ಸಮಾಚಾರ

ನೆರವು ಕೇಳಲು ಪಾಕ್, ಬಾಂಗ್ಲಾಗೆ ಹೋಗಬೇಕೆ? ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ರೈತರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರೈತರು ತೀವ್ರವಾಗಿ ಕೆಂಡಕಾರಿದ್ದು, ಕೇಂದ್ರ ಸರ್ಕಾರ ನಮ್ಮ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಮುಂದಾಗದಿದ್ದರೆ, ನಾವು ಯಾರ ಬಳಿ ಸಹಾಯ ಕೇಳಬೇಕು? ಪಾಕಿಸ್ತಾನ ಅಥವಾ ಬಾಂಗ್ಲಾದೇಶಗಳಿಗೆ ಹೋಗಿ ನೆರವು ಪಡೆಯಬೇಕೇ? ಎಂದು ಪ್ರಶ್ನಿಸಿದ್ದಾರೆ.

ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ನವದೆಹಲಿಯಲ್ಲಿ ಗಾಂಧಿ ಜಯಂತಿ ದಿನವಾದ 60 ಸಾವಿರಕ್ಕೂ ಅಧಿಕ ರೈತರು ಬೃಹತ್ ಪಾದಯಾತ್ರೆ ನಡೆಸಿ ದೆಹಲಿಗೆ ಪ್ರವೇಶಿಸಲು ಮುಂದಾಗಿದ್ದರು. ಈ ವೇಳೆ ಪಾದಯಾತ್ರೆಯನ್ನು ದೆಹಲಿ ಪೊಲೀಸರು ತಡೆದಿದ್ದು, ರೈತರನ್ನು ಚದುರಿಸುವ ಸಲುವಾಜಿ ಜಲಫಿರಂಗು ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದಾರೆ.ಈ ವೇಳೆ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರೈತರ ಬೇಡಿಕೆಗಳೇನು?
ರೈತರ ಸಾಲ ಮನ್ನಾ ಮಾಡಬೇಕು, ರೈತರ ಬೆಳೆಗಳಿಗೆ ಸೂಕ್ತ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಬೇಕು, ಪೂರ್ಣ ಪ್ರಮಾಣದ ವಿದ್ಯುತ್ ನೀಡುವುದು, ಬೆಳೆ ಹಾನಿ ಮತ್ತು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು, ಗಗನಕ್ಕೇರಿರುವ ಇಂಧನ ಬೆಲೆಯನ್ನು ನಿಯಂತ್ರಿಸಬೇಕು-ಇನ್ನು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ದೇಶದ ವಿವಿಧ ಭಾಗಗಳ ರೈತರು ದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಸಲು ಸಜ್ಜಾಗಿದ್ದಾರೆ.

ಉತ್ತಪ್ರದೇಶ, ಪಂಜಾಬ್ ಹಾಗೂ ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಈ ರೈತರ ಮೇಲೆ ಪೊಲೀಸರು ಜಲಫಿರಂಗಿ ನಡೆಸಿದ್ದಾರೆ. ಆದರೆ ಪೊಲೀಸರು ಜಲಫಿರಂಗಿಗೆ ಬಗ್ಗದ ರೈತರು ಟ್ರಾಕ್ಟರ್, ಎತ್ತಿನಗಾಡಿಗಳ ಮೂಲಕ ಬ್ಯಾರಿಕೇಡ್ ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೆಲ ರೈತರು ಕಲ್ಲು ತೂರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಯಾತ್ರೆ ಹಿಂಸಾರೂಪಕ್ಕೆ ತಿರುಗುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿ ಅವರ 11 ಬೇಡಿಕೆಗಳ ಪೈಕಿ 7ಕ್ಕೆ ಸಮ್ಮತಿ ನೀಡಿತು. ಬಾಕಿ ಬೇಡಿಕೆಗಳು ಈಡೇರದ ಕಾರಣ ಪ್ರತಿಭಟನೆ ಮುಂದುವರಿಸುವುದಾಗಿ ರೈತ ಮುಖಂಡರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top