡಿದ್ದಾರೆ.

ಇನ್ನು ಮಲ್ಯ ದೇಶ ಬಿಡಲು ಸಹಾಯ ಮಾಡಿದ ಅರುಣ್ ಜೇಟ್ಲಿ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸಿವೇ.. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಲ್ಯ ಮತ್ತು ಅರುಣ್ ಜೇಟ್ಲಿ ನಡುವೆ ಸಂಸತ್ ನಲ್ಲಿ ಮಾತುಕತೆಯಾಗಿದ್ದು, ಮಲ್ಯ ದೇಶ ಬಿಡುವುದಕ್ಕೆ ಜೇಟ್ಲಿ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಸ್ಥಾನದ ದುರ್ಬಳಕೆ ಮಾಡಿಕೊಂಡಿರುವ ಜೇಟ್ಲಿ ಕೂಡಲೇ ರಾಜೀನಾಮೆ ನೀಡಬೇಕೆಂದು ರಾಹುಲ್ ಆಗ್ರಹಿಸಿದ್ದಾರೆ.

ಮಲ್ಯ ಹೇಳಿಕೆ ತಳ್ಳಿಹಾಕಿದ ಜೇಟ್ಲಿ
ವಿಜಯ್ ಮಲ್ಯ ಅವರ ಹೇಳಿಕೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. “ನಾನು 2014ರಿಂದ ವಿಜಯ್ ಮಲ್ಯ ಅವರ ಭೇಟಿಗೆ ಯಾವುದೇ ಸಮಯ ಕೊಟ್ಟಿಲ್ಲ. ಹೀಗಾಗಿ ಭೇಟಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಮಲ್ಯ ಹೇಳಿಕೆ ಸುಳ್ಳು” ಎಂದು ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top