fbpx
ದೇವರು

300 ವರ್ಷಗಳ ರೋಚಕ ಇತಿಹಾಸವಿರೋ ಪುರಾಣ ಪ್ರಸಿದ್ಧ ಮಹಿಮಯುತ ಶ್ರೀ ವೇಣುಗೋಪಾಲ ಸ್ವಾಮಿ ಮಹಿಮೆ ಹಾಗೂ ಪವಾಡಗಳ ಬಗ್ಗೆ ತಿಳ್ಕೊಂಡ್ರೆ ,ಈ ಸ್ವಾಮಿ ಮೇಲೆ ನಿಮ್ ಭಕ್ತಿ ಜಾಸ್ತಿಯಾಗುತ್ತೆ

300 ವರ್ಷಗಳ ಇತಿಹಾಸವನ್ನು ಹೊಂದಿರುವ ಪುರಾಣ ಪ್ರಸಿದ್ಧ ದೇವಾಲಯ ಶ್ರೀ ವೇಣುಗೋಪಾಲ ಸ್ವಾಮಿ ದೇವನ ಮಹಿಮೆ ಅಪಾರ.
ಯಾದಗಿರಿ ಜಿಲ್ಲೆ ಸುರಪುರದಲ್ಲಿರುವ ಈ ದೇವಸ್ಥಾನ ಪುರಾಣ ಪ್ರಸಿದ್ಧವಾದದ್ದು. ಸುಮಾರು 300 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು . ಆಂಧ್ರ, ಮಹಾರಾಷ್ಟ್ರ ,ತಮಿಳುನಾಡು, ಸೇರಿದಂತೆ ಹಲವು ರಾಜ್ಯಗಳ ಭಕ್ತರು ಇಲ್ಲಿಗೆ ಬರುತ್ತಾರೆ. ವೇಣುಗೋಪಾಲ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಮಹಾಮಹಿಮನಾದ ಶ್ರೀ ವೇಣುಗೋಪಾಲ ಸ್ವಾಮಿಯ ಮಹಿಮೆ ಅಪಾರ.
ಇದು ಸುರಪುರದ ಶ್ರೀ ವೇಣು ಗೋಪಾಲಸ್ವಾಮಿ ದೇವಸ್ಥಾನ ತಿರುಪತಿ ತಿಮ್ಮಪ್ಪನಿಗೂ ಮತ್ತು ಇಲ್ಲಿನ ವೇಣುಗೋಪಾಲ ಸ್ವಾಮಿಗೂ ಸಂಬಂಧವಿದೆ. ತಿರುಪತಿ ತಿಮ್ಮಪ್ಪನನ್ನು ಆರಾಧಿಸುವ ಸುರಪುರ ಸಂಸ್ಥಾನದ ಅರಸರು ಈ ದೇವಸ್ಥಾನವನ್ನು ಕಟ್ಟಿಸಿದವರು. ಹಂಪೆಯ ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಅಲ್ಲಿನ ವೀರ ಸರದಾರರೆಲ್ಲರೂ ಚದುರಿ ಹೋದರು. ಅವರಲ್ಲಿ ಜಕ್ಕಪ್ಪ ದೇಸಾಯಿಯವರ ಪುತ್ರ ಗಡ್ಡಿಪಿಡ್ಡ ನಾಯಕ ಸುರಪುರ ಸಂಸ್ಥಾನ ಸ್ಥಾಪಿಸಿದರೆಂಬ ಇತಿಹಾಸವಿದೆ. ಗಡಿಪಿಡ್ಡ ನಾಯಕ ಹಾಗೂ ಪಾಮ ನಾಯಕರ ನಂತರ ಅಧಿಕಾರಕ್ಕೆ ಬಂದ ಪೀತಾಂಬರ ಪೀಠ ನಾಯಕರು ಶ್ರೀ ವೇಣುಗೋಪಾಲ ದೇವಸ್ಥಾನವನ್ನು 1712 ರ ಅವಧಿಯಲ್ಲಿ ನಿರ್ಮಿಸಿದ್ದಾರೆ.

 

ಈ ದೇವಸ್ಥಾನಕ್ಕೆ ಅಪೂರ್ವವಾದ ಮತ್ತು ಅಷ್ಟೇ ರೋಚಕವಾದ ಇತಿಹಾಸವಿದೆ. ರಾಜ ಪೀತಾಂಬರ ನಾಯಕನಿಗೆ ಬಿಜಾಪುರದ ಬಾದಶಾ ಕರೆ ಕಳುಹಿಸಿದ್ದಾಗ ಕಾರಣವನ್ನು ತಿಳಿಯದೆ ಸಂಸ್ಥಾನದವರು ಆತಂಕ ಗೊಂಡಿದ್ದರಂತೆ. ಯಾವುದೇ ರೀತಿಯ ತೊಂದರೆ ಎದುರಾಗದಂತೆ ನಾಯಕನ ಧರ್ಮಪತ್ನಿ ಶ್ರೀ ವೇಣುಗೋಪಾಲ ಸ್ವಾಮಿಗೆ ಭಕ್ತಿಯಿಂದ ಬೇಡಿಕೊಂಡಿದ್ದಂತೆ. ಕೊನೆಗೆ ಸುರಪುರದ ದೊರೆ ಸುರಕ್ಷಿತವಾಗಿ ಸಂಸ್ಥಾನಕ್ಕೆ ವಾಪಸ್ಸಾದಾಗ ಈ ದೇವಸ್ಥಾನ ಕಟ್ಟಲಾಯಿತು ಎನ್ನುವ ಇತಿಹಾಸವಿದೆ.
ತಿರುಪತಿ ತಿಮ್ಮಪ್ಪನನ್ನು ಆರಾಧಿಸುತ್ತಿದ್ದ ಈ ಸಂಸ್ಥಾನದವರು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋಗಿ ಬರುತ್ತಿದ್ದರು. ಆದರೆ ಒಂದು ದಿನ ಸಂಸ್ಥಾನದ ದೊರೆಗೆ ಪಿಡ್ಡ ನಾಯಕರ ಕನಸಿನಲ್ಲಿ ಬಂದ ಶ್ರೀ ವೆಂಕಟೇಶ್ವರ ಸ್ವಾಮಿ ಸುರಪುರದ ಈ ಬೆಟ್ಟದಲ್ಲಿ ಶ್ರೀವೇಣುಗೋಪಾಲಸ್ವಾಮಿ ರೂಪದಲ್ಲಿ ಇರುತ್ತೇನೆ ಎಂದು ಹೇಳಿ ದೇವಾಲಯ ಕಟ್ಟಿಸಲು ಆದೇಶಿಸಿದ್ದರಿಂದ ಈ ದೇವಸ್ಥಾನ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ.
ದೇವಸ್ಥಾನದ ಎದುರು ಗರುಡಗಂಬ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಹೋಮ-ಹವನಗಳ ಮೂಲಕ ಶ್ರೀ ವೇಣುಗೋಪಾಲ ಸ್ವಾಮಿಗೆ ಧಾರ್ಮಿಕ ಪೂಜೆ ಪುನಸ್ಕಾರಗಳು ನಡೆಯುತ್ತವೆ.ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನೆಡೆಯುವ ಹಾಲುಹೋಕಳಿಯ ವೈಭವ ಗತಕಾಲದ ನೆನಪನ್ನು ಮರುಕಳಿಸುತ್ತದೆ. ಸುರಪುರ ಸಂಸ್ಥಾನದ ಅರಸರು ಪ್ರತಿವರ್ಷ ನಡೆಸಿಕೊಂಡು ಬಂದಿರುವ ಈ ಉತ್ಸವ ಅಂದರೆ ಅದು ಸ್ತಂಭಾರೋಹಣ.

 

 

 

ಸುರಪುರ ಸಂಸ್ಥಾನ ಹಾಗೂ ರೋಮಾಂಚನ ಮೂಡಿಸುವ ಈ ವಿಜೃಂಭಣೆಯ ಹಾಲು ಓಕಳಿ ಉತ್ಸವ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ವರ್ಷಕ್ಕೆ ಎರಡು ಉತ್ಸವಗಳು ನಡೆಯುತ್ತವೆ. ಮೊದಲನೆಯದು ಹಾಲು ಹೋಕಳಿ ಎಂದೇ ಕರೆಯಲಾಗುವ ಶ್ರೀಕೃಷ್ಣಜನ್ಮಾಷ್ಟಮಿ ಈ ದಿನದಲ್ಲಿ ಹಾಗೂ ಎರಡನೆಯದು ನವರಾತ್ರಿ ಉತ್ಸವ. ಜಾತಿ ಭೇದವಿಲ್ಲದೆ ಸಂಸ್ಥಾನದಲ್ಲಿ ಎಲ್ಲ ಜನಾಂಗದ ಲಕ್ಷಾಂತರ ಭಕ್ತರು ಈ ಜಾತ್ರೆಗಳಲ್ಲಿ ಭಾಗವಹಿಸುವುದು ವಿಶೇಷ.
ಹಾಲು ಹೋಕಳಿ ಉತ್ಸವದ ವಿಶೇಷತೆಯೆಂದರೆ ದೇವರ ಕಂಭೋತ್ಸವ ಹಾಗೂ ಸ್ತಂಭಾರೋಹಣ ದೇವಾಲಯದ ಆವರಣದಲ್ಲಿ ಐವತ್ತರಿಂದ ಎಪ್ಪತ್ತು ಅಡಿಗಳಷ್ಟು ಎತ್ತರವಾದ ಐದು ಕಂಬಗಳಿವೆ. ಅಲ್ಲಿನ ತುತ್ತತುದಿಯಲ್ಲಿ ಕಟ್ಟಲಾಗಿರುವ ಹಣ್ಣುಗಳನ್ನು ಯುವಕರು ಹತ್ತಿ ಕೀಳುವ ಸಾಹಸ ದೃಶ್ಯ ನೋಡುಗರ ಮೈ ನವಿರೇಳಿಸುತ್ತದೆ ಹಾಗೂ ರೋಮಾಂಚನ ಗೊಳಿಸುತ್ತದೆ. ಈ ಕಂಬಗಳಿಗೆ ಜಾರುವ ಪದಾರ್ಥಗಳಾದ ಅರದಾಳ, ಬೆಣ್ಣೆ ,ಬಾಳೆ ಹಣ್ಣುಗಳನ್ನು ಸವರಿ ನುಣ್ಣಗೆ ಮಾಡಿರುತ್ತಾರೆ. ತುದಿಯಲ್ಲಿ ನೀರು ತುಂಬಿದ ಮಡಿಕೆಗಳನ್ನು ಹಿಡಿದುಕೊಂಡು ಒಬ್ಬರು ಕುಳಿತು ಕೊಳ್ಳುವಷ್ಟು ಮಂಟಪ ನಿರ್ಮಿಸಿ ಬಾಳೆಹಣ್ಣು ಹಾಗೂ ಕುಂಬಳಕಾಯಿಯ ಹೋಳುಗಳನ್ನು ಕಟ್ಟಿರುತ್ತಾರೆ. ರಾಜವಂಶಸ್ಥರು ಸಾಂಪ್ರದಾಯಿಕ ಪೂಜೆಯ ನಂತರ ಇದರಿಂದ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿ ಸ್ಥಂಭಾರೋಹಣಕ್ಕೆ ಚಾಲನೆಯನ್ನು ನೀಡುತ್ತಾರೆ.

ಇನ್ನು ಕಂಬಗಳ ಮೇಲಿನ ತುದಿಯಲ್ಲಿ ಕಟ್ಟಲಾಗಿರುವ ಹಣ್ಣುಗಳನ್ನು ಕೀಳಲು ನಿಗದಿತ ಹಳ್ಳಿಗಳ ಜನರು ಕಂಬಗಳನ್ನು ಏರಲು ಆರಂಭಿಸುತ್ತಾರೆ. ಇತ್ತ ಕಂಭಗಳನ್ನು ಏರುವ ಜನರಿಗೆ ಕೆಳಗೆ ನಿಂತವರು ಪಿಚಕಾರಿಯಿಂದ ನೀರನ್ನು ಚಿಮ್ಮಿಸಿದರೆ ಮಂಟಪಗಳ ಮೇಲೆ ಕುಳಿತಿರುವವರು ಕೆಳಗೆ ನೀರು ಎಣ್ಣೆಯನ್ನು ಸುರಿಯುತ್ತಾರೆ. ಇದರಿಂದ ಕಂಭ ಏರುತ್ತಿರುವವರು ಜಾರಿ ಕೆಳಗೆ ಬೀಳುತ್ತಿದ್ದರೂ ಒಬ್ಬರ ಮೇಲೆ ಒಬ್ಬರು ಹತ್ತಿ ಹಣ್ಣುಗಳನ್ನು ಕೀಳಲು ಪ್ರಯತ್ನಿಸುತ್ತಾರೆ.
ಈ ಸ್ಥಂಬೋತ್ಸವ ನಡೆದ ನಂತರ ಗರುಡವಾಹನದಲ್ಲಿ ಶ್ರೀ ವೇಣುಗೋಪಾಲನಿಗೆ ಮೆರವಣಿಗೆ ಮಾಡಲಾಗುತ್ತದೆ. ಹನುಮಂತ ದೇವರ ಗುಡಿಯವರೆಗೆ ಮೆರವಣಿಗೆ ಮಾಡಲಾಗುತ್ತದೆ. ಅಲ್ಲಿರುವ ಕಂಬವನ್ನು ಸಂಪ್ರದಾಯದಂತೆ ಮುಟ್ಟಿ ಅರಸು ಮನೆತನದವರು ಸೇರಿದಂತೆ ಅನೇಕರು ಇದರಲ್ಲಿ ಭಾಗವಹಿಸುತ್ತಾರೆ. ಉತ್ಸವದ ಕೊನೆಯ ದಿನ ನಡೆಯುವ ಕುಸ್ತಿ ಪಂದ್ಯ ಈ ಜಾತ್ರೆಯ ಮತ್ತೊಂದು ವಿಶೇಷ . ಮಕ್ಕಳು ಸೇರಿದಂತೆ ಅನೇಕರು ಇದರಲ್ಲಿ ಭಾಗವಹಿಸುತ್ತಾರೆ.
ಈ ಕುಸ್ತಿ ಪಂದ್ಯದಲ್ಲಿ ಭಾಗವಹಿಸಲು ಬೆಳಗಾವಿ, ಚಿತ್ರದುರ್ಗ , ಶಿವಮೊಗ್ಗ ಹಾಗೂ ದಾವಣಗೆರೆ ಸೇರಿದಂತೆ ಆಂಧ್ರ, ಮಹಾರಾಷ್ಟ್ರ ಕಡೆಗಳಿಂದಲೂ ಕುಸ್ತಿಪಟುಗಳು ಬಂದಿರುತ್ತಾರೆ. ಎದುರಾಳಿಗಳನ್ನು ಜಿದ್ದು ಮಾಡುವಲ್ಲಿ ಪಟುಗಳ ಹೋರಾಟ ನೋಡಲೂ ರೋಚಕವಾಗಿರುತ್ತದೆ.

 

 

 

ಹಲಗೆ ಬಾರಿಸುತ್ತಾ ರೋಚಕವಾದ ಸವಾಲು ಹಾಕುವ, ಮಾಡುವ ದೃಶ್ಯ ಹಲವರನ್ನು ಕೆರಳಿಸುತ್ತದೆ. ಕೊನೆಗೆ ಪಂದ್ಯಗಳಲ್ಲಿ ಗೆದ್ದವರಿಗೆ ಅರಸು ವಂಶಸ್ಥರು ಬೆಳ್ಳಿಯ ಕಡಗವನ್ನು ನೀಡುತ್ತಾರೆ. ಸುರಪುರದ ಐತಿಹಾಸಿಕ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ನಡೆಯುವ ಹಾಲು ಹೋಕಳಿಯ ವರ್ಣನೆಗೆ ಪದಗಳೇ ಸಾಲದು. ಹೀಗೆ ಅನೇಕ ವಿಶೇಷ ಆಚರಣೆಗಳನ್ನು ಹೊಂದಿರುವ ಶ್ರೀ ವೇಣುಗೋಪಾಲನ ಸನ್ನಿಧಿಯಲ್ಲಿ ಭಕ್ತರ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಪ್ರತೀತಿ ಇದೆ. ಕಂಕಣ, ಸಂತಾನ, ಉದ್ಯೋಗ, ಆರೋಗ್ಯ ಹೀಗೆ ಅನೇಕ ಸಮಸ್ಯೆಗಳನ್ನು ಹೊಂದಿರುವ ಭಕ್ತರು ಇಲ್ಲಿಗೆ ಬಂದು ಹರಕೆಯನ್ನು ಮಾಡಿಕೊಳ್ಳುತ್ತಾರೆ. ಬೇಡಿ ಬಂದ ಭಕ್ತರ ಪಾಲಿನ ಕಾಮಧೇನು ಆಗಿರುವ ಶ್ರೀ ವೇಣುಗೋಪಾಲ ಸ್ವಾಮಿ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುತ್ತಾರೆ ಇಲ್ಲಿನ ಭಕ್ತರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top