ಸಮಾಚಾರ

‘ಆದರ್ಶ ಸೊಸೆ’ ಆಗ್ಬೇಕಾ? ಹಾಗಿದ್ರೆ ಈ ಯುನಿವರ್ಸಿಟಿಗೆ ಹೋಗಿ – ವಿವಿಯ ಈ ಕ್ರಮಕ್ಕೆ ಉಗಿದು ಉಪ್ಪಾಕಿದ ಮಹಿಳೆಯರು.

ಎಲ್ಲಾ ತಂದೆತಾಯಿಯರಿಗೂ ತಮ್ಮ ಮಗಳು ಒಳ್ಳೆ ಸೊಸೆಯಾಗಿ ಗಂಡನ ಮನೆ ಬೆಳಗಬೇಕು, ತವರು ಮನೆಯ ಕೀರ್ತಿ ಉಳಿಸಬೇಕು ಎಂಬ ಆಸೆ ಇರುತ್ತದೆ. ಹಾಗೆಯೆ ಗಂಡನ ಮನೆಯವರೂ ಕೂಡ ತಮ್ಮ ಸೊಸೆ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಆದರೆ ಇವೆಲ್ಲಾ ಕೇವಲ ಆಸೆಗಳಾಗಿಯೇ ಉಳಿದುಕೊಳ್ಳುತ್ತವೆ ಹೊರತು ಹೆಚ್ಚಿನ ಜನ ಆದರ್ಶ ಸೊಸೆಯಾಗುವಲ್ಲಿ ವಿಫಲರಾಗುತ್ತಾರೆ. ಅಂತಹವರಿಗಾಗಿಯೇ ಇಲ್ಲೊಂದು ಯುನಿವರ್ಸಿಟಿ ‘ಆದರ್ಶ ಸೋಸೆ ಆಗುವುದು ಹೇಗೆ?’ ಎಂಬ ಬಗ್ಗೆ ಹೊಸ ಕೋರ್ಸ್ ಆರಂಭಿಸಲಿದೆ. ವಿಚಿತ್ರ ಅನಿಸುತ್ತಿದ್ದರೂ? ಆದರೂ ಇದು ಸತ್ಯ!

 

ಮಧ್ಯ ಪ್ರದೇಶದ ಭೋಪಾಲ್‌ನ ಬರ್ಖಾತುಲ್ಲಾ ಯೂನಿವರ್ಸಿಟಿ ಈ ಅಲ್ಪಾವಧಿಯ ಕೋರ್ಸ್ ಶುರುಮಾಡುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕೋರ್ಸ್ ಆರಂಭವಾಗಲಿದ್ದು, ಮದುವೆಯಾದ ಬಳಿಕ ಯುವತಿಯರು ಹೊಸ ವಾತಾವರಣದಲ್ಲಿ ಹೇಗೆ ಹೊಂದಿಕೊಳ್ಳಬಹುದು ಮತ್ತು ಯಾವ ರೀತಿಯಲ್ಲಿ ಅಲ್ಲಿ ಜನರೊಡನೆ ಬೆರೆಯಬೇಕು, ಮದುವೆಯ ಬಳಿಕ ಪಾಲಿಸಬೇಕಾದ ಸಂಸ್ಕಾರಗಳಾವುವು ಇತ್ಯಾದಿ ರೀತಿಯ ತರಬೇತಿಯನ್ನೂ ನೀಡಲಾಗುತ್ತದೆಯಂತೆ. “ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಕ್ಕಳಿಗೆ ಕುಟುಂಬ ಪದ್ಧತಿಯ ಸೂಕ್ಷ್ಮ, ಜವಾಬ್ದಾರಿಗಳನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿ ನಡೆಯಲಿದೆ” ಎಂದು ಕುಲಪತಿಗಳು ತಿಳಿಸಿದ್ದಾರೆ.

ಭಾರತದ ಸಾಮಾಜಿಕ ರಚನೆಯಲ್ಲಿಯೇ ಹಾಸು ಹೊಕ್ಕಾಗಿರೋ ಪುರುಷಪ್ರಧಾನ ದೌಲತ್ತಿಗೆ ಇದು ಇನ್ನೊಂದು ಉದಾಹರಣೆ ಎನ್ನಬಹುದಾ? ಅಥವಾ ಸಮಾಜದ ದೃಷ್ಟಿಯಿಂದ ಜಾರಿಗೆ ತರಲಾಗುತ್ತಿರುವ ಮಹಿಳಾ ಸಬಲೀಕರಣದ ಹೆಜ್ಜೆ ಎನ್ನಬಹುದಾ? ಎಂದು ನೀವೇ ಡಿಸೈಡ್ ಮಾಡಿಕೊಳ್ಳಬೇಕು.. ಯಾಕೆಂದರೆ ಆದರ್ಶ ಸೊಸೆ ಎಂಬ ಹೆಸರಿನಲ್ಲಿ ಈ ಯುನಿವರ್ಸಿಟಿ ಉತ್ತಮ ಸೊಸೆಯರು ಈ ರೀತಿಯಾಗಿಯೇ ಇರಬೇಕು ಎಂಬುದನ್ನು ತನ್ನ ಪಠ್ಯದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.. ಆದರೆ ಉತ್ತಮ ಅಳಿಯನಾಗಲು ಏನು ಮಾಡಬೇಕು? ಆದರ್ಶ ಗಂಡ ಹೇಗಿರಬೇಕು? ಎಂಬ ಯಾವುದೇ ಕೋರ್ಸ್ ಅಳವಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ..

ಹಾಗೆ ನೋಡಿದರೆ ಸಮಾಜದಲ್ಲಿ ಕೆಡುಕುಂಟಾಗುತ್ತಿರುವುದು ಪುರುಷರಿಂದಲೇ ಹೆಚ್ಚು, ಹೀಗಿರುವಾಗ ಪುರುಷರಿಗಿಲ್ಲದ ನೀತಿ ನಿಯಮಗಳು ಮಹಿಳೆಯರಿಗೆ ಯಾಕೆ? ಮಹಿಳೆಯರಿಗೆ ಆಯ್ಕೆಯ ಸ್ವತಂತ್ರವಿಲ್ಲವಾ? ವಯಕ್ತಿಕ ಸ್ವತಂತ್ರ ಇಲ್ಲವಾ? ಇದೊಂದು ಬಕ್ವಾಸ್ ಐಡಿಯಾ ಎಂಬ ಟೀಕೆಗಳು ಹರಿದುಬರುತ್ತಿವೆ. ಮಹಿಳೆಯರು ಹೇಗಿರಬೇಕು? ಹೇಗಿರಬಾರದು ಎಂಬುದನ್ನು ಯಾರಿಂದಲೂ ಕಲಿತುಕೊಳ್ಳುವ ಅವಶ್ಯಕತೆಯಿಲ್ಲ ಎಂಬ ಮೂದಲಿಕೆಯ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top