ದೇವರು

ಈ ದೇವಿಗೆ ದುಡ್ಡೇ ನೈವೇದ್ಯ,ದುಡ್ಡೇ ಅಭಿಷೇಕ,ದುಡ್ಡೇ ಅಲಂಕಾರ ,ಇನ್ನೂ ಅನೇಕ ಆಶ್ಚರ್ಯಕರ ಗುಣಗಳನ್ನು ಹೊಂದಿರೋ ಈ ದೇವಿಯ ಮಹಿಮೆ ಹಾಗೂ ಪವಾಡಗಳ ಬಗ್ಗೆ ಗೊತ್ತಾದ್ರೆ ಖಂಡಿತಾ ಈ ತಾಯಿ ಮೇಲೆ ನಿಮಗೆ ಭಕ್ತಿ ಜಾಸ್ತಿಯಾಗುತ್ತೆ

ಗಾಣಗಟ್ಟಿ ಮಾಯಮ್ಮ ದೇವಿ ಹಣದ ದೇವತೆ.ಇಲ್ಲಿನ ದೇವಿಗೆ ದುಡ್ಡೇ ನೈವೇದ್ಯ,ದುಡ್ಡೇ ಅಭಿಷೇಕ,ದುಡ್ಡೇ ಅಲಂಕಾರ.
ದೇವಿಗೆ ಹರಕೆಯನ್ನು ತೀರಿಸುವುದಕ್ಕೆ ಹೂವು, ಹಣ್ಣು, ಕುಂಕುಮಾರ್ಚನೆಯ ಅಭಿಷೇಕ ಮಾಡುವುದು ಸಹಜ. ಇನ್ನು ಕೆಲವು ಕಡೆ ದೇವರಿಗೆ ಕುರಿ, ಕೋಳಿ ಬಲಿಕೊಟ್ಟು ಹರಕೆಯನ್ನು ತೀರಿಸುವುದು ವಾಡಿಕೆಯಲ್ಲಿದೆ. ಆದರೆ ಇಲ್ಲೊಂದು ವಿಶೇಷವಾದ ದೇವಾಲಯವಿದೆ. ಇಲ್ಲಿರುವ ದೇವಿಗೆ ಯಾವುದೇ ಹರಕೆ ಮಾಡಿದರೂ ಅದು ಹಣದ ರೂಪದಲ್ಲಿ ಇರಬೇಕು. ದೇವಿಗೆ ದುಡ್ಡೇ ಹಾರ,ದುಡ್ಡೆ ಅಲಂಕಾರ, ದುಡ್ದೆ ಅಭಿಷೇಕ ಆದ್ದರಿಂದ ಈ ದೇವಿಗೆ ಹಣ ಎಂದರೆ ತುಂಬಾ ಪ್ರೀತಿ. ಜನ ದೇವರಿಗೆ ದುಡ್ಡಿನ ಆಸೆ ತೋರಿಸಿ, ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಬನ್ನಿ ಈ ವಿಶೇಷ ದೇವಸ್ಥಾನ ಯಾವುದು ? ಅದು ಎಲ್ಲಿದೆ ? ಎಂಬುದನ್ನು ತಿಳಿದುಕೊಳ್ಳೋಣ.

ದುಡ್ಡಿನ ದೇವರು ಮತ್ತೆ ಇನ್ನ್ಯಾರು ಅಲ್ಲ. ಅದು ಗಾಣಗಟ್ಟಿಯ ಮಾಯಮ್ಮ ದೇವಿ ದೇವಸ್ಥಾನ. ಶಕ್ತಿ ದೇವತೆ ಮಾಯಮ್ಮದೇವಿ ಇರುವ ಸ್ಥಳ ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲೂಕಿನಲ್ಲಿ ಇರುವ ಗಾಣಗಟ್ಟಿ. ಗಾಣಗಟ್ಟಿ ಗ್ರಾಮದಲ್ಲಿ ತಾಯಿ ಮಾಯಮ್ಮಳ ದೇವಸ್ಥಾನವಿದ್ದು, ಬಳ್ಳಾರಿಯ ಜಿಲ್ಲಾ ಕೇಂದ್ರದಿಂದ ಸುಮಾರು 120 ಕಿಲೋ ಮೀಟರ್ ದೂರದಲ್ಲಿದೆ.
ಗಾಣಗಟ್ಟಿಯ ಗ್ರಾಮದೇವತೆ ಇಷ್ಟಾರ್ಥಗಳನ್ನು ಈಡೇರಿಸುವ ಮಹಾಮಾತೆಯಾಗಿದ್ದಾಳೆ. ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ತಾಯಿ ಕೊಲ್ಹಾಪುರದ ಮಹಾಲಕ್ಷ್ಮಿಯ ಪ್ರತಿರೂಪ ಎಂದು ಹೇಳಲಾಗುತ್ತದೆ. ಮಾಯಮ್ಮ ಯಾವಾಗ ಇಲ್ಲಿ ನೆಲೆಸಿದಳು ಎನ್ನುವ ಬಗ್ಗೆ ನಿಖರವಾದ ದಾಖಲೆಗಳು ಇಲ್ಲ. ಆದರೆ ನೂರಾರು ವರ್ಷಗಳ ಹಿಂದೆ ಕೋಣದ ವ್ಯಾಪಾರಿಗಳ ಜೊತೆಗೆ ಇಲ್ಲಿಗೆ ಬಂದು ನೆಲೆಸಿದ್ದಾಳೆ ಎನ್ನುವುದು ಇಲ್ಲಿನ ಸ್ಥಳ ಪುರಾಣವಾಗಿದೆ.
ಇಲ್ಲಿನ ಜನಗಳಲ್ಲಿ ಇರುವ ನಂಬಿಕೆಯ ಪ್ರಕಾರ , ಮಾಯಮ್ಮ ದೇವಿಯನ್ನು ಕೋಣದ ವ್ಯಾಪಾರಿಗಳಿಂದ ಇಲ್ಲಿಗೆ ಬಂದು ನೆಲೆಸಿದ್ದಾಳೆ. ಕೊಲ್ಲಾಪುರದಲ್ಲಿ ನಡೆಯುವ ಕೋಣಗಳ ವ್ಯಾಪಾರಕ್ಕೆ ಬಂದ ವ್ಯಾಪಾರಿಗಳು ಎಮ್ಮೆ ,ಕೋಣಗಳನ್ನು ಕೊಂಡುಕೊಂಡು ಗಾಣಗಟ್ಟಿ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದರಂತೆ. ಕೋಣಗಳ ಮೇಲೆ ತಮ್ಮ ಸರಕು ಸರಂಜಾಮುಗಳನ್ನು ಹೇರಿಕೊಂಡು ಹೋಗುವಾಗ ತೂಕದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿತ್ತಂತೆ. ಕೋಣದ ಮೇಲಿನ ಭಾರವನ್ನು ಸರಿದೂಗಿಸಲು ಮತ್ತೊಂದು ಕಡೆ ಒಂದು ಕಲ್ಲನ್ನು ಹೇರಿಕೊಂಡು ಹೊರಟರಂತೆ. ಮಾರ್ಗ ಮಧ್ಯೆ ಗಾಣಗಟ್ಟಿಯಲ್ಲಿ ತಂಗಿದ್ದ ವ್ಯಾಪಾರಿಗಳ ತೂಕ ಕಡಿಮೆಯಾದ ಮೇಲೆ ಕಲ್ಲನ್ನು ಇಲ್ಲೇ ಬಿಟ್ಟು ಹೋದರಂತೆ. ಕತ್ತಲಲ್ಲಿ ಆ ಕಲ್ಲನ್ನು ನೋಡದೆ ತಿಪ್ಪೆಯ ಮೇಲೆ ಎಸೆದು ಕೋಣದ ವ್ಯಾಪಾರಿಗಳು ಮುಂದೆ ಸಾಗಿದರಂತೆ. ಆದರೆ ಆ ಕಲ್ಲು ದೇವಿಯ ಆಕಾರವನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ.

 

 

 

ಸ್ವಲ್ಪ ದಿನಗಳಲ್ಲೇ ಮಾಯಮ್ಮ ಊರಿನ ಓರ್ವ ಬಾಲಕಿಯ ಮೈಮೇಲೆ ಆವಾಹನೆಯಾಗಿ, ಗುಡಿ ಕಟ್ಟಿಸುವಂತೆ ಗ್ರಾಮಸ್ಥರಲ್ಲಿ ಕೇಳಿದ್ದಳಂತೆ. ದೇವಿಯ ಅಣತಿಯಂತೆ ಆ ಮೂರ್ತಿ ಇರುವ ಜಾಗದಲ್ಲಿ ಒಂದು ಗುಡಿಯನ್ನು ಕಟ್ಟಿದರಂತೆ . ಅಂದಿನಿಂದ ಗಾಣಗಟ್ಟಿಯಲ್ಲಿ ನೆಲೆಸಿದ ಮಾಯಮ್ಮ ಲಕ್ಷಾಂತರ ಭಕ್ತರ ಸಮೂಹವನ್ನು ಹೊಂದಿದ್ದಾಳೆ. ಮಾಯಮ್ಮನಿಗೆ ಹರಕೆಯನ್ನು ಹೊತ್ತರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಲಕ್ಷಾಂತರ ಭಕ್ತರಲ್ಲಿದೆ.
ವಿಪರ್ಯಾಸ ಎಂದರೆ ಈಕೆಗೆ ದುಡ್ಡು ಎಂದರೆ ಪಂಚಪ್ರಾಣ. ಗಾಣಗಟ್ಟಿಯಲ್ಲಿ ಮಾಯಮ್ಮನಿಗೆ ದುಡ್ಡಿನ ಹರಕೆ ಕಟ್ಟಿಕೊಂಡರೆ ಅದು ಯಾವುದೇ ಕೆಲಸವಾದರೂ ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಇಲ್ಲಿನ ದೇವಿಗೆ ದುಡ್ಡೇ ಅಭಿಷೇಕ, ದುಡ್ಡೆ ಅಭಿಷೇಕ ಹೀಗೆ ಹಣದಿಂದ ಅಲಂಕಾರ ಮಾಡಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಈ ಮಾಯಮ್ಮ ದುಡ್ಡಿನ ದೇವತೆಯಾಗಿದ್ದಾಳೆ.

 

ಮಂಗಳವಾರ,ಶುಕ್ರವಾರ ಬಂದು ಹರಕೆ ತೀರಿಸುತ್ತಾರೆ.ಆದರೆ ಬೇರೆ ದೇವರುಗಳಿಗೆ ವಿಶೇಷ ಪೂಜೆ,ಅಭಿಷೇಕ, ಪ್ರಾಣಿ ಬಲಿ ಕೊಟ್ಟು ಹರಕೆ ತೀರಿಸಿದರೆ, ಇಲ್ಲಿ ತಮ್ಮ ಶಕ್ತಿಯಾನುಸಾರ ತಮ್ಮ ದುಡ್ಡಿನಿಂದ ದೇವಿಗೆ ಅಲಂಕಾರ ಮಾಡಿಸುತ್ತಾರೆ.ದೇವಿಯ ಕೊರಳಿಗೆ 10 ರೂಪಾಯಿ ನೋಟಿನಿಂದ ಹಿಡಿದು ಸಾವಿರ ರೂಪಾಯಿ ನೋಟಿನ ಅಲಂಕಾರ ಮಾಲೆ ಮಾಡಿ ದೇವಿಯ ಕೊರಳಿಗೆ ಹಾರ ಹಾಕುವ ಮೂಲಕ ದೇವಿಯ ಹರಕೆಯನ್ನು ತೀರಿಸುವುದು ಇಲ್ಲಿನ ವಿಶೇಷ.
ಮಾಯಮ್ಮ ದೇವಿ ಭಕ್ತರ ಸಮಸ್ಯೆಗಳನ್ನು ಅರಿತು ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆ ಲಕ್ಷಾಂತರ ಭಕ್ತರಲ್ಲಿದೆ.ಮದುವೆಯಾಗಿ ಮಕ್ಕಳಾಗದೆ ಇಲ್ಲದವರಿಗೆ,ಕೆಲಸ ಇಲ್ಲದವರಿಗೆ ನೌಕರಿ ಬೇಕಾದರೆ,ದಂಪತಿಗಳಿಗೆ ದಾಂಪತ್ಯ ಸರಿ ಹೋಗಬೇಕಾದರೆ,ಹೊಸ ಕೆಲಸ ಆರಂಭಿಸ ಬೇಕಾದರೆ ಹೀಗೆ ಭಕ್ತರ ಸಮಸ್ಯೆಗಳನ್ನು ಈಡೇರಿಸುವ ಈ ದೇವಿ ಈಡೇರಿಸುತ್ತಾಳೆ.
ಹೀಗಾಗಿ ಇಂದಿಗೂ ಸಾವಿರಾರು ಭಕ್ತರು,ದೇವಿಗೆ ಇಷ್ಟಾರ್ಥಗಳನ್ನು ಈಡೇರಿಸು ಎಂದು ಹರಕೆಯನ್ನು ಹೊರುತ್ತಾರೆ.ಈ ದೇವಿಯ ಬಳಿ ನಿತ್ಯ ಸಾವಿರಾರು ಜನರು ತಮ್ಮ ಕಷ್ಟಗಳಿಗಾಗಿ ಹರಕೆ ಹೊರುತ್ತಾರೆ.ಅದರಲ್ಲಿ ಬಹುತೇಕ ಮಹಿಳೆಯರು ಮಕ್ಕಳ ಫಲ ಸಿಗಲಿ ಎಂದು ಹರಕೆ ಹೊರುತ್ತಾರೆ.ಹೀಗೆ ಹರಕೆ ಹೊತ್ತ ಮಹಿಳೆಯರಿಗೆ ವರ್ಷದೊಳಗೆ ಸಂತಾನ ಭಾಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.ಜೊತೆಗೆ ಹೀಗೆ ಹರಕೆ ಹೊತ್ತವರು ಮಕ್ಕಳಾದ ನಂತರ ಮಗುವಿನೊಂದಿಗೆ ಬಂದು ಮಾಯಮ್ಮ ದೇವಿಗೆ ಹರಕೆ ತೀರಿಸಬೇಕು.

 

 

 

ಹರಕೆ ಎಂದರೆ ಒಂದು ಮಗುವಿನ ತೂಕದಷ್ಟು ಹಣವನ್ನು ಆ ದೇವತೆಗೆ ಅರ್ಪಿಸಬೇಕು.ಹೀಗಾಗಿ ಸಂತಾನ ಫಲ ಪಡೆದ ಹಲವಾರು ಜನರು ಪ್ರತಿ ಮಂಗಳವಾರ,ಶುಕ್ರವಾರ, ಪ್ರತಿ ಅಮಾವಾಸ್ಯೆ, ಪೌರ್ಣಮಿಯ ದಿನ ದೇವಿಯ ಸನ್ನಿಧಿಗೆ ಬಂದು ತುಲಾ ಭಾರ ನೆಡೆಸುವ ಮೂಲಕ ದೇವಿಯ ಹರಕೆ ಪೂರೈಸುತ್ತಾರೆ.ಗಾಣಗಟ್ಟಿ ಮಾಯಮ್ಮನ ಸನ್ನಿಧಿಯಲ್ಲಿ ನೆಡೆಯುವ ಮತ್ತೊಂದು ವಿಶೇಷ ಎಂದರೆ ಅದು ಚೀಟಿ ಪವಾಡ.ಯಾವುದಾದರೂ ಕೆಲಸಕ್ಕೆ ಕೈ ಹಾಕುವ ಮುನ್ನ ದೇವಿಯ ಬಳಿ ಪಲಕ್ಕಿಯ ಚೀಟಿ ಪವಾಡ ಕೇಳಬಹುದು.ಭಕ್ತರು ಅಂದುಕೊಂಡ ಕೆಲಸ ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವುದರ ಬಗ್ಗೆ 2 ಚೀಟಿಯನ್ನು ದೇವಾಲಯದ ಸುತ್ತ ಮುತ್ತಲಿನಲ್ಲಿ ಇಡಬೇಕು.ಆಗ ದೇವಿಯ ಪಲ್ಲಕ್ಕಿ ಚೀಟಿಯ ಬಳಿ ಬಂದರೆ ಭಕ್ತರ ಕೆಲಸ ಆಗುತ್ತೆ ಅಥವಾ ಇಲ್ಲ ಎನ್ನುವ ಪ್ರತೀತಿ ಇದೆ.ಹೀಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಯ ಸನ್ನಿಧಿಯಲ್ಲಿ ಚೀಟಿ ಪವಾಡ ನೆಡೆಯುವುದು ತುಂಬಾ ವಿಶೇಷವಾಗಿದೆ.ಹೀಗೆ ಪಲ್ಲಕ್ಕಿ ಪವಾಡ ನೋಡುವುದಕ್ಕೆ ಸಾವಿರಾರು ಭಕ್ತರು ಅಗಮಿಸುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

ಹೀಗೆ ಸಾವಿರಾರು ಭಕ್ತರು ತಮ್ಮ ಕೆಲಸ ಕಾರ್ಯಗಳ ಬಗ್ಗೆ ಇಲ್ಲಿ ಚೀಟಿ ಪವಾಡ ಕೇಳುತ್ತಾರೆ.ರಾಜ್ಯದ ಯಾವ ಭಾಗಗಳಲ್ಲಿಯೂ ಕೂಡ ಈ ರೀತಿ ಚೀಟಿ ಪವಾಡ ನೆಡೆಯುವುದಿಲ್ಲ.ಅದರೆ ಮಾಯಮ್ಮ ದೇವಿ ದೇವಾಲಯದಲ್ಲಿ ಮಾತ್ರ ಈ ಪಾವಾಡ ನೆಡೆಯುವುದು ಎನ್ನುವುದು ವಿಶೇಷವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top