fbpx
ಮನೋರಂಜನೆ

ಮುಚ್ಚಿ ಹೋಗುತ್ತಿದ್ದ ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡ ರಿಷಬ್ ಶೆಟ್ಟಿ.

ರಿಷಬ್ ಶೆಟ್ಟಿ ಮತ್ತು ಅವರ ತಂಡದವರು ಸದ್ಯ ಭರ್ಜರಿ ಗೆಲುವೊಂದರ ಸಂತಸದಲ್ಲಿದ್ದಾರೆ. ‘ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರ ಬೆರಗಾಗಿಸುವಂಥಾ ಯಶಸ್ಸಿನ ರೂವಾರಿಯಾಗಿದೆ. ಇಡೀ ರಾಜ್ಯದ ತುಂಬಾ ಈ ಕ್ಷಣಕ್ಕೂ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ.. ಕಾಸರಗೋಡಿನಲ್ಲಿ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರೋ ವಿದ್ಯಮಾನವನ್ನು ತೋರಿಸಲಾಗಿದ್ದು ಆ ಶಾಲೆಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದೇ ಚಿತ್ರದ ಪ್ರಧಾನ ಅಂಶ..

ಸಿನಿಮಾದಲ್ಲಿ ಮುಚ್ಚಿಹೋಗುತ್ತಿದ್ದ ಕನ್ನಡ ಶಾಲೆಯನ್ನ ಹೇಗೆ ಉಳಿಸಿಕೊಂಡರೋ ಅದೇ ರೀತಿ ನಿಜ ಜೀವನದಲ್ಲೂ ಕೂಡ ರಿಷಬ್ ಶೆಟ್ಟಿ ಮುಚ್ಚಿ ಹೋಗುತ್ತಿದ್ದ ಕನ್ನಡ ಶಾಲೆಯೊಂದನ್ನು ದತ್ತು ಪಡೆದುಕೊಳ್ಳುವ ಮೂಲಕ ಉಳಿಸಿಕೊಂಡಿದ್ದಾರೆ..

ಸಹಿಪ್ರಾ ಶಾಲೆ ಕಾಸರಗೋಡು ಸಿನಿಮಾ ಚಿತ್ರೀಕರಣಗೊಂಡಿದ್ದು ಮಂಜೇಶ್ವರ ಮತ್ತು ಮಂಗಳೂರು ಮಧ್ಯ ಭಾಗದಲ್ಲಿರುವ ಕೈರಂಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಈ ಕನ್ನಡ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿತ್ತು. ಇದೀಗ ಆ ಶಾಲೆಯನ್ನು ರಿಷಬ್ ಶೆಟ್ಟಿ ದತ್ತು ಪಡೆದುಕೊಂಡಿದ್ದಾರೆ. ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸು ಹೊತ್ತಿದ್ದಾರೆ.

ರಿಷಬ್ ಶೆಟ್ಟಿ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ವೇಳೆಯಲ್ಲಿ 42 ಮಂದಿ ವಿದ್ಯಾರ್ಥಿಗಳಿದ್ದರು. ಆದರೆ ಈ ವರ್ಷ ಕೇವಲ 25 ಮಂದಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದರು. ವಿಪರ್ಯಾಸವೆಂದರೆ ಒಂದನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿತ್ತು. ಬೇರೆ ದಾರಿಯೇ ಇಲ್ಲದೆ ಕೆಲವೇ ವರ್ಷಗಳಲ್ಲಿ ಈ ಶಾಲೆಯನ್ನು ಮುಚ್ಚಬೇಕಾಗುತ್ತಿತ್ತು. ಇಂಥಾ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸನ್ನು ಹೊತ್ತಿರುವ ರಿಷಬ್ ಶೆಟ್ಟಿ ಅದಕ್ಕಾಗಿ ಗ್ರಾಮಸ್ಥರ ನೆರವನ್ನು ಕೋರಿದ್ದಾರೆ. ಅಲ್ಲದೆ ತಿಂಗಳು ಹದಿನೆಂಟನೇ ತಾರೀಕಿನಂದು ಆ ಶಾಲೆಯಲ್ಲಿ ನಡೆಯುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಶಾಲೆಯ ಮಕ್ಕಳ ಪೋಷಕರಲ್ಲಿ ನೆರವು ನೀಡಲು ಕೇಳಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top