ಮನೋರಂಜನೆ

ಈ ಕಾರಣಕ್ಕಾಗಿ ‘ಗಂಧದ ಗುಡಿ’ ಚಿತ್ರವನ್ನು ವೀಕ್ಷಿಸಲು ಸಾಧ್ಯವೇ ಇಲ್ಲ ಎಂದ ಸಾಹಸಸಿಂಹನ ಅಭಿಮಾನಿಗಳು.

ಡಾ.ರಾಜ್ ಕುಮಾರ್ ಮತ್ತು ಡಾ, ವಿಷ್ಣುವರ್ಧನ್ ಒಟ್ಟಾಗಿ ಅಭಿನಯಿಸಿದ್ದ ಏಕೈಕ ಸಿನಿಮಾ ವಿವಾದಿತ ‘ಗಂಧದ ಗುಡಿ’ ಈ ವಾರ ಮತ್ತೆ ಥಿಯೇಟರ್ ಗಳಲ್ಲಿ ರಿ ರಿಲೀಸ್ ಆಗಿದೆ, ಆದರೆ ವಿಷ್ಣು ವರ್ಧನ್ ಅಭಿಮಾನಿಗಳು ಗಂಧದಗುಡಿ ಸಿನಿಮಾ ನೋಡದಿರಲು ನಿರ್ಧರಿಸಿದ್ದಾರೆ. ಧೀರಜ್ ಪಿಕ್ಚರ್ಸ್ ಸಿನಿಮಾ ಹಂಚಿಕೆ ಮಾಡಿದ್ದು, ಗತಕಾಲದ ಸಿನಿಮಾವನ್ನು ಸುಮಾರು 100 ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲಾಗಿದೆ ಆದರೆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ..

 

 

 

‘ಗಂಧದ ಗುಡಿ’ ಚಿತ್ರದ ಬಿಡುಗಡೆಗೆ ನಮ್ಮ ವಿರೋಧವಿಲ್ಲ, ಆದರೆ ನಮ್ಮ ಮೆಚ್ಚಿನ ಸ್ಟಾರ್ ನನ್ನು ಖಳ ನಾಯಕನ ಪಾತ್ರದಲ್ಲಿ ನೋಡಲು ಸಾಧ್ಯವಿಲ್ಲ’ ಎಂದು ಡಾ. ವಿಷ್ಣು ಅಭಿಮಾನಿಗಳು ಹೇಳಿದ್ದಾರೆ. ಈ ಬಗ್ಗೆ ಡಾ. ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಫೇಸ್ಬುಕ್ ನಲ್ಲಿ ಮಾಡಿರೋ ಪೋಸ್ಟ್ ನಲ್ಲಿ ತಾವು ಗಂಧದಗುಡಿ ಸಿನಿಮಾವನ್ನು ನೋಡದಿರುವುದಕ್ಕೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ..

ವೀರಕಪುತ್ರ ಶ್ರೀನಿವಾಸ್ ಅವರ ಫೇಸ್ಬುಕ್ ಪೋಸ್ಟ್ ಈ ರೀತಿ ಇದೇ.
“ಗಂಧದಗುಡಿ ಸಿನಿಮಾ ಮರು ಬಿಡುಗಡೆಗೆ ಯಾವುದೇ ವಿರೋಧವಿಲ್ಲ. ಗಂಧದಗುಡಿ ಮರು ಬಿಡುಗಡೆಯಾದರೆ ವಿಷ್ಣು ಅಭಿಮಾನಿಗಳು ಉಗ್ರ ಹೋರಾಟ ಮಾಡುತ್ತಾರೆಂಬ ಸುದ್ದಿಗಳು ಸಂಪೂರ್ಣ ಸತ್ಯಕ್ಕೆ ದೂರ! ನಾವು ವಿತರಕರಿಗಾಗಲಿ, ಮತ್ತ್ಯಾರಿಗೇ ಆಗಲಿ ಕರೆ ಮಾಡಿಲ್ಲ. ನಮಗೆ ಸಂಬಂಧಪಡದ ವಿಷಯವದು. ಸಿನಿಮಾ ಬಿಡುಗಡೆಯನ್ನು ಸ್ವಾಗತಿಸುತ್ತೇವೆ.

ಆದರೆ ಸಿನಿಮಾ ನೋಡುವಾಗ ಯಾವುದಾದರೂ ಅಹಿತಕರ ಘಟನೆಗಳು ನಡೆಯದಿರಲಿ ಅಂತ ಕೆಲವು ಅಭಿಮಾನಿಗಳು ಮುನ್ನೆಚ್ಚರಿಕೆಯಿಂದ ಸಿನಿಮಾ ನೋಡುವುದು ಬೇಡ ಅಂತ ವೈಯುಕ್ತಿಕ ಅಭಿಪ್ರಾಯಗಳನ್ನು ಫೇಸ್ಬುಕ್ಕಿನಲ್ಲಿ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿದ್ದೇನೆ. ಇದರಲ್ಲಿ ಯಾವುದೇ ಸಂಘ, ಸಂಸ್ಥೆಗಳು ತೊಡಗಿಸಿಕೊಂಡಿಲ್ಲ. ಅದು ಅವರವರ ವೈಯಕ್ತಿಕ ಅಭಿಪ್ರಾಯಗಳಷ್ಟೇ.

ರಾಜ್ ಮತ್ತು ವಿಷ್ಣು ಕೇವಲ ತೆರೆ ಮೇಲಿನ ಹೀರೋಗಳಲ್ಲ. ಅವರು ಅಭಿಮಾನಿಗಳ ಬದುಕಿನ ಭಾಗವೇ ಆಗಿದ್ದಾರೆ. ಸಿನಿಮಾಗಳನ್ನು ಸಿನಿಮಾದ ತರಹವೇ ನೋಡುವುದು ಸಾಧ್ಯವಾಗಿದ್ದಿದ್ದರೆ ಇದೊಂದು ವಿಷಯವೇ ಆಗುತ್ತಿರಲಿಲ್ಲ. ಆದರೆ ಅದು ಸಾಧ್ಯವಾಗದ ಕಾರಣ ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಸಿನಿಮಾದಲ್ಲಿನ ಕೆಲವು ದೃಶ್ಯಗಳು ಅಭಿಮಾನಿಗಳ ಭಾವನೆಗಳನ್ನು ನೋಯಿಸಬಹುದು. ಆ ನೋವು ಅಹಿತಕರ ಘಟನೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಕೆಲವು ವಿಷ್ಣು ಅಭಿಮಾನಿಗಳು ಗಂಧದಗುಡಿ ಸಿನಿಮಾ ನೋಡುವುದು ಬೇಡ ಎಂಬ ಮುಂಜಾಗ್ರತೆಯನ್ನು ಕೈಗೊಂಡಿದ್ದಾರೆ ಅಷ್ಟೇ.

ನಲ್ವತ್ತು ವರ್ಷಗಳಿಂದ ರಾಜ್ ಮತ್ತು ವಿಷ್ಣು ಅಭಿಮಾನಿಗಳ ನಡುವಿದ್ದ ದ್ವೇಷ, ವೈಷಮ್ಯಗಳು ಈಗ ಸ್ವಲ್ಪ ಸ್ವಲ್ಪವೇ ಕಮ್ಮಿಯಾಗುತ್ತಿರುವ ಹೊತ್ತಲ್ಲಿ ಮತ್ತೆ ಆ ಘಟನೆಗಳು ಮರುಕಳಿಸುವುದು ಬೇಡವೆಂಬುದು ಅನೇಕರ ಸದಭಿಪ್ರಾಯವಷ್ಟೇ ಅದು. ಅನ್ಯತಾ ಭಾವಿಸದೆ, ಸಾಮರಸ್ಯವನ್ನು ಕಾಯ್ದುಕೊಳ್ಳಲು ವಿಷ್ಣು ಅಭಿಮಾನಿಗಳು ಕೈಗೊಂಡಿರುವ ನಿರ್ಧಾರವನ್ನು ಮೆಚ್ಚಿ ಹಾರೈಸಿ..”

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top