fbpx
ಸಮಾಚಾರ

ವಾರಸ್ದಾರ ವಿವಾದ- ಸುದೀಪ್ ವಿರುದ್ಧ ಗಂಭೀರ ಆರೋಪ ಮಾಡಿದ ಚಿಕ್ಕಮಗಳೂರು ಎಸ್ಟೇಟ್ ಮಾಲೀಕ..

ಸುದೀಪ್ ಅವರು ಖಾಸಗಿ ವಾಹಿನಿಯೊಂದಕ್ಕಾಗಿ ವಾರಸ್ದಾರ ಎಂಬ ಸೀರಿಯಲ್ ಅನ್ನು ನಿರ್ಮಾಣ ಮಾಡಿದ್ದಾರಲ್ಲಾ, ಆ ಧಾರಾವಾಹಿಯ ವಿಚಾರವಾಗಿ ಇದೀಗ ಕಿಚ್ಚನ ವಿರುದ್ಧ ಮತ್ತೊಂದು ಸುತ್ತಿನ ಆರೋಪಕ್ಕಿಳಿದಿದ್ದಾರೆ.. ಚಿಕ್ಕಮಗಳೂರಿನ ಬೈಗೂರು ಗ್ರಾಮದಲ್ಲಿರುವ ದೀಪಕ್ ಅವರ ಎಸ್ಟೇಟ್ ಅನ್ನು ‘ವಾರಸ್ಧಾರ’ ಸೀರಿಯಲ್ ಚಿತ್ರೀಕರಣಕ್ಕಾಗಿ 3 ತಿಂಗಳ ಕಾಲ ಕಿಚ್ಚ ಕ್ರಿಯೇಷನ್ಸ್ ಬಾಡಿಗೆಗೆ ಪಡೆದಿತ್ತು. “ಒಪ್ಪಂದದ ಪ್ರಕಾರ ದಿನಕ್ಕೆ 6 ಸಾವಿರ ರೂ.ನಂತೆ 2 ತಿಂಗಳಿಗೆ 1ಲಕ್ಷದ 50 ಸಾವಿರ ರೂ ಬಾಡಿಗೆ ನೀಡಬೇಕಿತ್ತು, ಆದರೇ 3 ವರ್ಷ ಇಲ್ಲಿಯೇ ಶೂಟಿಂಗ್ ಮುಂದುವರಿಸುವುದಾಗಿ ಹೇಳಿದ್ದ ತಂಡ ಬೆಂಗಳೂರಿಗೆ ಹೋಗಿ ಮತ್ತೆ ವಾಪಸ್ ಬರಲೇ ಇಲ್ಲ, ಇದರಿಂದ ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ” ಎಂದು ಎಸ್ಟೇಟ್ ಮಾಲೀಕ ಪೊಲೀಸ್ ಠಾಣೆ,ಕೋರ್ಟು ಫಿಲಂ ಚೇಂಬರ್, ಮುಂತಾದ ಕಡೆಗಳಲ್ಲಿ ದೂರು ದಾಖಲಿಸಿದ್ದರು. ಆದರೆ ಎಲ್ಲಾ ಕಡೆಗಳಲ್ಲೂ ತಮ್ಮ ಆರೋಪವನ್ನು ಸಾಭೀತು ಮಾಡಲಾಗದೆ ಈಗ ಸೋಷಿಯಲ್ ಮೀಡಿಯಾ ಮೂಲಕ ಕಿಚ್ಚನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ..

ಎಸ್ಟೇಟ್ ಮಾಲೀಕ ದೀಪಕ್ ಮಯೂರ್ ಪಟೇಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಾಲುಗಳ ಯಥಾವತ್ತು ರೂಪ ಈ ರೀತಿ ಇದೆ.. ಈ ಸಾಲುಗಳಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಇದೆ ಎಂಬುದು ದೀಪಕ್ ಮಯೂರ್ ಅವರಿಗೆ ಮಾತ್ರವೇ ಗೊತ್ತು..

 

 

 

ಅನ್ನದಾತರ ಅನ್ನದಾತ‌ನ ಅಸಲೀ ಮುಖ.

ನಾನು ದೀಪಕ್ ಮಯೂರ್ ಪಟೇಲ್. ಚಿಕ್ಕಮಗಳೂರು ತಾಲ್ಲೂಕಿನ ಬೈಗೂರಿನ ದೊಡ್ಮನೆ ಎಸ್ಟೇಟಿನ ಮಾಲೀಕ. ಕಿಚ್ಚ ಸುದೀಪ್ ಎಂಬ ಮಹಾನ್ ನಟನಿಂದ ಮೋಸಕ್ಕೊಳಗಾಗಿ ನ್ಯಾಯಕ್ಕಾಗಿ ಕೋರ್ಟು, ಫಿಲ್ಮ್ ಛೇಂಬರ್ ನಿಂದ ಹಿಡಿದು ಗಣ್ಯ ವ್ಯಕ್ತಿಗಳ ತನಕ ಅಲೆದಾಡಿ ಸೋತುಹೋದವನು.

ಅಸಲಿ ಕಥೆ…
ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯ ಚಿತ್ರೀಕರಣಕ್ಕಾಗಿ ನನ್ನ ಪುರಾತನ ಮನೆಯನ್ನು ಕೇಳಲು ಕಿಚ್ಚ ಕ್ರಿಯೇಷನ್ ನ ಕಾರ್ಯಕಾರಿ ನಿರ್ಮಾಪಕ ಮಹೇಶ್ ಹಾಗೂ ಧಾರಾವಾಹಿಯ ನಿರ್ದೇಶಕ ಗಡ್ಡ ವಿಜಿ ಎಂಬುವವರು 25/10/2016 ನಮ್ಮ ಮನೆಗೆ ಭೇಟಿ ನೀಡಿದ್ದರು.
ಮಾತುಕತೆಯ ನಂತರ ತಿಂಗಳಲ್ಲಿ ಹತ್ತು ದಿನದ ಚಿತ್ರೀಕರಣಕ್ಕಾಗಿ ದಿನಕ್ಕೆ 6000(ಆರು ಸಾವಿರ) ದಂತೆ ಬಾಡಿಗೆಯ ಮಾತುಕತೆ ನಡೆಯಿತು.

ನವೆಂಬರ್ 3 ರಂದು ಚಿತ್ರೀಕರಣ ಪ್ರಾರಂಭವಾಯಿತು. ಯೂನಿಟ್ಟಿನ ಕೆಲಸಗಾರರಿಗೆ ಚಿಕ್ಕಮಗಳೂರಿನ ಲಾಡ್ಜುಗಳಲ್ಲಿ ಹಾಗೂ ಕಲಾವಿದರಿಗೆ ಹತ್ತಿರದ ಹೋಮ್ ಸ್ಟೇ ಒಂದರಲ್ಲಿ ವಾಸ್ತವ್ಯ ಕಲ್ಪಿಸಲಾಯಿತು.

ಪ್ರತಿ ದಿನ ಚಿಕ್ಕಮಗಳೂರಿನಿಂದ ಯೂನಿಟ್ ನ ತಂಡ ಚಿತ್ರೀಕರಣದ ಸ್ಥಳಕ್ಕೆ ಹಾಜರಾಗುತ್ತಿತ್ತು.
ಚಿಕ್ಕಮಗಳೂರಿನಿಂದ ಪ್ರತಿದಿನ ಪ್ರಯಾಣ ಕಷ್ಟವಾಗುತ್ತಿದ್ದುದರಿಂದ ಹಾಗೂ ಲಾಡ್ಜುಗಳ ಖರ್ಚು ದುಬಾರಿಯಾಗುತ್ತಿದ್ದುದರಿಂದ ಚಿತ್ರೀಕರಣ ಪ್ರಾರಂಭವಾಗಿ ಹದಿನೈದು ದಿನದ ನಂತರ ಕಾರ್ಯಕಾರಿ ನಿರ್ಮಾಪಕ ಮಹೇಶ್ ಬಂದು ‘ ತಮಗೆ ಲಾಡ್ಜ್ ಹಾಗೂ ಹೋಮ್ ಸ್ಟೇಗಳ ಬಾಡಿಗೆಯನ್ನು ಭರಿಸಲು ಕಷ್ಟವಾಗುತ್ತಿದ್ದು ಆದ್ದರಿಂದ ತಮ್ಮ ತೋಟದಲ್ಲೇ ಸ್ಥಳ ನೀಡಿದರೆ ಇಲ್ಲಿಯೇ ಕಾಟೇಜ್ ಗಳನ್ನು ನಿರ್ಮಿಸಿ ಎರಡರಿಂದ ಮೂರುವರ್ಷಗಳ ತನಕ ಶೂಟಿಂಗ್ ಮಾಡುವ ಭರವಸೆ ನೀಡಿದರು, ಜೊತೆಗೆ ಮಹೇಶ್ ನಂಬರಿಗೆ ಖುದ್ದು ಸುದೀಪ್ ಕರೆ ಮಾಡಿ ಸ್ಥಳಾವಕಾಶ ನೀಡುವಂತೆ ಕೋರಿದರು. ಹೀಗಾಗಿ ಮೂರು ವರ್ಷಗಳ ಬಾಡಿಗೆ ಬರುವ ನಿರೀಕ್ಷೆಯಿಂದ ತಾನೂ ಕಾಟೇಜ್ ಗಳನ್ನು ನಿರ್ಮಿಸಲು ಸ್ಥಳಾವಕಾಶ ನೀಡಲು ಒಪ್ಪಿದೆ.
ಆ ನಂತರ ಕಾಟೇಜ್ ನಿರ್ಮಿಸುವ ಸಲುವಾಗಿ ಕಾಫಿ ಹಾಗೂ ಕಾಳುಮೆಣಸು ಫಸಲು ಬರುತ್ತಿದ್ದ ಒಂದು ಎಕರೆಯಷ್ಟು ತೋಟವನ್ನು ಕಡಿದು ಜಾಗವನ್ನು ತೆರವು ಮಾಡಿಕೊಟ್ಟೆ.
ಆ ನಂತರ ಕಾಟೇಜ್ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಇದಕ್ಕಾಗಿ ಸಾಗರದಿಂದ ಇಟ್ಟಿಗೆಗಳನ್ನು ಹಾಗೂ ಚಿಕ್ಕಮಗಳೂರಿನ ಹಾರ್ಡ್ ವೇರ್ ಗಳಿಂದ ಕಚ್ಛಾ ಸಾಮಗ್ರಿಗಳನ್ನು ಮಹೇಶ್ ನೇತೃತ್ವದಲ್ಲಿ ಖರೀದಿಸಲಾಯಿತು. ಚಿಕ್ಕಮಗಳೂರಿನ ಅಂಗಡಿಗಳಿಗೆ ಪೇಮೆಂಟ್ ನೀಡುವ ಸಲುವಾಗಿ ಸುದೀಪ್ ಸಹಿ ಇರುವ ಬ್ಲಾಂಕ್ ಚೆಕ್ ನೀಡಿ ನಂಬಿಕೆ ಬರುವಂತೆ ನಡೆದುಕೊಂಡರು. ನಾನೂ ನಂಬಿ ಖರ್ಚಾದ ಹಣವನ್ನು ಆ ಚೆಕ್ ಮೂಲಕ ಪಡೆದುಕೊಂಡು ಪೇಮೆಂಟ್ ಮಾಡಿದೆ.
ಕಟ್ಟಡದ ಕಾಮಗಾರಿ ಪ್ರಾರಂಭವಾಗಿ ಇಪ್ಪತ್ತು ದಿನಗಳಲ್ಲಿ ಬೆಂಗಳೂರಿನಲ್ಲಿ ಶೂಟಿಂಗ್ ಸಲುವಾಗಿ ಹೋದ ತಂಡ ಮತ್ತೆ ವಾಪಸ್ ಬರಲೇ ಇಲ್ಲ. ಕರೆ ಮಾಡಿದಾಗಲೆಲ್ಲಾ ದಿನಗಳನ್ನು ಮುಂದೂಡುತ್ತಲೇ ಬಂದ ಕಾರ್ಯಕಾರಿ ನಿರ್ಮಾಪಕ ಒಂದು ತಿಂಗಳ ನಂತರ ‘ ಕ್ಷಮಿಸಿ ಕೆಲವು ಸಮಸ್ಯೆಗಳಿಂದಾಗಿ ಶೂಟಿಂಗ್ ಗೆ ಬರಲಾಗುವುದಿಲ್ಲ, ಬೆಂಗಳೂರಿನಲ್ಲೇ ಶೂಟಿಂಗ್ ಮುಂದುವರಿಸಲಿದ್ದೇವೆ’ ಎಂದು ಹೇಳಿ ಕೈ ತೊಳೆದುಕೊಂಡರು.!
ನಾನು ತಕ್ಷಣವೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ. ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಕಿಚ್ಚ ಕ್ರಿಯೇಷನ್ ಬ್ಯಾನರ್ ಮೇಲೆ 420 ಕೇಸ್ ದಾಖಲು ಮಾಡಿಕೊಂಡರು. ಆ ನಂತರ ನಾನು ಕೋರ್ಟಿನಲ್ಲಿ ಕೇಸ್ ದಾಖಲಿಸಿದೆ. ಇಷ್ಟೆಲ್ಲಾ ನಡೆದರೂ ಎಷ್ಟೇ ಪ್ರಯತ್ನ ಪಟ್ಟರೂ ಕೂಡಾ ಸುದೀಪ್ ನನ್ನ ಸಂಪರ್ಕಕ್ಕೆ ಉದ್ದೇಶಪೂರ್ವಕವಾಗಿಯೇ ಸಿಗಲೇ ಇಲ್ಲ.
ಆ ನಂತರ ನಾನು ಫಿಲ್ಮ್ ಚೇಂಬರ್ ಗೆ ದೂರು ನೀಡಿದೆ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ದೂರು ನೀಡಿದೆ, ಅವರ ಸಲಹೆಯಂತೆ ಸುದೀಪ್ ಮನೆಗೆ ಹೋಗಿ ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಮನವಿ ಮಾಡಲು ಹೋದಾಗ ಗೇಟಿನ ಒಳಗೇ ಬಿಡಲಿಲ್ಲ.
ಆನಂತರ ಸಾರಾ ಗೋವಿಂದು ಅವರ ಸಲಹೆಯಂತೆ ಅಂಬರೀಷ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿದೆ, ಆದರೆ ಸುದೀಪ್ ಅವರ ಮಾತಿಗೂ ಸರಿಯಾಗಿ ಸ್ಪಂದಿಸಲಿಲ್ಲ.

ಚಿತ್ರೀಕರಣ ನಡೆಯುವಾಗ ನನ್ನ ಮಗನಿಗೂ ಚಿಕ್ಕ ಪಾತ್ರವೊಂದನ್ನು ನೀಡಿ, ‘ ಚಿತ್ರೀಕರಣಕ್ಕೆ ಸ್ವಲ್ಪ ಸಹಕರಿಸಿದರೆ ಮುಂದೆ ಸುದೀಪ್ ಚಿತ್ರಗಳಲ್ಲಿ ಅವಕಾಶ ನೀಡುವುದಾಗಿ ನಂಬಿಸಿದರು, ಜೊತೆಗೆ ನನ್ನ ಹೆಸರು ಬಳಸಿಕೊಂಡು ಚಿಕ್ಕಮಗಳೂರಿನ ಕೆಲವು ಲಾಡ್ಜ್ ಗಳು, ರೆಸ್ಟೋರೆಂಟ್ಸ್, ಪೆಟ್ರೋಲ್ ಬಂಕ್, ತರಕಾರಿ ಅಂಗಡಿಗಳಲ್ಲಿ ಸಾಲ ಮಾಡಿ ಪಾವತಿಸದೇ ಹೋಗಿದ್ದರು, ಕೊನೆಗೆ ಅಣ್ಣಾಮಲೈ ಅವರ ಮಧ್ಯಸ್ತಿಕೆಯಲ್ಲಿ ಆ ಸಾಲ ಪಾವತಿ ಮಾಡಿದರು.

ಈ ಚಿತ್ರತಂಡದ ಮೋಸದಿಂದಾಗಿ ನಾನು ಫಸಲು ಬರುತ್ತಿದ್ದ ತೋಟವನ್ನು ಕಳೆದುಕೊಂಡೆ, ಹಾಗೂ ಕಟ್ಟಡ ಕಟ್ಟಲು ಮಾಡಿದ ಸಾಲದಿಂದಾಗಿ ಈಗ ದೊಡ್ಡ ಸಮಸ್ಯೆಗೆ ಸಿಲುಕಿದ್ದೇನೆ.
ಪರದೆ ಮೇಲೆ ದೊಡ್ಡ ದೊಡ್ಡ ಡೈಲಾಗ್ ಹೊಡೆಯುವ ಹಾಗೂ ಉಪದೇಶ ಮಾಡುವ ಅಭಿನಯ ಚಕ್ರವರ್ತಿ , ಅನ್ನದಾತರ ಅನ್ನದಾತ ಎಂದೆಲ್ಲಾ ಕರೆಸಿಕೊಳ್ಳುವ ವ್ಯಕ್ತಿ ತನ್ನ ನಿಜಬದುಕಿನಲ್ಲಿ ಮಾತ್ರ ನನಗೆ ಹಾಗೂ ನನ್ನ ಕುಟುಂಬಕ್ಕೆ ವಿಲನ್ ಆದ ವಿಚಾರ ಆತನನ್ನು ಕುರುಡಾಗಿ ಹಿಂಬಾಲಿಸುವ ಅಭಿಮಾನಿಗಳಿಗೆ ತಿಳಿಯಬೇಕೆಂದು ಈ ವಿವರಗಳನ್ನು ಬರೆದಿದ್ದೇನೆ.

ಗೆಳೆಯರೇ, ಚಿತ್ರತಂಡಗಳಿಗೆ ಚಿತ್ರೀಕರಣಕ್ಕೆ ಸ್ಥಳ ನೀಡುವ ಮೊದಲು ಹತ್ತುಬಾರಿ ಆಲೋಚಿಸಿ, ಅವರ ಸ್ವಾರ್ಥಕ್ಕಾಗಿ ನಿಮ್ಮ ಬದುಕಿಗೇ ಕೊಳ್ಳಿ ಇಡುತ್ತಾರೆ.

ಈ ವಿಚಾರವಾಗಿ ನನ್ನಲ್ಲಿ ಹಲವು ದಾಖಲೆಗಳಿದ್ದು ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತೇನೆ.

ರೈತರು, ಸಮಾಜಮುಖಿ ಚಿಂತಕರು ಈ ಪೋಸ್ಟ್ ಅನ್ನು ಹೆಚ್ಚಿನ ಜನರಿಗೆ ತಲುಪಿಸುವ ಮೂಲಕ ನನ್ನ ಸಹಾಯಕ್ಕೆ ನಿಂತು, ನನಗಾಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂದು ಕೇಳಿಕೊಳ್ಳುತ್ತೇನೆ.

ಇಂತಿ
ದೀಪಕ್ ಮಯೂರ್ ಪಟೇಲ್
ದೊಡ್ಮನೆ ಎಸ್ಟೇಟ್
ಬೈಗೂರು
ಚಿಕ್ಕಮಗಳೂರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top