fbpx
ಸಮಾಚಾರ

ಅಲೆಮಾರಿ ಬುಡಕಟ್ಟು ಜನಾಂಗದವರ ಪರ ಹೋರಾಟಕ್ಕಿಳಿದ ನಟ ಚೇತನ್​: ಸರ್ಕಾರದ ವಿರುದ್ಧ ವಾಗ್ದಾಳಿ.

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ ಕೂರುವ ಹೀರೋಗಳ ನಡುವೆ ಕೆಲವೇ ಕೆಲವು ನಟರು ಅನೇಕ ಸಾಮಾಜಿಕ ಸಮಸ್ಯೆಗಳು ಮತ್ತು ಶೋಷಿತರ ನೋವಿಗೆ ಮಿಡಿಯುತ್ತಾ ಬಂದಿದ್ದಾರೆ. ಅಂಥಾ ಸಾಮಾಜಿಕ ಕಳಕಳಿ ಹೊಂದಿರೋ ಕೆಲವೇ ಕೆಲವು ನಟರಲ್ಲಿ ಆ ದಿನಗಳು ಖ್ಯಾತಿಯ ಚೇತನ್ ಕೂಡ ಒಬ್ಬರು. ಆ ದಿನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಚೇತನ್ ತಮ್ಮ ಜನಪರ ಸಾಮಾಜಿಕ ಕಾಳಜಿಯಿಂದ ಸಿನಿಮಾದಾಚೆಗೂ ಚಾಲ್ತಿಯಲ್ಲಿದ್ದಾರೆ. ಜೀವಪರವಾದ ಕೆಲಸ, ಕಾರ್ಯಕ್ರಮಗಳಿಗೆ ಸದಾ ಒತ್ತಾಸೆಯಾಗಿ ನಿಲ್ಲುತ್ತಾ ಬಂದಿರುವ ಚೇತನ್ ಇತ್ತೀಚಿಗೆ ಅನೇಕ ವಿಷಯಗಳಿಗೆ ಸುದ್ದಿಯಾಗುತ್ತಿದ್ದಾರೆ.

ವರ್ಷಾಂತರಗಳಿಂದಲೂ ಅಧಿವಾಸಿಗಳ, ಹಿಂದುಳಿದವರ, ಬುಡಕಟ್ಟು ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಚೇತನ್ ನೆನ್ನೆ ಯಾದಗಿರಿಯ ಬುಡಕಟ್ಟು ಜನರನ್ನು ಭೇಟಿಯಾಗಿದ್ದಾರೆ. ಕೆಲಹೊತ್ತು ಬುಡಕಟ್ಟು ಪ್ರದೇಶದಲ್ಲಿ ಕಳೆದ ಚೇತನ್ ಅಲ್ಲಿರುವ ಜನರ ಸಮಸ್ಯೆ, ನೋವನ್ನು ಆಲಿಸಿದರು. ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲೇ ಸಮಸ್ಯೆಗಳಿಗೆ ಕೈಜೋಡಿಸುತ್ತೇವೆ ಎಂದು ಹೇಳಿದರು..

 

 

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಸರ್ಕಾರ ಶ್ರೀಮಂತರ ಪರವಾಗಿ, ಭೂಮಾಲೀಕರ ಪರವಾಗಿ ಕೆಲಸ ಮಾಡುತ್ತಿವೆ. ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಬುಲೆಟ್ ಟ್ರೈನ್ ಬಗ್ಗೆ ಮಾತನಾಡುತ್ತಾರೆ ಆದರೆ ಬಡವರಿಗೆ ವಾಸಿಸಲು ಸರಿಯಾದ ಮನೆಯ ಸೌಲಭ್ಯವೇ ಇಲ್ಲ. ಇಲ್ಲಿನ ಅವ್ಯವಸ್ಥೆ ಕಂಡು ನನಗೆ ತುಂಬ ಬೇಜಾರಾಗಿದೆ. ಸರ್ಕಾರ ಕೂಡಲೇ ಸ್ಪಂದಿಸಿ ಮನೆ, ಶಿಕ್ಷಣ, ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಬಗ್ಗೆ ಈಗಾಗಲೇ ನಾನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ.” ಎಂದು ಚೇತನ್ ಹೇಳಿದರು..

 

 

ಚಿತ್ರರಂಗದಲ್ಲಿ ಸ್ಟಾರ್‌ಗಿರಿಯನ್ನು ತಲೆ ಸೇರಿದಂತೆ ಸಕಲ ಪಾರ್ಟುಗಳಿಗೂ ತುಂಬಿಕೊಂಡು, ಸವರಿಕೊಂಡು ಮೆರೆದಾಡುವವರೇ ಹೆಚ್ಚು. ಇಂಥವರಿಗೆಲ್ಲ ಜನ ಸಾವಿರ ಸಂಕಷ್ಟಗಳ ನಡುವೆಯೂ ಕಾಸು ಹೊಂದಿಸಿ ಚಿತ್ರಗಳನ್ನು ನೋಡೋದರಿಂದಲೇ ತಮಗೆ ಸ್ಟಾರ್‌ಗಿರಿ ಅಮರಿಕೊಂಡಿದೆ ಎಂಬ ಕನಿಷ್ಠ ಸೌಜನ್ಯವೂ ಮರೆತು ಹೋಗಿರುತ್ತದೆ. ಆದ್ದರಿಂದಲೇ ಜನರ ಸಮಸ್ಯೆಗಳಿಗೆ ಮಿಡಿಯುವ ಮನಸ್ಥಿತಿ ಬಹುತೇಕರಿಗೆ ಇಲ್ಲವಾಗಿದೆ. ಇಂಥಾ ವಾತಾವರಣದ ನಡುವೆ ನಟ ಚೇತನ್’ರಂತಹ ನಟರ ನಡೆ ನಿಜಕ್ಕೂ ಮೆಚ್ಚುವಂಥಾದ್ದು…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top