fbpx
ದೇವರು

ಸಕಲ ಕಷ್ಟ ನಿವಾರಣೆ ಮಾಡುವ ಶಕ್ತಿ ದೇವತೆ ಸವದತ್ತಿ ರೇಣುಕಾ ಯಲ್ಲಮ್ಮದೇವಿ ಮಹಿಮೆ ಹಾಗೂ ಪವಾಡಗಳ ಬಗ್ಗೆ ತಿಳ್ಕೊಂಡ್ರೆ ಖಂಡಿತಾ ನೀವು ಒಂದ್ಸಲ ಆ ತಾಯಿ ದರ್ಶನ ಮಾಡ್ತೀರಾ

ಉತ್ತರ ಕರ್ನಾಟಕದ ಪ್ರಸ್ಸಿದ್ದ ದೇವತೆಯಾಗಿರುವ ಸವದತ್ತಿಯ ರೇಣುಕಾ ಎಲ್ಲಮ್ಮ ದೇವಿಯ ಮಹಿಮೆ ಅಪಾರ.
ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ರಾಜ್ಯದ ಪ್ರಮುಖ ದೇವತೆಯ ಶಕ್ತಿ ದೇವತೆಯ ಕ್ಷೇತ್ರಗಳಲ್ಲಿ ಒಂದು. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಸವದತ್ತಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚು,ಅಷ್ಟೇ ಅಲ್ಲದೆ ರಾಜ್ಯದ ಇತರ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರ ತಮಿಳುನಾಡುಗಳಿಂದಲೂ ಭಕ್ತರು ರೇಣುಕಾ ಎಲ್ಲಮ್ಮ ದೇವತೆಯ ದರ್ಶನಕ್ಕೆ ಬರುತ್ತಾರೆ.
ವಿಶ್ವ ಪ್ರಖ್ಯಾತಿಯನ್ನು ಹೊಂದಿರುವ ಕ್ಷೇತ್ರ ಇದಾಗಿದೆ.ಒಂದು ವರ್ಷದಲ್ಲಿ ಏಳು ಜಾತ್ರೆಗಳು ನಡೆಯುವುದು ಈ ಕ್ಷೇತ್ರದ ವಿಶೇಷ. ದವನ, ಮಹಾನವಮಿ, ಶ್ರೀ ಗೌರಿ,ಹೊಸ್ತಿಲ,ಬನದ ಹಾಗೂ ಭರತ ಹುಣ್ಣಿಮೆಗಳಂದು ಇಲ್ಲಿ ಜಾತ್ರೆ ನಡೆಯುತ್ತದೆ. ಬನದ ಹಾಗೂ ಭರತ ಹುಣ್ಣಿಮೆ ಸಮಯದಲ್ಲಿ ನಡೆಯುವ ಜಾತ್ರೆಗಳು ಅತ್ಯಂತ ದೊಡ್ಡ ಜಾತ್ರೆಗಳು. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವಿಯ ದರ್ಶನವನ್ನು ಪಡೆಯುತ್ತಾರೆ. ಜಾತ್ರೆಗೆ ಲಕ್ಷಾಂತರ ಭಕ್ತರು ಚಕ್ಕಡಿಗಳಲ್ಲಿ ಆಗಮಿಸುವುದು ಈ ಕ್ಷೇತ್ರದ ವಿಶೇಷ. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಬಯಲಿನಲ್ಲಿಯೇ ಅಡುಗೆ ಮಾಡಿ ಅಮ್ಮನಿಗೆ ನೈವೇದ್ಯ ಮಾಡುವ ಪರಿಪಾಠವಿದೆ.

 

ಸವದತ್ತಿ ರೇಣುಕಾ ಎಲ್ಲಮ್ಮ ಕ್ಷೇತ್ರಕ್ಕೆ ಸುಮಾರು ಮೂರು ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಕಾಶ್ಮೀರದ ದೊರೆಯಾದ ರೇಣುಕಾ ರಾಜನು ಸಂತಾನ ಭಾಗ್ಯವಿಲ್ಲದೆ, ಕೈಚೆಲ್ಲಿ ಕುಳಿತಿರುವಾಗ ಅಶರೀರವಾಣಿಯೊಂದು ನುಡಿಯುತ್ತದೆ. ಅದೇನೆಂದರೆ ಪುತ್ರಕಾಮೇಷ್ಠಿಯಾಗ ಮಾಡುವಂತೆ ಹೇಳಿತ್ತು. ಇದರಿಂದ ಪ್ರಭಾವಿತನಾದ ದೊರೆಯು ಪುತ್ರ ಕಾಮೇಷ್ಟಿ ಯಾಗವನ್ನು ಮಾಡುತ್ತಾನೆ. ಈ ಯಾಗದಲ್ಲಿ ಭಕ್ತಿಯಿಂದ ಬೇಡಿಕೊಂಡ ರಾಜನಿಗೆ ಅಗ್ನಿಕುಂಡದಿಂದ ದೇವರು ಒಂದು ಹೆಣ್ಣು ಮಗುವನ್ನು ವರವಾಗಿ ಕರುಣಿಸುತ್ತಾನೆ. ಹೀಗೆ ಹುಟ್ಟಿದ ಹೆಣ್ಣು ಮಗುವೇ ರೇಣುಕಾ ಎಲ್ಲಮ್ಮ ದೇವಿ. ಸ್ಕಂದ ಪುರಾಣದಲ್ಲಿ ಈ ದೇವಿಯ ಚರಿತ್ರೆಯ ಬಗ್ಗೆ ಉಲ್ಲೇಖವಿದೆ.

 

 

 

ರೇಣುಕಾ ದೇವಿಯು ಪ್ರಾಪ್ತ ವಯಸ್ಸಿಗೆ ಬಂದಾಗ ಪ್ರತಿದಿನ ಮಲಪಾರಿ ನದಿಯ ದಂಡೆಯ ಬಳಿ ವಿಹಾರಕ್ಕೆ ಹೋಗುತ್ತಿರುತ್ತಾಳೆ.ಆ ಸಂದರ್ಭದಲ್ಲಿ ಒಂದು ದಿನ ಸಪ್ತ ಮಹರ್ಷಿಗಳಲ್ಲಿ ಮಹಾ ತಪಸ್ವಿಯಾದಂತಹ ಜಮದಗ್ನಿ ಋಷಿಯು ಪ್ರತಿನಿತ್ಯ ಸಂಧ್ಯಾ ವಂಧನೆ ಮಾಡುವ ಸಲುವಾಗಿ ಮಲಪಾರಿ ನದಿಯ ದಂಡೆಗೆ ಬರುತ್ತಾನೆ.ಆ ಸಂದರ್ಭದಲ್ಲಿ ರೇಣುಕಾದೇವಿ ಮತ್ತು ಜಮದಗ್ನಿಯ ಸಮಾಗಮವಾಗುತ್ತದೆ. ಆಗ ರೇಣುಕಾದೇವಿ ತನ್ನಲ್ಲಿ ತಾನು ಪ್ರಶ್ನೆ ಮಾಡಿಕೊಳ್ಳುತ್ತಾಳೆ ಎಂತಹ ಮಹಾತಪಸ್ವಿಗಳಾಗಿದ್ದಾರೆ ಇವರು. ನಾನು ಯಾಕೆ ಇವರನ್ನು ವಿವಾಹ ಮಾಡಿಕೊಳ್ಳಬಾರದು ಎಂದು ಜಮದಗ್ನಿಯನ್ನು ಪ್ರಶ್ನೆ ಮಾಡುತ್ತಾಳೆ. ಪುರಾಣಗಳಲ್ಲಿ ಉಲ್ಲೇಖವಿರುವ ಜಮದಗ್ನಿ ಮುನಿಯ ಪತ್ನಿ ರೇಣುಕಾ ತಾಯಿಯ ಎಲ್ಲಮ್ಮ. ಪರಶುರಾಮ ಜಮದಗ್ನಿ ಹಾಗೂ ರೇಣುಕಾ ದಂಪತಿಯ ಮಗ. ಮಗನಿಗೆ ನೀಡಿದ ವಾಗ್ದಾನದಂತೆ ತಾಯಿ ರೇಣುಕಾ ಎಲ್ಲಮ್ಮನ್ನಾಗಿ 7 ಕೊಳ್ಳಗಳು ಇರುವ ಸವದತ್ತಿಗೆ ಬಂದು ಪ್ರತಿಷ್ಠಾಪನೆಗೊಂಡಳು ಎಂಬ ಐತಿಹ್ಯವಿದೆ.
ಈ ಪ್ರದೇಶವನ್ನು ಆಳಿದ ರಟ್ಟ ವಂಶದ ಅರಸರ ಕಾಲದಲ್ಲಿ ರೇಣುಕಾ ಎಲ್ಲಮ್ಮನ ದೇವಸ್ಥಾನ ನಿರ್ಮಾಣವಾಯಿತು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಸವದತ್ತಿಯಲ್ಲಿ ಜಮದಗ್ನಿ ಋಷಿ, ಪರಶುರಾಮ, ಮಲ್ಲಿಕಾರ್ಜುನ, ದತ್ತಾತ್ರೇಯ, ಮಾತಂಗಿ, ಅನ್ನಪೂರ್ಣೇಶ್ವರಿಯವರ ದೇವಸ್ಥಾನಗಳಿವೆ.

ಮಕ್ಕಳು ಇಲ್ಲದವರು ಎಲ್ಲಮ್ಮನ ದೇವಸ್ಥಾನದಲ್ಲಿರುವ ಪರಶುರಾಮನ ತೊಟ್ಟಿಲು ತೂಗುವ ಹರಕೆಯನ್ನು ಹೊತ್ತು ತೊಟ್ಟಿಲನ್ನು ತೂಗುತ್ತಾರೆ. ಇದರಿಂದ ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಅರಿಶಿಣ ಅಥವಾ ಬಂಡಾರವನ್ನು ಎಲ್ಲಮ್ಮ ತಾಯಿಗೆ ಅರ್ಪಿಸುವುದು ಇಲ್ಲಿನ ಮುಖ್ಯ ಸೇವೆ. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಗುಡಿಯ ಮೇಲೆ ಭಂಡಾರವನ್ನು ಎರಚುತ್ತಾರೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಅರಿಶಿನದಲ್ಲಿಯೇ ಮಿಂದು ಹೇಳುವಂತಹ ಪ್ರತೀತಿಯೂ ಸಹ ಇದೆ.

 

 

 

ಸವದತ್ತಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಾಕಷ್ಟು ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗಿದೆ. ತಿರುಪತಿ ಮಾದರಿಯಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ವಸತಿ ಗೃಹಗಳು,ಯಾತ್ರಿ ನಿವಾಸ, ಶೌಚಾಲಯ, ಸ್ನಾನ ಗೃಹ, ಕುಡಿಯುವ ನೀರು, ಮತ್ತು ಮತ್ತಿತರ ಸೌಕರ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಅಮೆರಿಕಾ ಸೇರಿದಂತೆ ಹಲವಾರು ದೇಶಗಳಿಂದ ಎಲ್ಲಮ್ಮ ಭಕ್ತರು ಇಲ್ಲಿಗೆ ಬರುತ್ತಾರೆ.ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಇಲ್ಲಿಗೆ ಏಕಕಾಲಕ್ಕೆ ದೇವರ ದರ್ಶನ ಪಡೆಯುವುದು ಇಲ್ಲಿನ ವಿಶೇಷ.

ಪ್ರತಿದಿನ ದೇವಸ್ಥಾನದ ಬಾಗಿಲು ಬೆಳಗಿನ ಜಾವ ನಾಲ್ಕು ಗಂಟೆಗೆ ತೆರೆಯುತ್ತದೆ. ಬೆಳಗಿನ ಅವಧಿಯ ಅಭಿಷೇಕ, ಪೂಜೆಯ ನಂತರ ಸಾರ್ವಜನಿಕರ ದರ್ಶನ ಆರಂಭವಾಗುತ್ತದೆ. ಸಂಜೆ 4:30 ರಿಂದ 6 ಗಂಟೆಯವರೆಗೆ ಮತ್ತೆ ಅಭಿಷೇಕ ಪೂಜೆಗಳು ನಡೆಯುತ್ತವೆ. ಶ್ರಾವಣ ಮಾಸದಲ್ಲಿ ನಿತ್ಯ ಬೆಳಗಿನ ಜಾವ 1:30 ರಿಂದ 5 ಗಂಟೆಯವರೆಗೆ ಮತ್ತು ಸಂಜೆ 4:30 ರಿಂದ 6:30 ರವರೆಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.
ಸಾಕಷ್ಟು ಪವಾಡಗಳನ್ನು ಸೃಷ್ಟಿಸಿ ಇಲ್ಲಿನ ಜನರಿಗೆ ಆಸರೆಯಾಗಿರುವ, ಸಾಕಷ್ಟು ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿರುವ ಮತ್ತು ಒಟ್ಟಾರೆ ಹೇಳಬೇಕೆಂದರೆ ಸಾಕಷ್ಟು ಮಹಿಮೆಯನ್ನು ಹೊಂದಿರುವ ರೇಣುಕಾ ಎಲ್ಲಮ್ಮ ಕ್ಷೇತ್ರವು ಭಕ್ತರ ಪಾಲಿಗೆ ವರವನ್ನು ಕರುಣಿಸುತ್ತ, ಆಸರೆಯಾಗಿ ನಿಂತಿದ್ದಾಳೆ. ಸಾಧ್ಯವಾದರೆ ನೀವು ಒಮ್ಮೆ ಭೇಟಿ ಕೊಟ್ಟು ರೇಣುಕಾದೇವಿಯ ಅನುಗ್ರಹವನ್ನು ಪಡೆಯಿರಿ.
ಬೆಳಗಾವಿಯಿಂದ 70 ಕಿಲೋ ಮೀಟರ್ ದೂರದಲ್ಲಿದೆ ಈ ರೇಣುಕಾ ಎಲ್ಲಮ್ಮ ದೇವಾಲಯ. ಮತ್ತು ಮೂಲಭೂತ ಸೌಲಭ್ಯಗಳು ಕೂಡ ಇವೆ. ಉತ್ತರ ಕರ್ನಾಟಕದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದೆ ರೇಣುಕಾ ಎಲ್ಲಮ್ಮ ದೇವಿ ದೇವಾಲಯ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top