ಸಮಾಚಾರ

“ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೇ ಬಿಜೆಪಿಗೆ ಅಧಿಕಾರ ಸಿಗಲಿಲ್ಲ” ಸಚಿವ HD ರೇವಣ್ಣ.

ಭಾರೀ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಮಾಡಿಯೇ ತೀರುತ್ತೇವೆ ಅಂತ ಹೇಳಿರುವ ರಾಜ್ಯ ಸರ್ಕಾರ ಇದೀಗ ಆಚರಣೆಗೂ ರೆಡಿಯಾಗಿದೆ. ಆದರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಕುರಿತ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಇಂದು ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೆಸರು ಪ್ರಕಟಿಸಲಾಗಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.

ಈ ನಡುವೆ ಸಚಿವ HD ರೇವಣ್ಣ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. “ಬಿಜೆಪಿಗೆ ಪ್ರತಿಭಟನೆ ನಡೆಸಲು ಒಂದು ಕಾರಣ ಬೇಕಿದೆ, ಅದಕ್ಕಾಗಿ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸುತ್ತಿದೆ.. 104 ಸೀಟು ಬಂದರೂ ಬಿಜೆಪಿಗೆ ಅಧಿಕಾರ ತಪ್ಪಲು ಟಿಪ್ಪು ಸುಲ್ತಾನ್ ಶಾಪವೇ ಕಾರಣ. ಟಿಪ್ಪು ಜಯಂತಿ ಆಚರಿಸುತ್ತಿರುವುದರಿಂದ ಕಾಂಗ್ರೆಸ್ ಮತ್ತೆ ಸಮ್ಮಿಶ್ರ ಸರಕಾರದಲ್ಲಿ ಅಧಿಕಾರದಲ್ಲಿದೆ” ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕಿಡಿಕಾರಿದ್ದಾರೆ.

ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ನೀವೇ ಹೇಳಿದ್ರಂತೆ ಎಂದು ಮಾದ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ರೇವಣ್ಣ ತಾವು ಕೂಡ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. “ಟಿಪ್ಪು ಜಯಂತಿ ಆಚರಣೆಗೆ ವಿರೋಧ ಮಾಡಿದ್ದರಿಂದಲೇ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ.. ನಾನು ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದರೆ ಅಧಿಕಾರ ಹೋಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ ಎಂಬುದು ಸುಳ್ಳು.. ಆರೋಗ್ಯದ ಕಾರಣದಿಂದ ಅವರು ಟಿಪ್ಪು ಜಯಂತಿಗೆ ಹಾಜರಾಗುತ್ತಿಲ್ಲ ಅಷ್ಟೇ,, ನಾನೂ ಹಾಸನದಲ್ಲಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸುತ್ತೇನೆ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top